ದೊಡ್ಡಬಳ್ಳಾಪುರದೊಂದಿಗೆ ರಾಷ್ಟ್ರಪಿತನ ಐತಿಹಾಸಿಕ ನಂಟು

Team Udayavani, Oct 2, 2019, 3:00 AM IST

ದೊಡ್ಡಬಳ್ಳಾಪುರ: ಭಾರತದ ರಾಷ್ಟ್ರಪಿತ, ಅಹಿಂಸೆಯ ತತ್ವದ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಗೂ ದೊಡ್ಡಬಳ್ಳಾಪುರ ಐತಿಹಾಸಿಕ ನಂಟಿದೆ.ಗಾಂಧೀಜಿ ನಮ್ಮೂರಿಗೆ ಬಂದಿದ್ದರು ಎಂದು ಹೇಳಿಕೊಳ್ಳುವುದೇ ಇಲ್ಲಿನ ಹಿರಿರಯ ನಾಗರಿಕರಿಗೆ ಹೆಮ್ಮೆಯ ವಿಷಯ. ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ ಗಾಂಧಿ ಅವರ ವ್ಯಕ್ತಿತ್ವ ಕೋಟ್ಯಾಂತರ ಜನರಿಗೆ ಪ್ರೇರಣೆ ಆಗಿದೆ. ಮ ಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಸಂದ ರ್ಭದಲ್ಲಿ ಗಾಂಧೀಜಿ ದೊಡ್ಡಬಳ್ಳಾಪುರ ಹಾಗೂ ತಾಲೂಕಿನ ಸಮೀಪದ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭಗಳ ಕುರಿತು ಒಂದು ಮೆಲುಕು ಇಲ್ಲಿದೆ.

ದೊಡ್ಡಬಳ್ಳಾಪುರದಲ್ಲಿ ಗಾಂಧಿ: ಮಹಾತ್ಮ ಗಾಂಧೀಜಿ 1934ರ ಜನವರಿ 4 ರಂದು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದರು.ನಾವು ಗಾಂಧೀಜಿಯನ್ನು ನೋಡಿದ್ದೇವೆ ಎಂದು ಹೇಳುವಾಗ ಇಲ್ಲಿನ ಹಿರಿತಲೆಗಳಿಗೆ ಏನೋ ಧನ್ಯತಾಭಾವ. ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಜನಸಂಖ್ಯೆ ಕೇವಲ 25 ಸಾವಿರ. ಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಬಂದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ, ರುಮಾಲೆ ಚನ್ನಬಸವಯ್ಯ, ರುಮಾಲೆ ಭದ್ರಣ್ಣ, ಎಚ್‌.ಮುಗುವಾಳಪ್ಪ, ನಾ.ನಂಜುಂಡಯ್ಯ ಹೂ ಮಾಲೆ ಹಾಕಿ ಆತ್ಮೀಯ ಸ್ವಾಗತ ಕೋರಿದ್ದರು.

ಪುರಸಭೆಯವರು ಗಾಂಧೀಜಿಗೆ ಭಿನ್ನವತ್ತಳೆ ನೀಡಿ ಸನ್ಮಾನಿಸಿ, ಹರಿಜನ ನಿಧಿಗಾಗಿ ಅಂದಿನ ಕಾಲದಲ್ಲಿಯೇ 500ರೂಗಳನ್ನು ಸಂಗ್ರ ಹಿಸಿ ನೀಡಿದ್ದರು. ಅದನ್ನು ಸ್ವೀಕರಿಸಿದ ಗಾಂಧೀಜಿಯವರು ಸ್ಥಳೀಕರು ತೋರಿದ ಆದರಾಭಿಮಾನಕ್ಕೆ ವಂದಿಸಿದ್ದರು. ಗಾಂಧೀಜಿಯವರು ಉಪನ್ಯಾಸ ನೀಡಿದ ಪ್ರದೇಶಕ್ಕೆ ಅವರ ಸ್ಮರಣಾರ್ಥವಾಗಿ ಗಾಂಧಿನಗರ ಎಂದು ನಾಮಕರಣ ಮಾಡಲಾಗಿದೆ. ಇಂದಿಗೂ ಹಳೇ ಬಸ್‌ ನಿಲ್ದಾಣ ಸಮೀಪದ ಪೇಟೆಗೆ ಗಾಂಧಿನಗರ ಹೆಸರಿದೆ. ಗಾಂಧೀಜಿ ಅವರು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದಾಗ ರುಮಾಲೆ ಭದ್ರಣ್ಣ ಮತ್ತು ಸಂಗಡಿಗರು ರುಮಾಲೆ ಛತ್ರದಲ್ಲಿ ಖಾದಿ ಬಟ್ಟೆಗಳ ಪ್ರದರ್ಶನ ಏರ್ಪಡಿಸಿದ್ದರು. ಅಂದು ಸಾವಿರಾರು ಗಾಂಧಿ ಟೋಪಿಗಳು ಮಾರಾಟವಾಗಿದ್ದವು ಎನ್ನುವುದು ಗಮನಾರ್ಹ ಸಂಗತಿ.

1924ರಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ಅಖೀಲ ಭಾರತ ಕಾಂಗ್ರೆಸ್‌ ಅಧಿವೇಶನಕ್ಕೆ ದೊಡ್ಡಬಳ್ಳಾಪುರದಿಂದಲೂ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರ ಫಲವೆಂಬಂತೆ ನಂತರದ ದಿನಗಳಲ್ಲಿ ಈ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಹೆಚ್ಚಾಗಲು ಕಾರಣವಾಯ್ತು. 1930ರಲ್ಲಿ ನಡೆದ ದಂಡಿ ಉಪ್ಪಿನ ಸತ್ಯಾಗ್ರಹದಲ್ಲೂ ದೊಡ್ಡಬಳ್ಳಾಪುರದಿಂದ ರುಮಾಲೆ ಚನ್ನಬಸವಯ್ಯ, ಎಚ್‌.ಮುಗುವಾಳಪ್ಪ ಭಾಗವಹಿಸಿದ್ದರು.ಹೋರಾಟದ ಭಾಗವಾಗಿ ಇಲ್ಲಿಯೂ ದೇಶಿ ಉಪ್ಪನ್ನು ಮಾರಾಟ ಮಾಡಲಾಯಿತಲ್ಲದೆ, ವರ್ತಕರು ವಿದೇಶಿ ವಸ್ತುಗಳನ್ನು ಮಾರಾಟ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿದ್ದರು.

ನಂದಿ ಬೆಟ್ಟಕ್ಕೆ ಗಾಂಧೀಜಿ: ತಾಲೂಕಿಗೆ ಸಮೀಪವೇ ಇರುವ ನಂದಿಬೆಟ್ಟದಲ್ಲಿ 1927ರಲ್ಲಿ 45 ದಿನ ಹಾಗೂ 1936ರಲ್ಲಿ ಮೂರು ವಾರಗಳ ಕಾಲ ಗಾಂದೀಜಿ ತಂಗಿದ್ದರು. ಗಾಂಧಿ ಅವರಿಗೆ ಅಪೊಪ್ಲಿಕ್ಸ್‌(ಲಕ್ವಾ)ಗೆ ಸಂಬಂಧಿಸಿದ ಕಾಯಿಲೆ ಹಾಗೂ ರಕ್ತದೊತ್ತಡ ಧಿಕವಾಗಿದ್ದು, ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಕುಟುಂಬ ವೈದ್ಯ ಡಾ. ಜಿ.ಜೀವರಾಜ ಮೆಹತಾ ನೀಡಿದ ಸಲಹೆ ಮೇರೆಗೆ ನಂದಿ ಗಿರಿಧಾಮವೇ ಪ್ರಶಸ್ತ ಸ್ಥಳವೆಂದು ತೀರ್ಮಾನಿಸಿ ಇಲ್ಲಿಗೆ ಬಂದಿದ್ದರು. ಮಹಾ ಚಟುವಟಿಕೆಯ ವ್ಯಕ್ತಿಯಾಗಿದ್ದ ಅವರು, ತಾವು ತಂಗಿದ್ದಷ್ಟೂ ಕಾಲ, ಇಡೀ ಗಿರಿಯನ್ನು ಚೈತನ್ಯಮಯಗೊಳಿಸಿದ್ದರು.

ಗಾಂಧೀಜಿ ಅವರ ಉಸ್ತುವಾರಿಯನ್ನು ಮಹಾದೇವ ದೇಸಾಯಿ, ರಾಜಗೋಪಾಲಚಾರಿ ಹಾಗೂ ಗಂಗಾಧರರಾವ್‌ ದೇಶಪಾಂಡೆ ವಹಿಸಿಕೊಂಡಿದ್ದರು. ಏಪ್ರಿಲ್‌ 20 ರಂದು ಗಾಂಧಿ, ಕಸ್ತೂರಿಬಾ ಮತ್ತು ಹಂಜಾ ಹುಸೇನ್‌, ಎಲ್ಲರೂ ಗಿರಿಧಾಮದ ತಪ್ಪಲಿನ ಸುಲ್ತಾನ್‌ಪೇಟೆಗೆ ಬಂದಿಳಿದರು. ಇಲ್ಲಿಂದ ಗಿರಿಯೇ ಮೇಲಕ್ಕೆ ಇವರನ್ನು ಡೋಲಿಗಳ ಮೂಲಕ ಕರೆದೊಯ್ಯಲಾಯಿತು. ಕನ್ನಿಂಗ್‌ ಹ್ಯಾಂ ಭವನದಲ್ಲಿ ಗಾಂಧೀಜಿ ತಂಗಿದ್ದರು. ಅಂದು ಬೆಟ್ಟದಲ್ಲಿ ಜನಜಾತ್ರೆಯೇ ಸೇರಿತ್ತು.
ಗಿರಿಧಾಮದಲ್ಲಿ ಬಂದುಹೋಗುವವರ ಸಂದಣಿ ಹೆಚ್ಚಿ, ಗಾಂಧಿ ಆರೋಗ್ಯ ಕೆಟ್ಟಿದ್ದೂ ಉಂಟು.

ಆದರೆ ವೈದ್ಯರ ಕಟ್ಟುನಿಟ್ಟಿನ ನಿಗಾದಿಂದ ಅವರು ಬಹುಬೇಗ ಚೇತರಿಸಿಕೊಂಡರು. ಜೂನ್‌ 5 ರಂದು ಗಾಂಧೀಜಿ ಬೆಟ್ಟದಿಂದ ಬೆಂಗಳೂರಿಗೆ ತೆರಳಿದರು. ಇಲ್ಲಿರುವ ಯೋಗನಂದೀಶ್ವರ ದೇವಾಲಯಕ್ಕೆ ಹರಿಜನರ ಪ್ರವೇಶ ನಿಷಿದ್ಧ ಎಂದು ತಿಳಿದು, ಅಲ್ಲಿಗೆ ಭೇಟಿ ನೀಡಬೇಕೆಂಬ ಆಹ್ವಾನವನ್ನು ಗಾಂಧಿ ತಿರಸ್ಕರಿಸಿದ್ದರು. .1936ರಲ್ಲಿ ಮತ್ತೂಮ್ಮೆ ಹಠಾತ್ತನೆ ರಕ್ತದೊತ್ತಡ ಅಧಿಕವಾಗಿ ನಂದಿಗಿರಿಧಾಮವೇ ಪ್ರಶಸ್ತ ಸ್ಥಳವೆಂದು ಮತ್ತೂಮ್ಮೆ ಇಲ್ಲಿಗೆ ಆಗಮಿಸಿದ್ದರು. ಗಾಂಧೀಜಿಯನ್ನು ಡೋಲಿಯಲ್ಲಿ ಹೊತ್ತು ಸಾಗಲು ಎಲ್ಲರೂ ಸಜ್ಜಾಗಿದ್ದರು.

ಆದರೆ ಕುಡುವತಿ ಗ್ರಾಮದಿಂದ ಇರುವ ಕುದುರೆ ರಸ್ತೆಯಲ್ಲಿ ಗಾಂಧಿ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದರು. ಈ ಬಾರಿ ಮೂರು ವಾರ ತಂಗಿದ್ದರು. ಇದೇ ವೇಳೆ ಖ್ಯಾತ ವಿಜ್ಞಾನಿ ಭಾರತರತ್ನ ಸರ್‌ ಸಿ.ವಿ. ರಾಮನ್‌ ಕೂಡ ಬೆಟ್ಟಕ್ಕೆ ಬಂದು ಮಹಾತ್ಮರೊಡನೆ ಕೆಲ ದಿನ ತಂಗಿದ್ದರು. ಗಾಂಧಿ ತಂಗಿದ್ದ ಕನ್ನಿಂಗ್‌ಹ್ಯಾಂ ಭವನಕ್ಕೆ 1949ರಲ್ಲಿ ಗಾಂಧೀ ನಿಲಯ ಎಂದು ನಾಮಕರಣ ಮಾಡಲಾಯಿತು. ಕಾಂಗ್ರೆಸ್‌ ಶಕ್ತಿ ವರ್ಧನೆಯಲ್ಲಿ ಹಾಗೂ ಸ್ವಾತಂತ್ರ್ಯ ಹೋರಾಟ ವ್ಯಾಪ್ತಿ ವಿಸ್ತರಿಸುವಲ್ಲಿ ಗಾಂಧೀಜಿ ಅವರ ನಂದಿಬೆಟ್ಟದ ವಾಸ್ತವ್ಯ ಪ್ರಮುಖ ಕಾರಣವಾಯಿತು.

ಗಾಂಧಿ ಸ್ಮಾರಕ ಕಾಣ ಸಿಗಲ್ಲ: ನಂದಿಗಿರಿಯನ್ನು ನಿರ್ವಹಣೆ ಮಾಡುತ್ತಿರುವ ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ ಅತಿಥೇಯ ಸಂಸ್ಥೆಗಳಿಗೆ ಗಾಂಧೀ ಬಂದೋಗಿರುವ ವಿಚಾರ ಗೊತ್ತಿಲ್ಲ. ಗಾಂಧೀ ನಿಲಯ ಎಂಬ ಹೆಸರು ಹಾಗೂ ಅದರ ಮುಂದೆ ನಗುತ್ತಿರುವ ಗಾಂಧಿ ಪ್ರತಿಮೆಯೊಂದು ಕುರುಹು ಬಿಟ್ಟರೆ ಈ ಅತ್ಯಾಧುನಿಕ ವಸತಿ ಗೃಹದಲ್ಲಿ ಇತಿಹಾಸದ ಯಾವ ಕುರುಹುಗಳೂ ಇಲ್ಲ ಎನ್ನುವುದು ಬೇಸರದ ಸಂಗತಿ.

* ಡಿ. ಶ್ರೀಕಾಂತ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ