ಸಾಂಕ್ರಾಮಿಕ ರೋಗಗಳ ಅರಿವು ಮೂಡಿಸಿ

Team Udayavani, Jul 9, 2019, 3:00 AM IST

ದೇವನಹಳ್ಳಿ: ಡೆಂಘೀ ಮತ್ತು ಮಲೇರಿಯಾ, ಕ್ಷಯ ರೋಗಗಳು ಬರದಂತೆ ಎಚ್ಚರವಹಿಸಬೇಕು. ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎಸ್‌. ಕರಿಗೌಡ ತಿಳಿಸಿದರು.

ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿ ಇರುವ ಜಿಲ್ಲಾ ಸಂಕೀರ್ಣ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಡೆದ ಡೆಂಘೀ ಮತ್ತು ಮಲೇರಿಯಾ, ಕ್ಷಯ ರೋಗಗಳ ಸಂಬಂಧಿಸಿದಂತೆ ಸಭೆಯಲ್ಲಿ ಮಾತನಾಡಿದ ಅವರು, ಡೆಂಘೀ ಮತ್ತು ಮಲೇರಿಯಾ ಕಂಡು ಬಂದ ಕಡೆಗಳಲ್ಲಿ ಹೆಚ್ಚಿನ ಅಗತ್ಯ ಕ್ರಮ ಕೈ ಗೊಳ್ಳಬೇಕು ಎಂದು ಹೇಳಿದರು.

ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಿ: ಹಳೆಯ ಟೈರ್‌ ಮತ್ತು ತೆಂಗಿನ ಚಿಪ್ಪು, ಚರಂಡಿಗಳಲ್ಲಿ ನೀರು ನಿಲ್ಲದಂತೆ ನಿಗಾ ವಹಿಸಬೇಕು. ಪ್ರತಿ ಕಡೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಕ್ಷಯ ರೋಗ ಪತ್ತೆಯಾದ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಬೇಕು. ಎಲ್ಲಾ ಇಲಾಖೆಯ ಸಹಕಾರ ಪಡೆದು ಅರಿವು ಮೂಡಿಸಬೇಕು ಎಂದರು.

ಮಲೇರಿಯಾ ಮುಕ್ತಕ್ಕೆ ಕ್ರಮ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್‌ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲ್ಲಿ 2 ಮಲೇರಿಯಾ ಪ್ರಕರಣ, ಡೆಂಘೀ 03 ಹಾಗೂ ಚಿಕೂನ್‌ ಗುನ್ಯಾ 05 ಪ್ರಕರಣಗಳು ಕಂಡು ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮಲೇರಿಯಾ ಮುಕ್ತವಾಗಿಸುವ ನಿಟ್ಟಿನಲ್ಲಿ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಮನೆಯಲ್ಲಿ ನೀರನ್ನು ಸಂಗ್ರಹಿಸುವ ಪರಿಕರಗಳಾದ ಸಿಮೆಂಟ್‌ ತೊಟ್ಟಿ, ಪ್ಲಾಸ್ಟಿಕ್‌ ಡ್ರಂ ಹಾಗೂ ಮುಂತಾದವುಗಳಲ್ಲಿ ಸ್ವಚ್ಛವಾಗಿ ತೊಳೆದು ಹೊಸ ನೀರನ್ನು ಸಂಗ್ರಹಿಸಬೇಕು ಎಂದು ತಿಳಿಸಿದರು.

ಜ್ವರವನ್ನು ನಿರ್ಲಕ್ಷ್ಯ ಮಾಡಬೇಡಿ: ಸ್ವಚ್ಛಗೊಳಿಸದಿದ್ದರೆ ಅದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಚಿಕೂನ್‌ ಗುನ್ಯಾ, ಮಲೇರಿಯಾ , ಡೆಂಘೀ ಇನ್ನಿತರೆ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ನಾಗರಿಕರು ಚಿಕೂನ್‌ ಗುನ್ಯಾ, ಡೆಂಘೀ ರೋಗಗಳು ಲಾರ್ವ ಉತ್ಪತ್ತಿ ತಾಣಗಳನ್ನು ಪತ್ತೆ ಹಚ್ಚಿ ಹೇಗೆ ಉತ್ಪತ್ತಿಯಾಗುವುದು ಹಾಗೂ ಹೇಗೆ ಅದನ್ನು ನಿಯಂತ್ರಿಸಬೇಕು ಎಂದು ಕಂಡು ಹಿಡಿಯಬೇಕು. ಯಾವುದೇ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರ ಬಳಿ ಹೋಗಿ ರಕ್ತ ಪರೀಕ್ಷೆ ಮಾಡಿಸಬೇಕು ಎಂದು ಮಾಹಿತಿ ನೀಡಿದರು.

ಈ ವೇಳೆಯಲ್ಲಿ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಶಕೀಲಾ, ಡಿಡಿ ಪಿಐ ಕೃಷ್ಣ ಮೂರ್ತಿ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ