ಜಿಲ್ಲೆಯ ಮೊದಲ ಬೃಹತ್‌ ಗ್ರಾಮ ಸೌಧ

Team Udayavani, Aug 11, 2019, 3:00 AM IST

ನೆಲಮಂಗಲ: ಗ್ರಾಮೀಣರಿಗೆ ಸರ್ಕಾರಗಳ ಎಲ್ಲ ಸೇವೆಗಳನ್ನು ಒಂದೇ ಸೂರಿನಯಲ್ಲಿ ಒದಗಿಸಲು ಖಾಸಗಿ ಕಂಪನಿಗಳ ಸಾಮಾಜಿಕ ಸೇವಾ ಯೋಜನೆಯ ಅನುದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೂದಿಹಾಳ್‌ನಲ್ಲಿ ರಾಜ್ಯದ ಪ್ರಥಮ ಬೃಹತ್‌ ಗ್ರಾಮಸೌಧ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ 16 ಹಳ್ಳಿಗಳಿಗೆ 108 ಸೇವೆಗಳು ದೊರೆಯಲಿವೆ.

ರಾಜ್ಯಕ್ಕೆ ಮಾದರಿಯಾದ ತಾಲೂಕಿನ ಬೂದಿಹಾಳ್‌ ಗ್ರಾಪಂ ಎಲ್ಲಾ ಗ್ರಾಮಗಳಿಗೆ ಮೂಲ ಸೌಕರ್ಯ ನೀಡುವುದಲ್ಲದೆ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ ಜನರ ಆಶಯಗಳಿಗೆ ಪೂರಕ ಕೆಲಸ ಮಾಡಿತ್ತು. ಅಧ್ಯಕ್ಷರು, ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಂಕಲ್ಪ ಸಕಾರವಾಗುವಲ್ಲಿ ವ್ಯಾಪ್ತಿಯ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಅನುದಾನ ಸಹಕಾರಿಯಾಗಿದೆ.

ಒಂದು ಸೂರು ನೂರೆಂಟು ಸೇವೆ: ದೇಶದ ಜನರಿಗೆ ಸರ್ಕಾರದ ಪ್ರತಿ ಸೌಲಭ್ಯಗಳು ತಲುಪಲು ಸ್ಥಳೀಯ ಆಡಳಿತ ಗ್ರಾಪಂ ಮಹತ್ವ ಪಡೆದಿದೆ. ಆದರೆ ಕೆಲವು ಗ್ರಾಪಂಗಳು ಕಚೇರಿಗಳಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ , ಕೆಲವೇ ಸೌಲಭ್ಯಗಳಿಂದ ಕಾರ್ಯನಿರ್ವಹಿಸುತ್ತಿದ್ದವು. ಇದರಿಂದಾಗಿ ಜನರಿಗೆ ಸರಿಯಾಗಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಬೂದಿಹಾಳ್‌ ಗ್ರಾಪಂ ಆಡಳಿತ ಮಂಡಳಿ 16 ಗ್ರಾಮಗಳ ಜನರಿಗಾಗಿ, ಪಂಚಾಯಿತಿ ಕಾರ್ಯಾಲಯದ ಜತೆ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಕೇಂದ್ರ, ಇ-ಡಿಜಿಟಳ್‌ ಗ್ರಂಥಾಲಯ, 108 ಸೇವೆ ನೀಡುವ ಬಾಪೂಜಿ ಸೇವಾ ಕೇಂದ್ರ, ಸಭಾಂಗಣದ ಜೊತೆ ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಕಚೇರಿಗಳು ಸೇರಿದಂತೆ ಇನ್ನೂ ಅನೇಕ ಸೌಲಭ್ಯಗಳನ್ನು ಹೊಂದಿರುವ 2 ಕೋಟಿ ರೂ. ವೆಚ್ಚದ ಬೃಹತ್‌ ಗ್ರಾಮಸೌಧ ನಿರ್ಮಿಸಲಾಗಿದೆ

ರಾಜ್ಯದ ಮಾದರಿ ಗ್ರಾಪಂ: ತಾಲೂಕಿನ ಬೂದಿಹಾಳ ಗ್ರಾಪಂನಲ್ಲಿ ಸಂಸದರು, ಶಾಸಕರು ಹಾಗೂ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಅನುದಾನ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 20 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ, ಕಾಂಕ್ರೀಟ್‌ ರಸ್ತೆ, ಚರಂಡಿ, ಬೀದಿ ದೀಪಗಳು, ಅಂಗನವಾಡಿ ಕೇಂದ್ರಗಳು, ಮಳೆ ನೀರಿನ ಕೊಯ್ಲು, ಗ್ರಂಥಾಲಯ, ಆಸ್ಪತ್ರೆ, ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಜನರ ಸೇವೆಗಾಗಿ ಬೃಹತ್‌ ಗ್ರಾಮಸೌಧವನ್ನು ನಿರ್ಮಾಣ ಮಾಡುವ ಮೂಲಕ ತಾಲೂಕಿಗಲ್ಲದೆ ರಾಜ್ಯಕ್ಕೆ ಮಾದರಿ ಪಂಚಾಯತಿಯಾಗಿ ನೆಲೆನಿಂತಿದೆ.

ಜಿಲ್ಲೆಯಲ್ಲಿ ಮೊದಲು: ಗ್ರಾಪಂ ವ್ಯಾಪ್ತಿಯಲ್ಲಿ 10 ಖಾಸಗಿ ಕಂಪನಿಗಳಿದ್ದು, 3 ದೊಡ್ಡವಾಗಿವೆ. ಅವುಗಳಲ್ಲಿನ ಪವರಿಕಾ ಲಿಮಿಟೆಡ್‌ ಕಂಪನಿಯ ಸಿಎಸ್‌ಆರ್‌ ಅನುದಾನದಿಂದ 76 ಲಕ್ಷ ರೂ. ಹೈಕೋಟ್ರಾನಿಕ್ಸ್‌ ಪ್ರೈ.ಲಿನಿಂದ 7.50 ಲಕ್ಷ ರೂ., ರಿಲಯನ್ಸ್‌ ಇಂಡಿಯಾ ಲಿಮಿಟೆಡ್‌ 5 ಲಕ್ಷ ರೂ., ಎಂಎಲ್‌ಸಿ ಎಸ್‌. ರವಿ ಅನುದಾನದಲ್ಲಿ 5 ಲಕ್ಷ ಸೇರಿದಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ದಾನಿಗಳ ಸಹಕಾರದಲ್ಲಿ 2 ಕೋಟಿಯ ಮೊತ್ತದಲ್ಲಿ ಎಲ್ಲಾ ಸೌಕರ್ಯಗಳನ್ನು ಒಳಗೊಂಡಿರುವ ಮತ್ತು ಜಿಲ್ಲೆಯಲ್ಲಿ ಮೊದಲ ಗ್ರಾಮಸೌಧ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೂದಿಹಾಳ್‌ ಗ್ರಾಪಂ ಅಧ್ಯಕ್ಷ ಎಂ.ಕೆ. ನಾಗರಾಜು ಪ್ರತಿಕ್ರಿಯಿಸಿ, ನಮ್ಮ ಆಡಳಿತದಲ್ಲಿ ರಾಜ್ಯಕ್ಕೆ ಮಾದರಿ ಗ್ರಾಪಂ ನೀಡುವ ಸಂಕಲ್ಪವು ಸಾಕಾರಗೊಂಡಿರುವುದು ಸಂತಸ ತಂದಿದೆ. ಉಪಾಧ್ಯಕ್ಷರು, ಸದಸ್ಯರು, ಖಾಸಗಿ ಕಂಪನಿಗಳು, ಸ್ಥಳೀಯ ಮುಖಂಡರು, ದಾನಿಗಳ ಸೇವೆಯಿಂದ ಬೃಹತ್‌ ಗ್ರಾಮಸೌಧ ನಿರ್ಮಾಣದ ಮೂಲಕ ಜನರಿಗೆ ಸೇವೆ ಮಾಡುವ ಅವಕಾಶ ದೊರೆತಿದೆ ಎಂದರು.

ಬೂದಿಹಾಳ್‌ ಗ್ರಾಪಂ ಪಿಡಿಒ ಡಿ.ಎಂ. ಪದ್ಮನಾಭ್‌ ಮಾತನಾಡಿ, ಒಂದೇ ಸೂರಿನಲ್ಲಿ ಜನರಿಗೆ ಎಲ್ಲಾ ಸೌಲಭ್ಯ ನೀಡುವ ಆಸೆಯ ಕನಸಿನ ಕಟ್ಟಡ ನಿರ್ಮಾಣವಾಗಿರುವುದು ಬಹಳ ಸಂತೋಷವಾಗಿದೆ. ಗ್ರಾಮೀಣ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಉದ್ಘಾಟನೆ ನಾಳೆ: ಬೂದಿಹಾಳ್‌ ಗ್ರಾಪಂನಿಂದ ನಿರ್ಮಾಣಗೊಂಡಿರುವ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲೆಯ ಮೊದಲ ಬೃಹತ್‌ ಗ್ರಾಮಸೌಧವನ್ನು ಆ.12ರಂದು ಬೆಳಗ್ಗೆ 10ಗಂಟೆಗೆ ಬೂದಿಹಾಳ್‌ ಗ್ರಾಮದಲ್ಲಿ ಸಂಸದ ಬಿ.ಎನ್‌. ಬಚ್ಚೇಗೌಡ ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಗ್ರಾಪಂ ಘನ ಉಪಸ್ಥಿತಿ ಅಧ್ಯಕ್ಷ ಎಂ.ಕೆ.ನಾಗರಾಜು ವಹಿಸಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹಾಗೂ ಎಂ.ವೀರಪ್ಪಮೋಯ್ಲಿ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಬೂದಿಹಾಳ್‌ ಗ್ರಾಪಂ ಅಧ್ಯಕ್ಷ ಎಂ.ಕೆ ನಾಗರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಉಪಾಧ್ಯಕ್ಷೆ ಬಿ. ಶೋಭಾ ನರಸಿಂಹರಾಜು, ಪಿಡಿಒ ಡಿ.ಎಂ.ಪದ್ಮನಾಭ್‌, ಸದಸ್ಯರಾದ ಬಿ.ಟಿ.ಮಂಜುನಾಥ್‌ಗೌಡ, ಜಿ.ವೆಂಕಟೇಶ್‌, ಕರಿವರದಯ್ಯ, ಮುಖಂಡರಾದ ಮರೇಗೌಡ, ಯಲ್ಲಪ್ಪ, ನಾಗರಾಜ್‌, ರಮೇಶ ಹಾಗೂ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ