ಧೂಮಪಾನ ಸಂಪೂರ್ಣ ನಿಷೇಧಕ್ಕೆ ಅಗತ್ಯ ಕ್ರಮ ಕೈಗೊಳ್ಳಿ

Team Udayavani, Nov 16, 2019, 3:00 AM IST

ದೇವನಹಳ್ಳಿ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾರಾಟ ಮಾಡುವುದು, ಅಪ್ರಾಪ್ತರಿಗೆ ಮಾರಾಟ ಮಾಡುವುದನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷಿದ್ಧಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಂಬಾಕು ಸೇವನೆಯಿಂದ ಕ್ಯಾನ್ಸರ್‌, ಹೃದಯ, ಶ್ವಾಸ ಸಂಬಂಧಿತ ಮಾರಣಾಂತಿಕ ಖಾಯಿಲೆಗಳು, ಗರ್ಭಪಾತ, ಗರ್ಭಧಾರಣೆಯಲ್ಲಿ ಕುಂಠಿತ, ಸೇರಿದಂತೆ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕ್ರಮ ಬದ್ಧವಾಗಿ ಶಿಬಿರಗಳನ್ನು ಆಯೋಜಿಸಿ, ಅರಿವು ಮೂಡಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

2003ರ ಕೋಟ್ಟ ಕಾಯಿದೆಯಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೆಕ್ಷನ್‌4 ಮತ್ತು 6 ಬಿ ಅನ್ವಯ ಶಾಲೆಯ ಮುಖ್ಯ ಪ್ರವೇಶ ದ್ವಾರಗಳಲ್ಲಿ ತಂಬಾಕು ಮುಕ್ತ ಶಾಲೆ ಮತ್ತು ತಂಬಾಕು ಸೇವನೆ ನಿಷಿದ್ಧ ಎಂದು ಸೂಚಿಸುವ ನಾಮಫಲಕಗಳನ್ನು ಅಳವಡಿಸಬೇಕು.ಬಸ್‌ ನಿಲ್ದಾಣಗಳು, ರೈಲು ನಿಲ್ದಾಣಗಳು, ಶಾಲಾ ಕಾಲೇಜು ಆವರಣಗಳು, ಮತ್ತು ಸರ್ಕಾರಿ ಕಛೇರಿ ಅವರಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಉಲ್ಲಂಘಿಸಿದವರಿಗೆ ಖಡ್ಡಾಯವಾಗಿ ದಂಡ ರೂ. 200/- ರವರೆಗೆ ವಿಧಿಸಬೇಕು ಎಂದರು.

ಜಿಲ್ಲೆಯಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ, ಕೈಗಾರಿಕಾ ಕಾರ್ಮಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶ್ವಾಸಕೋಶ ಸಂಬಂಧಿತ ಕ್ಷರ (ಟಿ.ಬಿ)ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಏರ್ಪಡಿಸಿ ಪ್ರಾಥಮಿಕ ಹಂತದ ಕಫಾ ಪರೀಕ್ಷೆಯನ್ನು ನಡೆಸಿ ಕ್ಷಯ ಖಾಯಿಲೆಯ ಗುಣ ಲಕ್ಷಣಗಳು ಕಂಡು ಬಂದಲ್ಲಿ ಉಚಿತವಾಗಿ ಚಿಕಿತ್ಸೆ ಕೊಟ್ಟು ಶೀಘ್ರವಾಗಿ ಗುಣಪಡಿಸಲು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳಿಗೆ ತಿಳಿಸಿದರು.

ಹೆಚ್‌ಐವಿ ಮತ್ತು ಏಡ್ಸ್‌ ಸೋಂಕಿತದಿಂದ ಬದುಕುತ್ತಿರುವ ಎಲ್ಲಾ ವ್ಯಕ್ತಿಗಳನ್ನು ಗುರುತಿಸಿ ಹಾರೈಕೆ ಮತ್ತು ಬೆಂಬಲದ ಜೊತೆಗೆ ತಮ್ಮ ಬದುಕನ್ನು ಹಸನಾಗಿಸಲು ಉತ್ತಮ ದಿನಚರಿಯನ್ನು ಅಳವಡಿಸಿಕೊಂಡು ಅವರಿಗಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ಕಳಂಕ, ತಾರತಮ್ಯ ಮತ್ತು ದೌರ್ಜನ್ಯಕ್ಕೆ ಒಳಗಾಗದಂತೆ ಮಾನಸಿಕವಾಗಿ ನೊಂದಿರುವ ವ್ಯಕ್ತಿಗಳಿಗೆ ಆಪ್ತ ಸಮಾಲೋಚನೆ ಮೂಲಕ ಮನೋಸ್ಥೈರ್ಯ ತುಂಬಿ ಸ್ವಯಂ ಪ್ರೇರಣೆಯಿಂದ ಚಿಕಿತ್ಸೆ ಪಡೆದು ಎಲ್ಲರಂತೆ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಹೇಳಿದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ. ಕರಿಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುಳಾದೇವಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಧರ್ಮೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ತಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ