ಆರ್ಥಿಕ ಸಬಲತೆಗೆ ನಾಗರಿಕರ ಪಾತ್ರ ಮಹತ್ವದ್ದು

Team Udayavani, Aug 26, 2019, 1:21 PM IST

ದೊಡ್ಡಬಳ್ಳಾಪುರ: ಒಂದು ದೇಶ, ಒಂದು ತೆರಿಗೆ ಪದ್ಧತಿ ನೀತಿಯ ಅನುಸಾರ ಸರ್ಕಾರ ಜಿಎಸ್‌ಟಿ ಪದ್ಧತಿ ಯನ್ನು ಜಾರಿಗೆ ತಂದಿದ್ದು, ಸರಕಾರವನ್ನು ವಂಚಿಸುವ ವ್ಯಾಪಾರಿಗಳಿಗೆ ಕಡಿವಾಣ ಬೀಳಲಿದೆ. ಆದರೆ ಪ್ರತಿ ಯೊಬ್ಬರು ಯಾವುದೇ ವಸ್ತು ವನ್ನು ಖರೀದಿ ಮಾಡಿ ದಾಗ ಕಡ್ಡಾಯವಾಗಿ ರಶೀದಿ ಕೇಳಿ ಪಡೆಯಬೇಕು ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಡಾ.ಬಿ.ವಿ. ಮುರಳಿಕೃಷ್ಣ ಹೇಳಿದರು.

ನಗರದ ಕೊಂಗಾಡಿಯಪ್ಪ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಭಾರತದ ಅರ್ಥ ವ್ಯವಸ್ಥೆಯ ಮೇಲೆ ಜಿಎಸ್‌ಟಿ ಪರಿಣಾಮ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ವಸ್ತು ಕೊಂಡರೆ ರಸೀದಿ ಕೇಳಿ ಪಡೆಯಿರಿ: ಜನತೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮುನ್ನ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಶ್ರೀಮಂತರಿಂದ ಮೊದಲುಗೊಂಡು ಬಡವರವರೆಗೂ ಬಹುತೇಕ ಗ್ರಾಹಕರು ಮಾಡುವ ಮೊದಲ ತಪ್ಪು ಯಾವುದೇ ರೀತಿಯ ವಸ್ತುವನ್ನು ಖರೀದಿ ಮಾಡುವಾಗ ಸಣ್ಣ ಪ್ರಮಾಣದ ಮೊತ್ತವನ್ನು ಉಳಿಸುವ ಉದ್ದೇಶದಿಂದ ಅಂಗಡಿಯವರಿಂದ ರಶೀದಿಯನ್ನು ಪಡೆಯುವುದಿಲ್ಲ. ಆದರೆ ಇದರಿಂದ ದೇಶದ ಪ್ರಗತಿಗೆ ನಮ್ಮಿಂದ ಆಗುತ್ತಿರುವ ದೊಡ್ಡ ನಷ್ಟ ಏನು ಎಂಬುದುರ ಬಗ್ಗೆ ಯೋಚಿಸುವುದೇ ಇಲ್ಲ ಎಂದರು.

ಗ್ರಾಹಕರ ಸಹಕಾರ ಅತ್ಯಗತ್ಯ: ಇಂದು ಇಡೀ ದೇಶದ ಆರ್ಥಿಕತೆಯನ್ನು ನಿರ್ಧರಿಸುವುದೇ ಜಿಎಸ್‌ಟಿ ಹೀಗಾಗಿ ದೇಶದ ಪ್ರತಿಯೊಬ್ಬರು ತೆರಿಗೆ ಪದ್ಧತಿ ಕುರಿತು ತಿಳಿದುಕೊಳ್ಳಬೇಕು. ಜಿಎಸ್‌ಟಿಯಿಂದಾಗಿ ಚೆಕ್‌ ಪೋಸ್ಟ್‌ ವ್ಯವಸ್ಥೆಗಳು ಸುಗಮವಾಗಲಿವೆ. ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಈ ಹೊಸ ತೆರಿಗೆ ಪದ್ಧತಿಗೆ ಗ್ರಾಹಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಲಾಭ-ನಷ್ಟ ತಿಳಿಯಲು ಸಹಕಾರಿ: ಜಿಎಸ್‌ಟಿ ಪದ್ಧತಿಯಲ್ಲಿ ವಿವಿಧ ಹಂತಗಳಲ್ಲಿ ನಾವು ನೀಡಿರುವ ಇನ್‌ಪುಟ್ ತೆರಿಗೆಯನ್ನು ಮುರಿದುಕೊಂಡು ಉಳಿದ ತೆರಿಗೆ ಪಾವತಿ ಮಾಡುವ ಅವಕಾಶವಿದೆ. ಜಿಎಸ್‌ಟಿ ಬಗ್ಗೆ ನೇಕಾರರಿಗೆ ಯಾವುದೇ ಗೊಂದಲ ಬೇಡ. ಜಿಎಸ್‌ಟಿ ವ್ಯಾಪಾರ ವಹಿವಾಟುಗಳ ಲಾಭ ನಷ್ಟಗಳನ್ನು ನಿಖರವಾಗಿ ತಿಳಿಯಲು ಸಹಕಾರಿಯಾಗಲಿದೆ. ಜಿಎಸ್‌ಟಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಮಪಾಲು ಇದ್ದು, ತೆರಿಗೆಯನ್ನು ಅರ್ಧ ಮಾಡಬೇಕಾಗಿರುತ್ತದೆ. 40 ಲಕ್ಷಕ್ಕೂ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸುವವರು ಕಡ್ಡಾಯವಾಗಿ ಜಿಎಸ್‌ಟಿ ಮಾಡಿಸಬೇಕು. ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಜಿಎಸ್‌ಟಿ ಕುರಿತಂತೆ ಆಳವಾದ ಅಧ್ಯಯನ ಹೊಂದಲೇ ಬೇಕು. ಇಲ್ಲವಾದರೆ ಯಾವುದೇ ಉದ್ಯೋಗವನ್ನು ಪಡೆಯಲು ಸಾಧ್ಯವೇ ಇಲ್ಲ ಎಂದರು.

ದಿನ ಪತ್ರಿಕೆ ಓದಿ ತಿಳಿವಳಿಕೆ ಪಡೆಯಿರಿ: ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಗೌರವ ಕಾರ್ಯ ದರ್ಶಿ ಎಂ.ಅಶ್ವತ್ಥಯ್ಯ ಮಾತನಾಡಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಠ್ಯ ಪುಸ್ತಕದಲ್ಲಿನ ವಿಷಯಗಳಿಗೆ ನೀಡುವಷ್ಟೇ ಮಹತ್ವವನ್ನು ದಿನಪತ್ರಿಕೆ ಗಳಲ್ಲಿ ಬರುವ ವಾಣಿಜ್ಯದ ಸುದ್ಧಿಗಳನ್ನು ಓದುವ ಮೂಲಕ ಪ್ರಸ್ತುತದಲ್ಲಿನ ಬದಲಾವಣೆಗಳ ಬಗ್ಗೆ ತಿಳಿವಳಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಆಲೋಚಿಸಿ: ವಾಣಿಜ್ಯ ಕ್ಷೇತ್ರದಲ್ಲಿ ಕ್ಷಣ ಕ್ಷಣಕ್ಕೂ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ವೇಗದ ಬದಲಾವಣೆಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ವಿದ್ಯಾರ್ಥಿಗಳು ಸಜ್ಜಾಗಬೇಕು. ಅಂಕಗಳನ್ನು ಪಡೆದರಷ್ಟೇ ಉದ್ಯೋಗ ದೊರೆಯುವುದಿಲ್ಲ. ವಿಭಿನ್ನ ರೀತಿಯಲ್ಲಿ ಆಲೋಚಿಸುವ ಕ್ರಮವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಕೊಂಗಾಡಿಯಪ್ಪ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ವಿ.ನಿಜಲಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ತಜ್ಞರಿಂದ ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದೆ ಎಂದರು. ಕಾಲೇಜಿನ ಉಪಪ್ರಾಂಶುಪಾಲ ತಜಾಮುಲ್ಲಾ ಪಾಷಾ, ಸಂಚಾಲಕರಾದ ನರೇಂದ್ರ, ಜಯಲಕ್ಷ್ಮಮ್ಮ ಇತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ದೊಡ್ಡಬಳ್ಳಾಪುರ : ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರ ದಲ್ಲಿ ನಡೆಯಲರುವ ಪ್ರಸಿದ್ದ ದನ ಗಳ ಜಾತ್ರೆಗೆ ದಿನ ಣನೆ ಆ ರಂಭವಾಗಿದ್ದು, ರಾ ಸು ಗಳ ಪ್ರ  ದರ್ಶನಕ್ಕಾಗಿರ್ಷಕ...

  • ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್‌ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯ, ಮಾಲೆಧರಿಸುವ ಭಕ್ತರ ಭಜನೆ, ಇರುಮುಡಿ ಮೊದಲಾದಯಾತ್ರಗೆ ಸಕಲ ವ್ಯವಸ್ಥೆ ಕಲ್ಪಿಸಿದ್ದು,...

  • ಹೊಸಕೋಟೆ: ತಾಲೂಕಿನ ನಂದಗುಡಿ ಯಲ್ಲಿ ಕಾನೂನು ಬಾಹಿರ ಹಾಗೂ ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವು ದನ್ನು ಪತ್ತೆ ಹಚ್ಚಿರುವ ಆರೋಗ್ಯ ಇಲಾಖೆ...

  • ದೇವನಹಳ್ಳಿ : ಆರ್ಥಿಕ ಗಣತಿ ಕ್ಷೇತ್ರ ಕಾಯಾಚರಣೆಯಲ್ಲಿ ನಗರ ಮತ್ತು ಗ್ರಾಮೀಣ ಸೇರಿದಂತೆ ಒಂದು ಭೌಗೋಳಿಕ ಕ್ಷೇತ್ರ ವ್ಯಾಪ್ತಿಯಲ್ಲಿ ಜರುಗುತ್ತಿರುವ ಎಲ್ಲಾ ಆರ್ಥಿಕ...

  • ದೇವನಹಳ್ಳಿ : ನೆಲಮಂಗಲ ತಾಲೂಕಿನ ನಂತರ ಜಿಲ್ಲಾ ಕೇಂದ್ರ ದೇವನಹಳ್ಳಿ ತಾಲೂಕು ಕಚೇರಿಯಲ್ಲೂ ಕಾಗದ ರಹಿತ ಆಡಳಿತಕ್ಕೆ ಸಜ್ಜಾಗಿದ್ದು, ಇನ್ಮುಂದೆ ಎಲ್ಲಾ ವ್ಯವಹಾರಗಳು...

ಹೊಸ ಸೇರ್ಪಡೆ