ಜಿಲ್ಲಾದ್ಯಂತ ಯುಗಾದಿ ಹಬ್ಬದ ಸಂಭ್ರಮ

Team Udayavani, Apr 8, 2019, 3:00 AM IST

ದೊಡ್ಡಬಳ್ಳಾಪುರ: ಚೈತ್ರ ಮಾಸ ವಿಕಾರಿ ನಾಮ ಸಂವತ್ಸರದ ಯುಗಾದಿ ಹಬ್ಬವನ್ನು ತಾಲೂಕು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಜನತೆ ಮನೆ ಮುಂದೆ ರಂಗೋಲಿ ಚಿತ್ತಾರ ಬಿಡಿಸಿ, ಬಾಗಿಲುಗಳನ್ನು ತಳಿರು, ತೋರಣಗಳಿಂದ ಶೃಂಗರಿಸಿ ಮನೆಯಲ್ಲಿ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನಡೆಸಿದರು. ನಂತರ ಹೊಸ ಬಟ್ಟೆಗಳನ್ನು ಧರಿಸಿ, ಬೇವು, ಬೆಲ್ಲ ಹಂಚುವುದರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೊಸ ಪಂಚಾಂಗಕ್ಕೆ ಪೂಜೆ ಸಲ್ಲಿಸಲಾಯಿತು.

ಚುನಾವಣಾ ಪ್ರಚಾರಕ್ಕೆ ಸ್ವಲ್ಪ ವಿರಾಮ ನೀಡಿದ್ದ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಸಹ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದರು. ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳು ನಡೆದವು.

ಮಾಂಸ ಮಾರಾಟ ಜೋರು: ಯುಗಾದಿ ಹಬ್ಬದ ಪ್ರಯುಕ್ತ ಸಿಹಿ ಊಟ ಮಾಡಿದ ನಾಗರಿಕರು, ಹಬ್ಬದ ರಜೆಯಲ್ಲಿ ಅಂದರೆ ಯುಗಾದಿ ಮರುದಿನ ಮಾಂಸದ ಅಡುಗೆ ಮಾಡಿಕೊಂಡು ಬಂಧು-ಬಾಂಧವರೊಂದಿಗೆ ಭೋಜನ ಮಾಡುವುದು ಈ ಭಾಗದ ಸಂಪ್ರದಾಯ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ.

ಹೊಸ ತೊಡಕು ಎಂದು ಕರೆಯುವ ಈ ದಿನ ಮಾಂಸದ ಅಂಗಡಿಗಳಲ್ಲಿ ಸಾಲುಗಟ್ಟಿ ನಿಂತು ಮಾಂಸ ಕೊಂಡೊಯತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು. ಹಾಗಾಗಿ, ಒಂದು ಕೆ.ಜಿ. ಮಟನ್‌ 550 ರೂ. ಬೆಲೆ ಪಡೆದುಕೊಂಡಿತ್ತು.

ಬೇ ಡಿ ಕೆ ಹೆಚ್ಚಾದಂತೆ ವಸ್ತುಗಳ ಬೆಲೆ ಹೆಚ್ಚಾಗುವುದು ಸಹಜ. ಅದು ಮಾಂಸಕ್ಕೂ ಅನ್ವಯಿಸಿತ್ತು. ಸಾಮಾನ್ಯವಾಗಿ 450 ರೂ.ಗೆ ಮಾರಾಟವಾಗುತ್ತಿದ್ದ ಮಾಂಸ ಹಬ್ಬದ ಪ್ರಯುಕ್ತ 100 ರೂ. ಹೆಚ್ಚಿಸಿಕೊಂಡಿತ್ತು. ಬೇಡಿಕೆ ಪೂರೈಸಲು ಬೆಳಗಿನ ಜಾವ 4 ಗಂಟೆಗೇ ಮಾಂಸದ ಅಂಗಡಿಗಳು ತೆರೆದಿದ್ದವು.

ಕ್ರೈಸ್ತ ವರ್ಷಾಚರಣೆ ಸಂದರ್ಭದಲ್ಲಿ ಗುಂಡು, ತುಂಡು ಪಾರ್ಟಿಗಳು ಜೋರು. ಅಂತೆಯೇ ಹಿಂದುಗಳ ಹೊಸ ವರ್ಷಾಚರಣೆ ಯುಗಾದಿ ಹಬ್ಬದಂದು ಹೋಳಿಗೆ ಸಿಹಿ ತಿಂದ ಮೇಲೆ ಬಾಯಿ ಖಾರ ಮಾಡಿಕೊಳ್ಳುವುದು ಪದ್ಧತಿಯಾಗಿ ಬೆಳೆದುಬಂದಿದೆ.

ಅದರಲ್ಲೂ ನೇಕಾರಿಕೆಯೇ ಪ್ರಧಾನವಾಗಿರುವ ದೊಡ್ಡಬಳ್ಳಾಪುರದಲ್ಲಿ, ನೇಕಾರರು, ಕೃಷಿಕರು ಯುಗಾದಿ ಸಂದರ್ಭದಲ್ಲಿ ಮಾಂಸದ ಅಡುಗೆ ಮಾಡುವ ಪದ್ಧತಿಯನ್ನು ತಲೆತಲಾಂತರಗಳಿಂದ ಬೆಳೆಸಿಕೊಂಡುಬಂದಿದ್ದಾರೆ.

ಹಾಗಾಗಿ, ಹೊಸ ತೊಡಕು ಈ ಬಾರಿ ಭಾನುವಾರ ಬಂದಿದ್ದರಿಂದ ನಗರದಲ್ಲಿ ಮಾಂಸ ಹಾಗೂ ಮದ್ಯದ ವ್ಯಾಪಾರ ಜೋರಾಗಿಯೇ ಸಾಗಿತ್ತು. ಮಾಂಸಕ್ಕೆ ಬಳಸುವ ಮಸಾಲೆ, ಸೊಪ್ಪುಗಳ ಮಾರಾಟವೂ ಭರ್ಜರಿಯಾಗಿ ನಡೆದಿತ್ತು. ಅದೇ ರೀತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಯುಗಾದಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಕಾಮನ ಮೂರ್ತಿಗೆ ವಿಶೇಷ ಪೂಜೆ
ದೊಡ್ಡಬಳ್ಳಾಪುರ: ಯುಗಾದಿ ವೇಳೆ ಬಯಲುಸೀಮೆಯಲ್ಲಿ ವಿಶಿಷ್ಟವಾಗಿ ಆಚರಿಸುವ ಕಾಮಣ್ಣನ ಮೂರ್ತಿಯನ್ನು ತಣ್ಣಗೆ ಮಾಡುವ ಆಚರಣೆ ನಗರದ ವಿವಿಧೆಡೆ ಶ್ರದ್ಧಾಭಕ್ತಿ, ಸಂಭ್ರಮಗಳಿಂದ ನೆರವೇರಿತು. ಜೇಡಿ ಮಣ್ಣಿನಿಂದ ತಯಾರಿಸಿದ್ದ ಸುಂದರ ಕಾಮನ ಮೂರ್ತಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ನಗರದ ರಂಗಪ್ಪ ಸರ್ಕಲ್‌ನಲ್ಲಿನ ಶ್ರೀ ಬಾಲಾಂಜನೇಯ ವ್ಯಾಯಾಮ ಕಲಾ ಯುವಕ ಸಂಘದ ವತಿಯಿಂದ ಬಿಡಿಸಲಾಗಿದ್ದ ಸುಮಾರು 22 ಅಡಿಗಳ ಬೃಹತ್‌ ಕಾಮನಮೂರ್ತಿಗೆ ಕಾಮನ ತಣ್ಣಗಿನ ಆಚರಣೆ ಮಾಡಲಾಯಿತು.

ಕಾಮಣ್ಣನ ಮೂರ್ತಿ ತಣ್ಣಗೆ ಮಾಡುವ ಆಚರಣೆ ಆರಂಭವಾಗಿ 105 ವರ್ಷ ಪೂರೈಸಿದ ನೆನಪಿಗಾಗಿ ವಿಶೇಷ ಮಂಟಪದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಇದೇ ಜಾಗದಲ್ಲಿ ಕಾಮಣ್ಣನ ಮೂರ್ತಿ ನಿರ್ಮಿಸುತ್ತಿದ್ದ ದಿವಂಗತ ಯಲ್ಲಪ್ಪ ಅವರ ಸ್ಮರಣೆ ಮಾಡಿ ಪ್ರಸಾದ ವಿತರಿಸಲಾಯಿತು.

ನಗರದ ತೂಬಗೆರೆ ಪೇಟೆ, ಗಾಣಿಗರ ಪೇಟೆ, ವಿವೇಕಾನಂದ ನಗರ ಮೊದಲಾದೆಡೆ ವಿವಿಧ ಮಾದರಿಯ ಕಾಮಣ್ಣನ ಮೂರ್ತಿಗಳನ್ನು ಬಿಡಿಸಿ ಪೂಜೆ ಸಲ್ಲಿಸಲಾಯಿತು. ಕಾಮ ಪೌರ್ಣಮಿಯಂದು ಉರುವಲುಗಳನ್ನು ಸುಡುವ ಮೂಲಕ ಕಾಮ ದಹನದ ಕ್ರಿಯಾವಿಧಿಗಳನ್ನು ನೆರವೇರಿಸಿದರು.  ಶಿವನ ತಪಸ್ಸನ್ನು ಭಂಗ ಮಾಡಲು ಪ್ರಯತ್ನಿಸಿದ ಮನ್ಮಥನನ್ನು ಶಿವ ತನ್ನ ಮೂರನೇ ಕಣ್ಣಿನಿಂದ ದಹಿಸಿದ.

ಮನ್ಮಥನನ್ನು ಮನಿಸಿದ ಶಿವ ಶಾಂತ ಸ್ವರೂಪನಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಕಾಮನ ಮೂರ್ತಿಯಾಗಿ ಅವತಾರಗೊಂಡ ಪುರಾಣ ಕಥೆಯಂತೆ ಕಾಮಣ್ಣನ ಹಬ್ಬ ಆಚರಿಸಲಾಗುತ್ತಿದೆ. ಹೋಳಿ ಹುಣ್ಣಿಮೆಯಂದು ಕಾಮನನ್ನು ದಹನ ಮಾಡಿದ ಸ್ಥಳದಲ್ಲಿಯೇ ಯುಗಾದಿ ಅಮಾವಾಸ್ಯೆಯಂದು ಕಾಮನನ್ನು ತಣ್ಣಗೆ ಮಾಡುವ ಪ್ರಕ್ರಿಯೆ ನಡೆಯುತ್ತದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

  • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

  • ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ...