ಬಿಕೆಡಿಬಿ ಅಭಿವೃದ್ಧಿಗೊಳಿಸಿದ ಸ್ಥಳ ಸರ್ಕಾರದ ಆಸ್ತಿ: ಮಹಾದೇವ

ಬಸವಕಲ್ಯಾಣದಲ್ಲಿ ರಾಮಲಿಂಗೇಶ್ವರ ಲಿಂಗ-ಭಾವಚಿತ್ರ ತೆರವು ಪ್ರಕರಣ

Team Udayavani, Sep 7, 2019, 5:23 PM IST

ಬಸವಕಲ್ಯಾಣ: ನಗರದ ಬಿಕೆಡಿಬಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|ಎಚ್.ಆರ್‌.ಮಹಾದೇವ ಮಾತನಾಡಿದರು. ಎಸಿ ಜ್ಞಾನೇಂದ್ರಕುಮಾರ ಗಂಗವಾರ, ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟ್ಟೆಪ್ಪಗೋಳ ಇದ್ದರು.

ಬಸವಕಲ್ಯಾಣ: ಪರಸ್ಪರ ಕಲಹದ ಮೂಲಕ ಶರಣರ ಭೂಮಿಯಲ್ಲಿ ಅಶಾಂತಿಯ ವಾತಾವರಣಕ್ಕೆ ಅವಕಾಶ ಮಾಡಿಕೊಡಬೇಡಿ. ಬಿಕೆಡಿಬಿಯಿಂದ ಅಭಿವೃದ್ಧಿಗೊಳಿಸಲಾದ ಎಲ್ಲ ಗವಿಗಳು ಸರ್ಕಾರ ಆಸ್ತಿಯೇ ವಿನಃ ಯಾವುದೇ ದೇವಸ್ಥಾನ ಸಮಿತಿ ಅಥವಾ ಸಂಘಗಳ ಆಸ್ತಿಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್‌.ಮಹಾದೇವ ಹೇಳಿದರು.

ನಗರದ ಬಂದವರ ಓಣಿಯಲ್ಲಿನ ರಾಮಲಿಂಗೇಶ್ವರ ಲಿಂಗ, ಭಾವಚಿತ್ರ ತೆರವು ಮತ್ತು ಅಕ್ಕಮಹಾದೇವಿ ಭಾವಚಿತ್ರ ಅಳವಡಿಸಿರುವ ವಿಷಯಕ್ಕೆ ಸಂಬಂಧ ಪಟ್ಟಂತೆ ಬಿಕೆಡಿಬಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಅವರು ಮಾತನಾಡಿದರು.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಾಗ ಬಂದವರ ಓಣಿಯನ್ನು ಅಕ್ಕಮಹಾದೇವಿ ಗವಿ ಎಂಬ ಹೆಸರಿನಲ್ಲಿ ಅದನ್ನು ಅಭಿವೃದ್ಧಿಗೊಳಿಸಲಾಗಿದೆ. ಹಾಗಾಗಿ ಇದು ಸರ್ಕಾರದ ಆಸ್ತಿಯಾಗಿರುತ್ತದೆ. ಇದಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿತ್ತಾರೆ. ಮೊದಲಿನಂತೆ ಬಂದವರ ಓಣಿ ಒಳಗಡೆ ಇರುವ ರಾಮಲಿಂಗೇಶ್ವರ ಲಿಂಗಕ್ಕೆ ಪೂಜೆ ಮಾಡಲು ಮತ್ತು ಅಕ್ಕಮಹಾದೇವಿ ಅವರಿಗೆ ಸಂಬಂಧ ಪಟ್ಟ ಕಾರ್ಯಕ್ರಮಗಳನ್ನು ಮಾಡಲು ಮುಕ್ತವಾಗಿ ಅವಕಾಶವಿದೆ. ಅದನ್ನು ಬಿಟ್ಟು ವಿನಾಕಾರಣ ಗೊಂದಲ ಸೃಷ್ಟಿ ಮಾಡಿದರೆ ನಾವು ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಿಮ್ಮ ಸಮ್ಮಸ್ಯೆಗಳು ಏನೇ ಇದ್ದರು ಬಸವಕಲ್ಯಾಣ ಸಹಾಯ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ ಮತ್ತು ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟ್ಟೆಪ್ಪಗೋಳ ಅವರ ಗಮನಕ್ಕೆ ತಂದು ಬಗೆಹಸಿಕೊಳ್ಳಬೇಕು ಎಂದು ಆದೇಶ ಮಾಡಿದರು.

ಇದೇ ಸಂದರ್ಭದಲ್ಲಿ ಶಿವಶರಣ ಹರಳಯ್ಯ ಸಮಾಜ ಸಂಘದ ಅಧ್ಯಕ್ಷ ಸೂರ್ಯಕಾಂತ ಕಾಂಬ್ಳೆ ಮಾತನಾಡಿ, ಶರಣ ಸಮಗಾರ ಹರಳಯ್ನಾ ಗವಿಯಲ್ಲಿ ಬಸವ ತತ್ವಕ್ಕೆ ವಿರೋಧವಾಗಿ ಪೀಠ, ಮಠ ನಿರ್ಮಿಸಿ ಸಮಗಾರ ಹರಳಯ್ಯ ಸಮಾಜದವನ್ನು ಕಡೆಗಣಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ನಂತರ ಜಿಲ್ಲಾಧಿಕಾರಿ ಡಾ| ಎಚ್.ಆರ್‌.ಮಹಾದೇವ ಹಾಗೂ ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟ್ಟೆಪ್ಪಗೋಳ ಅವರು, ಯಾರಾದರೂ ಭಾಷಣ, ಪ್ರವಚನ ಮಾಡಿದರೆ ಆ ಸ್ಥಳ ಅವರದಾಗಲು ಸಾಧ್ಯವಿಲ್ಲ. ಸಮಗಾರ ಹರಳಯ್ಯ ಗವಿಗೆ ಮೊದಲು ಯಾರೂ ಬರುತ್ತಿರಲಿಲ್ಲ. ಹಾಗಾಗಿ ಮೂರು ವರ್ಷಗಳಿಂದ ಅಕ್ಕ ಡಾ|ಗಂಗಾಂಬಿಕೆ ಅವರು ಪೀಠ ಮಾಡಿಕೊಂಡು ಪ್ರವಚನ ಮಾಡುತ್ತಿದ್ದಾರೆ ಹೊರತು ಪೀಠಕ್ಕೂ ಹಾಗೂ ಹರಳಯ್ಯ ಗವಿಗೂ ಯಾವುದೇ ತರಹದ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಎಲ್ಲಾ ಪ್ರತಿನಿಧಿಗಳು ಪಕ್ಷಾತೀತವಾಗಿ 12ನೇ ಶತಮಾನದ ವಿಶ್ವಗುರು ಬಸವಣ್ಣನವರ ಭೂಮಿಯನ್ನು ಅಂತಾರರಾಷ್ಟ್ರೀಯ ತಾಣ ಮಾಡಬೇಕು ಎಂಬ ಪ್ರಯತ್ನದಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ ಕಚ್ಚಾಡುವುದು ಸರಿಯಲ್ಲ. ಜಿಲ್ಲಾಧಿಕಾರಿ ಹೇಳಿದ ಮಾತಿನಂತೆ ಎಲ್ಲರೂ ಒಪ್ಪಿಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ, ಇಒ ಮಡೋಳಪ್ಪಾ ಪಿಎಸ್‌, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್‌ಐ ಹಾಗೂ ಶ್ರೀ ಶಿವಶರಣ ಹರಳಯ್ಯ ಸಮಾಜದ ಸಂಘದ ಪದಾಧಿಕಾರಿಗಳು ಹಾಗೂ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಸಮಿತಿ ಪದಾಧಿಕಾರಿಗಳು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ