ನೈಜ ಸಮಸ್ಯೆ ನಿವಾರಿಸುವ ಇಂಜಿನಿಯರ್‌ಗಳು ಅವಶ್ಯ

'ಡಿಜಿಟಲ್ ತಂತ್ರಜ್ಞಾನಕ್ಕೆ ಭಾರತದ ಕೊಡುಗೆ' ಉಪನ್ಯಾಸ

Team Udayavani, Aug 11, 2019, 3:12 PM IST

ಬಸವಕಲ್ಯಾಣ: ಇಂಜನಿಯರಿಂಗ್‌ ಕಾಲೇಜಿನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ| ಶಿವಾನಂದ ಕಣವಿ 'ಡಿಜಿಟಲ್ ತಂತ್ರಜ್ಞಾನಕ್ಕೆ ಭಾರತದ ಕೊಡುಗೆ' ಕುರಿತು ಉಪನ್ಯಾಸ ನೀಡಿದರು.

ಬಸವಕಲ್ಯಾಣ: ಸಮಾಜದ ನೈಜ ಸಮಸ್ಯೆಗಳನ್ನು ಬಗೆಹರಿಸುವ ಇಂಜಿನಿಯರ್‌ಗಳ ಅಗತ್ಯವಿದೆ. ಹಾಗಾಗಿ ಇಂಜಿನಿಯರ್‌ಗಳು ಸಂಶೋಧಾನಾತ್ಮಕ ಹಾಗೂ ಪ್ರಾಯೋಗಿಕ ಜ್ಞಾನದಿಂದ ಸಾಮಾಜಿಕ ವಾಸ್ತವದ ಸವಾಲುಗಳನ್ನು ಠಿಬಗೆಹರಿಸಲು ಮುಂದಾಗಬೇಕು ಎಂದು ಬೆಂಗಳೂರು ನ್ಯಾಷನಲ್ ಇನ್ಸಿಟ್ಯೂಟ್ ಆಫ್‌ ಅಡ್ವಾನ್ಸಡ್‌ ಸ್ಟಡಿಸ್‌ನ ಸಂದರ್ಶಕ ಪ್ರಾಧ್ಯಾಪಕ ಪ್ರೊ| ಶಿವಾನಂದ ಕಣವಿ ಹೇಳಿದರು.

ನಗರದ ಬಸವಕಲ್ಯಾಣ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ನಡೆದ 42ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಡಿಜಿಟಲ್ ತಂತ್ರಜ್ಞಾನಕ್ಕೆ ಭಾರತದ ಕೊಡುಗೆ’ ಕುರಿತು ಅವರು ಉಪನ್ಯಾಸ ನೀಡಿದರು.

ನೈಜ ಬದುಕಿಗೆ ಸಂಬಂಧಿತ ಜ್ಞಾನ ಮತ್ತು ಶಿಕ್ಷಣವು ಬಹುಶಿಸ್ತೀಯ ಮತ್ತು ಅಂತರ್‌ ಶಿಸ್ತೀಯ ಆಯಾಮ ಮತ್ತು ಅಧ್ಯಯನ ಒಳಗೊಂಡಿರುತ್ತದೆ. ಇಂಜಿನಿಯರಿಂಗ್‌ನಲ್ಲಿ ಅನ್ವಯಿಕತೆ ಬಹುಮುಖ್ಯವಾದ ಸಂಗತಿಯಾಗಿದೆ ಎಂದರು.

ತಂತ್ರಜ್ಞಾನದ ವಿದ್ಯಾರ್ಥಿಗಳು ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಜತೆಗೆ ಅಧ್ಯಾಪಕರೊಂದಿಗೆ ನಡೆಸಿದ ಚರ್ಚೆ, ಸಹಪಾಠಿಗಳೊಂದಿಗಿನ ವಿಚಾರ ವಿನಿಮಯ, ವಿದ್ವಾಂಸರ ಜೊತೆಗಿನ ಸಂಕಥನದ ಮೂಲಕ ತನ್ನ ಜ್ಞಾನಕ್ಷಿತಿಜ ವಿಸ್ತರಿಸಿಕೊಳ್ಳಬೇಕು ಎಂದರು.

ವೈಜ್ಞಾನಿಕ ಲೋಕದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಲ್ಲಿ ಬಹುತೇಕರು ಮಾಡಿದ ಸಂಶೋಧನೆಗಳು ತಮ್ಮ 25 ವರ್ಷ ವಯಸ್ಸಿಗಿಂತ ಮುಂಚಿತವಾದವುಗಳೆ ಆಗಿವೆ. ಪ್ರಶ್ನೆ ಕೇಳುವ ಮನೋಧರ್ಮವಿದ್ದರೆ ಹಲವು ಆಯಾಮದ ಉತ್ತರ ಮತ್ತು ಫಲಿತಗಳು ದೊರೆಯುತ್ತವೆ.

ಅಮೆರಿಕಾ ಶಿಕ್ಷಣ ಪದ್ಧತಿಯಲ್ಲಿ ಪ್ರಶ್ನಿಸುವ ವಿಧಾನ ಮತ್ತು ಪ್ರವೃತ್ತಿ ಇರುವುದರಿಂದಲೇ ಹಲವು ಅನ್ವೇಷಣೆಗಳು ಅಲ್ಲಿ ಸಾಧ್ಯವಾಗಿದೆ. ಅನ್ವೇಷಕ ಗುಣದಿಂದ ಮಾತ್ರ ಇಂಜಿನಿಯರ್‌ಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು. ಎಣಿಕೆ, ಗಣನೆ ವಿಧಾನವನ್ನು ಭಾರತೀಯರು ಶೋಧಿಸಿದ್ದಾರೆ.

ಆರ್ಯಭಟ, ಭಾಸ್ಕಾರಾಚಾರ್ಯ, ಬ್ರಹ್ಮಗುಪ್ತ ಎಣಿಕೆ ಕ್ರಮ ಬಳಸಿದರು. ಅರಬ್ಬಿಕರು ಭಾರತೀಯರಿಂದ ಈ ಪದ್ಧತಿ ಅಳವಡಿಸಿಕೊಂಡರು. ನೀಲಕಂಠ ಸೋಮಯಾಜಿ, ಮಾಧವ ಮೊದಲಾದವರು ನ್ಯೂಟನ್‌ಗಿಂತ ಮುಂಚೆಯೆ ಅನಂತತೆ (ಇನಿಫಿನಿಟಿ) ಪರಿಕಲ್ಪನೆಯನ್ನು ತಮ್ಮ ಕೃತಿಯಲ್ಲಿ ಕೊಟ್ಟಿದ್ದಾರೆ. ನ್ಯೂಟನ್‌ ಹೇಳುವ ಕ್ಯಾಲ್ಕಲಸ್‌ ಮೊದಲಾದವು ಭಾರತದಲ್ಲಿ ಮೊದಲೆ ಅಸ್ತಿತ್ವದಲ್ಲಿದ್ದವು. ಎಂಪಿ3 ಎನ್‌.ಜಯಂತ್‌ ಎಂಬ ಕನ್ನಡಿಗನ ನೇತೃತ್ವದಲ್ಲಿ ಬಂದಿದೆ. ಎಚ್‌ಡಿ ಟಿವಿ ಅರುಣ ನೇತ್ರಾವಳಿ ಎಂಬ ಕನ್ನಡಿಗನ ಶೋಧವಾಗಿದೆ. ಫೈಬರ್‌ ಆಪ್ಟಿಕ್ಸ್‌ ನರೇಂದ್ರಸಿಂಗ್‌ ಕಪಾನಿ ಎಂಬ ಭಾರತೀಯ ವಿಜ್ಞಾನಿ ಅನ್ವೇಷಿಸಿ ಇಂಥ ಪರಿಭಾಷೆ ರೂಢಿಗೆ ತಂದರು.

ಜಾಗತಿಕ ವಿಜ್ಞಾನ ತಂತ್ರಜ್ಞಾನದ ಲೋಕದಲ್ಲಿ ಹಾರ್ಡವೇರ್‌ ಮತ್ತು ಸಾಫ್ಟ್‌ವೇರ್‌ ಕ್ಷೆತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ. ಆಧಾರ್‌, ಬ್ಯಾಂಕ್‌ ಖಾತೆ, ರೈಲ್ವೆ ಟೀಕೆಟ್ ನಿಗದಿ, ಭೂ ದಾಖಲೆ, ಆಸ್ತಿ ವಿವರ ಹೀಗೆ ಎಲ್ಲವೂ ಭಾರತದ ಅತಿ ದೊಡ್ಡ ಡಿಜಿಟಲ್ ಯೋಜನೆಯ ವ್ಯಾಪ್ತಿಗೆ ಬಂದಿವೆ. ತಂತ್ರಜ್ಞಾನವನ್ನು ಗುಣಾತ್ಮಕ ಚಟುವಟಿಗಳಿಗೆ ಬಳಸುವ ಅಗತ್ಯವಿದೆ. ಈ ಕಾಲದಲ್ಲಿ ಪ್ರಧಾನ ದತ್ತಾಂಶಗಳು, ಕೃತಿಗಳು, ಸಂಶೊಧನ ಬರಹಗಳು ಡಿಜಿಟಲಿಕರಣಗೊಂಡಿವೆ ಎಂದರು.

ಪ್ರತಿಷ್ಠಾನ ನಿರ್ದೇಶಕ ಡಾ| ಭೀಮಾಶಂಕರ ಬಿರಾದಾರ ಮಾತನಾಡಿ, ಸದ್ಯದ ಸಮಾಜದ, ಜನಸಮೂಹದ ಬದುಕಿನ ಕ್ರಮ ಡಿಜಿಟಲ್ ತಂತ್ರಜ್ಞಾನದ ಮೇಲೆಯೇ ನಿಂತಿದೆ. ಈ ಕಾಲದ ವೈದ್ಯಕೀಯ, ಸಿನಿಮಾ, ಕೃಷಿ, ಶಿಕ್ಷಣ, ಆರ್ಥಿಕ ಮತ್ತು ರಾಜಕೀಯ ವಲಯಗಳು ಡಿಜಿಟಲ್ ತಂತ್ರಜ್ಞಾನದ ಪರಿಪ್ರೇಕ್ಷೆಯಲ್ಲಿವೆ. ಜಾಗತಿಕ ಮಟ್ಟದಲ್ಲಿ ಮತ್ತು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಹೊಸ ಸಮಶೋಧನೆ ಮತ್ತು ಆವಿಷ್ಕಾರಗಳು ನಿರಂತರ ನಡೆಯುತ್ತವೆ. ಬಿಕೆಇಸಿ ಪ್ರಭಾರಿ ಪ್ರಾಚಾರ್ಯ ಡಾ| ಅರುಣ್‌ಕುಮಾರ ಯಲಾಲ್ ಅಧ್ಯಕ್ಷತೆ ವಹಿಸಿದ್ದರು.

ಧಾರವಾಡ ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ, ಕೃಷಿ ವಿಜ್ಞಾನಿ ಪ್ರೊ| ವಿಜಯಕುಮಾರ ಗಿಡ್ನವರ್‌, ಜಯಶ್ರೀ ಗಿಡ್ನವರ್‌, ವೀರೇಶ ಮಠಪತಿ, ರಮೇಶ ಭೊಸ್ಲೆ, ಸ್ವರ್ಣಲತಾ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಸ್ವಾಗತಿಸಿದರು. ಸಂಜುಕುಮಾರ ಜಲ್ದೆ ನಿರೂಪಿಸಿದರು. ಡಾ| ಶಿವಾಜಿ ಮೇತ್ರೆ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ