ಮಾತೃಭಾಷೆಗೆ ಆದ್ಯತೆ ನೀಡಲು ಸಲಹೆ

ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ •ಹೈಟೆಕ್‌ ಖಾಸಗಿ ಶಾಲೆಗಳ ಪ್ರಚಾರಕ್ಕೆ ಮರುಳಾಗಬೇಡಿ

Team Udayavani, Aug 25, 2019, 10:58 AM IST

ಬಸವನಬಾಗೇವಾಡಿ: ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ನಡೆದ ನಿವೃತ್ತ ಹಾಗೂ ಆದರ್ಶ ಶಿಕ್ಷಕರ ಸನ್ಮಾನ ಸಮಾರಂಭವನ್ನು ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿದರು.

ಬಸವನಬಾಗೇವಾಡಿ: ಒಂದು ಕಾಲದಲ್ಲಿ ಶಿಕ್ಷಣದಿಂದ ಕೆಲವರು ವಂಚಿತರಾಗಿದ್ದರು. ಆದರೆ ಇಂದು ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಂತ ಕೆಲಸವಾಗುತ್ತಿದ್ದು ಇದರ ಜೊತೆಯಲ್ಲೇ ಅನೇಕ ಶಿಕ್ಷಣ ಸೌಲಭ್ಯಗಳು ಕೂಡಾ ಸಿಗುತ್ತಿವೆ ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು.

ಶನಿವಾರ ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಅಖೀಲ ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘ ತಾಲೂಕು ಘಟಕ ನಿವೃತ್ತ ಶಿಕ್ಷಕರಿಗೆ ಹಾಗೂ ಆದರ್ಶ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣವಾಗಿದೆ. ಆದರೆ ಅದು ಅವರವರ ವಿಷಯಕ್ಕೆ ಬಿಟ್ಟ ವಿಚಾರ. ಕೆಲ ಅನಕೂಲಸ್ಥರು ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ, ಇನ್ನೂ ಕೆಲವರು ಸರಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬೀದರ ಬಸವ ಸೇವಾ ಪ್ರತಿಷ್ಠಾನ ಬಸವಗಿರಿಯ ಅಕ್ಕ ಅನ್ನಪೂರ್ಣ ತಾಯಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ವಿಕಸಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಅದನ್ನು ಅರಿತು ಶಿಕ್ಷಣ ನೀಡಬೇಕಾದ ಅಗತ್ಯವಿದೆ. ಒಬ್ಬ ವ್ಯಕ್ತಿಯ ಜೀವನ ರೂಪಿಸುವ ಕೆಲಸ ಶಿಕ್ಷಕರ ಮೇಲಿರುತ್ತದೆ ಎಂದು ಹೇಳಿದರು.

ಸರಕಾರಗಳು ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಹೊರತು ಹಣ ಹಾಗೂ ಇನ್ನಿತರ ಉಚಿತ ಸೌಲಭ್ಯಗಳನ್ನಲ್ಲ. ಸರಕಾರಗಳು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಿ ಅವರನ್ನು ಉನ್ನತ ಸ್ಥಾನ ಮಾನಗಳಿಗೆ ಏರಿಸುವಂತ ಕಾರ್ಯವಾಗಬೇಕು. ಅದನ್ನು ಬಿಟ್ಟು ಅನ್ಯ ಭಾಷೆ ತಂದು ಮಾತೃ ಭಾಷೆಗೆ ಪೆಟ್ಟು ಕೊಡುವ ಕಾರ್ಯವಾಗಬಾರದು ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ, ಖಾಸಗಿ ಶಾಲೆಗಳ ದರ್ಬಾರ್‌ ನಡುವೆ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಆದರೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕೊರತೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸುದರು.

ಅನೇಕ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಆಂಗ್ಲ ಭಾಷೆ ಮಾತನಾಡಿದರೆ ಆ ಶಾಲೆ ಮತ್ತು ಆ ಶಿಕ್ಷಕ ಉತ್ತಮ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅವರಿಗಿಂತ ಸರಕಾರಿ ಶಾಲೆ ಶಿಕ್ಷಕರು ಹೆಚ್ಚು ಜ್ಞಾನ ಹೊಂದಿದ್ದು ಮಕ್ಕಳಿಗೆ ಉತ್ತಮ ಬೋಧನೆ ಮಾಡುತ್ತಾರೆ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ದೇವೇಂದ್ರ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಕೆ. ಕಲ್ಲೂರ, ಭಾರತ ಸೇವಾದಳ ಗೌರವಾಧ್ಯಕ್ಷ ಶಿವನಗೌಡ ಬಿರಾದಾರ, ಪಿ.ಯು. ರಾಠೊಡ, ಎ.ಎಲ್. ಗಂಗೂರ, ಎಸ್‌.ಜಿ. ಪಾಟೀಲ, ಎ.ಎಂ. ಹಳ್ಳೂರ, ಎಚ್.ಎ. ನಾಡಗೌಡ, ಎಂ.ಜಿ. ಅಗ್ನಿ, ಅ.ಕ.ಪ್ರಾ.ಶಿ. ಸಂಘದ ತಾಲೂಕಾಧ್ಯಕ್ಷ ಶರಣಪ್ಪ ಮಾದರ, ಎಂ.ಐ. ಉಪ್ಪಾರ, ಬಿ.ಎ. ಹೂಗಾರ, ಎಸ್‌.ಡಿ. ಮುಳಸಾವಡಗಿ, ವೈ.ಎನ್‌. ಬೇವೂರ, ಜಿ.ಎಂ. ಶೀಲವಂತ, ಎಸ್‌.ಎಂ. ಸಜ್ಜನ, ವಿ.ಎಸ್‌. ಬಿರಾದಾರ, ಎಂ.ಪಿ. ಸ್ವಾಮಿ ಆಗಮಿಸಿದ್ದರು.

ಆರ್‌.ಬಿ. ಗೌಡರ ಸ್ವಾಗತಿಸಿದರು. ಬಸವರಾಜ ಹಂಚಲಿ ನಿರೂಪಿಸಿದರು. ಬಿ.ವಿ. ಚಕ್ರಮನಿ ವಂದಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಮತ್ತು ಆದರ್ಶ ಶಿಕ್ಷಕರನ್ನು ಸನ್ಮಾನಿಸಲಾಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ