ಗೆದ್ದು ಜನರ ಮನದಿಂದ ಬಿದ್ದ ಕುಮಟಳ್ಳಿ

ಮತದಾರರಿಂದ ದೂರ; ಕಾರ್ಯಕರ್ತರ ಮನ ಭಾರ•ಶಾಸಕರ ವಿರುದ್ಧ ಪ್ರತಿಭಟನೆ ನಿರ್ಧಾರ

Team Udayavani, Jul 11, 2019, 1:14 PM IST

ಭೈರೋಬಾ ಕಾಂಬಳೆ
ಬೆಳಗಾವಿ:
ಜಿಲ್ಲೆಯ ಗಡಿ ತಾಲೂಕಿನಲ್ಲಿ 15 ವರ್ಷಗಳ ಬಳಿಕ ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಮಹೇಶ ಕುಮಟಳ್ಳಿ ನಿಷ್ಠಾವಂತ ಕೈ ವಲಯದಲ್ಲಿ ಬೇಸರವನ್ನುಂಟು ಮಾಡಿದ್ದರೆ, ಕಮಲ ಪಾಳೆಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.

ಒಂದೇ ವರ್ಷದಲ್ಲಿ ಕ್ಷೇತ್ರವನ್ನೇ ಮರೆತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬೆನ್ನು ಹತ್ತಿ ರಾಜೀನಾಮೆ ನೀಡಿರುವ ಮಹೇಶ ಕುಮಟಳ್ಳಿ ಬಗ್ಗೆ ಅಥಣಿ ಕ್ಷೇತ್ರದಲ್ಲಿ ಆಕ್ರೋಶದ ಕಾರ್ಮೋಡ ವ್ಯಾಪಿಸಿದೆ. ಗೆಲ್ಲಿಸಿ ಕೊಟ್ಟ ಮತದಾರರನ್ನು ಮರೆತು ರಾಜಕಾರಣದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕೆ ಜನರ ಆಕ್ರೋಶ ಭುಗಿಲೆದ್ದಿದೆ. ಆದರೆ ಬಿಜೆಪಿ ನಾಯಕರು ಮಾತ್ರ ಈ ಎಲ್ಲ ಬೆಳವಣಿಗೆಗಳಿಂದ ಮುಸಿ ಮುಸಿ ನಗುತ್ತಿದ್ದಾರೆ.

ಮೊದಲ ಬಾರಿ ಗೆದ್ದು ಕ್ಷೇತ್ರದ ಜನರೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಬದಲು ಬೆಂಗಳೂರಿನಲ್ಲಿಯೇ ಹೆಚ್ಚು ಕಾಲ ಕಳೆದಿರುವ ಮಹೇಶ ಬಗ್ಗೆ ಕ್ಷೇತ್ರದ ಜನ ಸಿಟ್ಟಿಗೆದ್ದಿದ್ದಾರೆ. 2018ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ಅಲೆ ಇದ್ದಾಗಲೂ ಹಾಗೂ ಮಾಜಿ ಶಾಸಕ ಲಕ್ಷ್ಮಣ ಸವದಿಯ ವರ್ಚಸ್ಸಿನ ಮಧ್ಯೆಯೂ ಮಹೇಶ ಕುಮಟಳ್ಳಿಯನ್ನು ಮತದಾರರು ಗೆಲ್ಲಿಸಿ ಕಳುಹಿಸಿದ್ದಾರೆ.ರಾಜೀನಾಮೆಯತ್ತಲೇ ಮಹೇಶ ದೃಷ್ಟಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಉಂಟಾಗಿದೆ. ಶಾಸಕರ ಒಂದು ವರ್ಷದ ಅವಧಿಯ ಕೆಲಸವೇ ಜನರಿಗೆ ಬೇಸರವನ್ನುಂಟು ಮಾಡಿದೆ. ಹೀಗಾಗಿ ಈ ಸಿಟ್ಟನ್ನು ಕ್ಷೇತ್ರದ ಜನ ಲೋಕಸಭೆ ಚುನಾವಣೆಯಲ್ಲಿಯೇ ಕಾಂಗ್ರೆಸ್‌ ವಿರುದ್ಧ ಬಹಿರಂಗ ಪಡಿಸಿದ್ದು, ಈ ಮಧ್ಯೆಯೂ ಶಾಸಕ ಕುಮಟಳ್ಳಿ ಈವರೆಗೆ ಯಾವುದೇ ಪಕ್ಷ ಸಂಘಟನೆಯಾಗಲೀ ಅಥವಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳದೇ ರಾಜೀನಾಮೆಯತ್ತಲೇ ದೃಷ್ಟಿ ನೆಟ್ಟಿದ್ದು ಜನರ ಪಿತ್ತ ಮತ್ತಷ್ಟು ಏರಿಸುವಂತೆ ಮಾಡಿದೆ.ಬರ ಇದ್ದಾಗ ಕ್ಷೇತ್ರ ಮರೆತರು: ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಬೇಸಿಗೆ ವೇಳೆ ಎಂದೂ ಕಂಡು ಕೇಳಲರಿಯದಷ್ಟು ಬರ ಆವರಿಸಿತ್ತು. ನೀರಿಲ್ಲದೇ ಕೃಷ್ಣಾ ನದಿ ಬತ್ತಿ ಹೋಗಿತ್ತು. ಮೂರ್‍ನಾಲ್ಕು ತಿಂಗಳು ಜನ-ಜಾನುವಾರುಗಳು ನೀರಿಗಾಗಿ ಪರಿತಪಿಸಿದ್ದನ್ನು ಯಾರೂ ಮರೆತಿಲ್ಲ. ಇಂಥದರಲ್ಲಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಾರದ್ದಕ್ಕೆ ಜನರು ಶಾಸಕರ ವಿರುದ್ಧವೇ ಆಕ್ರೋಶಗೊಂಡಿದ್ದರು.

ಕುಮಟಳ್ಳಿ ರಾಜೀನಾಮೆ ಹಾಗೂ ರಾಜ್ಯ ರಾಜಕಾರಣದ ಬೆಳವಣಿಗೆ ಬಿಜೆಪಿಯ ಮಾಜಿ ಸಚಿವ ಲಕ್ಷ್ಮಣ ಸವದಿ ಬೆಂಬಲಿಗರು ಹಾಗೂ ಬಿಜೆಪಿ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಶಾಸಕರ ಬಗ್ಗೆ ಜನ ರೊಚ್ಚಿಗೆದ್ದಿದ್ದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿರುವ ಸವದಿ ಬೆಂಬಲಿಗರು ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಸವದಿಯನ್ನೇ ಕಣಕ್ಕಿಳಿಸುವ ಬಗ್ಗೆ ಚಿಂತನೆಯಲ್ಲಿ ತೊಡಗಿದ್ದಾರೆ.ಬೆನ್ನೆಲುಬಾಗಿ ನಿಲ್ಲದ ಶಾಸಕ: ತಾಲೂಕಿನಲ್ಲಿ ನೀರಿಲ್ಲದೇ ಇಡೀ ಕ್ಷೇತ್ರವೇ ಪರಿತಪಿಸುತ್ತಿದ್ದಾಗ ರಾಜೀನಾಮೆ ನೀಡಿ ಹೊರ ಬಂದು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಶಾಸಕರು ಮಾಡಲಿಲ್ಲ. ಜನರ ಸಮಸ್ಯೆ ಬಗೆಹರಿಸಲು ಬೆನ್ನೆಲುಬಾಗಿ ನಿಲ್ಲಲಿಲ್ಲ. ಈಗ ರಮೇಶ ಜಾರಕಿಹೊಳಿ ಅವರ ಮಾತು ಕೇಳಿ ರಾಜೀನಾಮೆ ಕೊಟ್ಟು ಮುಂಬೈ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ. ಇಂಥ ಶಾಸಕರ ಬಗ್ಗೆ ನಮಗೆ ಬೇಸರ ಆಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್‌ನ ನಾಯಕೊರೊಬ್ಬರು ಅಸಮಾಧಾನ ತೋಡಿಕೊಂಡರು.

ಕಾರ್ಯಕರ್ತರು ಹಗಲಿರುಳು ದುಡಿದು ಶಾಸಕರನ್ನು ಆಯ್ಕೆ ಮಾಡಿಕೊಟ್ಟಿದ್ದಾರೆ. ಆದರೆ ಮಾತೃ ಪಕ್ಷಕ್ಕೆ ದ್ರೋಹ ಬಗೆದ ಕುಮಠಳ್ಳಿ ಬಗ್ಗೆ ವಿರುದ್ಧ ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಹೇಗಾದರೂ ಮಾಡಿ ರಾಜೀನಾಮೆ ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಐದು ವರ್ಷಕ್ಕೆ ಆಯ್ಕೆಯಾದ ಕುಮಟಳ್ಳಿ ಕೇವಲ 13 ತಿಂಗಳಲ್ಲಿಯೇ ಹಿಂದಕ್ಕೆ ಸರಿದಿದು ಕ್ಷೇತ್ರದಿಂದ ಪಲಾಯನಗೈಯ್ಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ