ಈ ಬಾರಿ ಇಲ್ಲ ನೀರಿನ ಸಮಸ್ಯೆ ಕೃಷ್ಣೆಯ ಒಡಲಾಳದಲ್ಲಿ ಜೀವಜಲ ಸಮೃದ್ಧಿ
ಹಿಪ್ಪರಗಿ ಜಲಾಶಯದಲ್ಲಿ 3.37 ಟಿಎಂಸಿ ಅಡಿ ನೀರು ಸಂಗ್ರಹ !
Team Udayavani, May 5, 2021, 8:11 PM IST
ಸಂಬರಗಿ: ಕೃಷ್ಣಾ ನದಿ ಬೇಸಿಗೆಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಹರಿಯುತ್ತಿರುವು ದರಿಂದ ನದಿ ದಂಡೆಯ ನೂರಾರು ಗ್ರಾಮಗಳಿಗೆ ವರವಾಗಿ ಪರಿಣಮಿಸಿದೆ. ಕೃಷ್ಣಾ ತನ್ನ ಒಡಲು ಬರಿದು ಮಾಡಿಕೊಳ್ಳದೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ರೈತರ ವ್ಯವಸಾಯಕ್ಕೆ ಅನುಕೂಲವಾಗಿದ್ದು, ಈ ವರ್ಷ ನೀರಿನ ಸಮಸ್ಯೆ ತಲೆದೋರಿಲ್ಲ.
ಅಥಣಿ, ಕಾಗವಾಡ, ರಾಯಬಾಗ, ಜಮಖಂಡಿ ತಾಲೂಕುಗಳಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ಈ ತಾಲೂಕುಗಳ ಜನರಿಗೆ ಕುಡಿಯಲು, ವ್ಯವಸಾಯಕ್ಕೆ ಪ್ರಮುಖ ಆಕರವಾಗಿದೆ. ಹಿಪ್ಪರಗಿ ಜಲಾಶಯ ಒಟ್ಟು 6 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಶನಿವಾರದ ಮಾಹಿತಿಯಂತೆ ಹಿಪ್ಪರಗಿ ಜಲಾಶಯದಲ್ಲಿ 3.37 ಟಿಎಂಸಿ ಅಡಿ ನೀರು ಸಂಗ್ರಹವಿದೆ.
ಕುಡಿಯುವ ನೀರು, ವ್ಯವಸಾಯ ಚಟುವಟಿಕೆಗೆ ಮುಂದಿನ ಮೂರು ತಿಂಗಳು ಯಾವುದೇ ಕೊರತೆ ಎದುರಾಗುವುದಿಲ್ಲ. ಪ್ರತಿ ವರ್ಷ ಬೇಸಿಗೆಯಲ್ಲಿ ಸಂದರ್ಭದಲ್ಲಿ ನದಿ ಖಾಲಿ ಬಿಸಿಲಿನ ತಾಪಕ್ಕೆ ಜಲಚರಗಳ ಜೀವಕ್ಕೂ ಆಪತ್ತು ಬಂದೋದಗಿತ್ತಿತ್ತು. ಈ ವರ್ಷ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇರುವುದರಿಂದ ಸಕಲ ಜೀವಸಂಕುಲಕ್ಕೂ ವರವಾಗಿ ಪರಿಣಮಿಸಿದೆ.
ಅಥಣಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯವಸಾಯವನ್ನೇ ಮೂಲ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ನಂದೇಶ್ವರ, ಮಹಿಷವಾಡಗಿ, ಸತ್ತಿ, ಸವದಿ, ಜನವಾಡ, ದೊಡವಾಡ, ನಾಗನೂರ ಪಿ.ಕೆ. ಅವರಖೋಡ, ದರೂರ, ಹಲ್ಯಾಳ, ಖವಟಕೊಪ್ಪ, ಶೇಗುಣಶಿ, ರಡ್ಡೇರಹಟ್ಟಿ ಹಾಗೂ ಮಡ್ಡಿಭಾಗದ ಅನೇಕ ಗ್ರಾಮಗಳ ರೈತರಿಗೆ ಅನುಕೂಲವಾಗಿದೆ. ಅಥಣಿ, ಜಮಖಂಡಿ ಪಟ್ಟಣ, ರಬಕವಿ- ಬನಹಟ್ಟಿ ನಗರಗಳಿಗೆ, ರಾಯಬಾಗ ತಾಲೂಕು ಸೇರಿದಂತೆ ಅನೇಕ ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರು ಯೋಜನೆಗೂ ನೀರಿನ ಕೊರತೆ ಎದುರಾಗುವುದಿಲ್ಲ.