ಜನರನ್ನು ಕೈ ಬೀಸಿ ಕರೆಯುತ್ತಿದೆ ಸಸ್ಯ ಸಂತೆ

|ಹ್ಯೂಂ ಪಾರ್ಕ್‌ನಲ್ಲಿ ಜೂ. 30ರ ವರೆಗೆ ಇರಲಿದೆ ಸಂತೆ |ತೋಟಗಾರಿಕೆ ಅಭಿಯಾನಕ್ಕೆ ಸತೀಶ ಚಾಲನೆ

Team Udayavani, Jun 10, 2019, 9:23 AM IST

ಬೆಳಗಾವಿ: ಬೇಸಿಗೆ ಮುಗಿದು ಮಳೆಗಾಲಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಸಸ್ಯಗಳಿಗೆ ಭಾರೀ ಬೇಡಿಕೆ. 21 ದಿನಗಳ ಕಾಲ ನಗರದ ಹ್ಯೂಂ ಪಾರ್ಕ್‌ನಲ್ಲಿ ನಡೆಯಲಿರುವ ಸಸ್ಯ ಸಂತೆಗೆ ರವಿವಾರ ಚಾಲನೆ ಸಿಕ್ಕಿದ್ದು, ವಿವಿಧ ಸಸ್ಯಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.

ತೋಟಗಾರಿಕೆ ಇಲಾಖೆ ಹಾಗೂ ಜಿಪಂ ವತಿಯಿಂದ ರವಿವಾರದಿಂದ ಆರಂಭಗೊಂಡಿರುವ ಸಸ್ಯ ಸಂತೆ ಹಾಗೂ ತೋಟಗಾರಿಕಾ ಅಭಿಯಾನ ಜೂ. 30ರ ವರೆಗೆ ನಡೆಯಲಿದೆ. ವಿವಿಧ ಬಗೆಯ ಸಸ್ಯಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಮೊದಲ ದಿನ ಅಷ್ಟೊಂದು ಬೇಡಿಕೆ ಇರದಿದ್ದರೂ ಮಳೆಗಾಲ ಆರಂಬವಾಗುತ್ತಿದ್ದಂತೆ ಈ ಸಸ್ಯಗಳಿಗೆ ಬೇಡಿಕೆ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.

ಜಿಲ್ಲೆಯ 28 ತೋಟಗಾರಿಕಾ ಕ್ಷೇತ್ರಗಳಲ್ಲಿ ಸುಮಾರು 3.73 ಲಕ್ಷಕ್ಕೂ ಹೆಚ್ಚು ಸಸ್ಯಗಳು ಇಲ್ಲಿ ಸಿದ್ಧಗೊಂಡಿವೆ. ಸದ್ಯ 8 ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ಹ್ಯೂಂ ಪಾರ್ಕ್‌ನಲ್ಲಿ ಇಡಲಾಗಿದೆ. ಮಾವು, ತೆಂಗು, ಪಾಮ್‌, ಕರಿ ಬೇವು, ಮೆಣಸಿನಕಾಯಿ, ಬದನೆಕಾಯಿ, ನೇರಳೆ, ನಿಂಬೆ , ಹುಣಸೆ, ಸೀತಾಫಲ ಸೇರಿದಂತೆ ವಿವಿಧ ಬಗೆಯ ಸಸ್ಯಗಳು ಇಲ್ಲಿ ಲಭ್ಯ ಇವೆ ಎಂದು ಜಿಲ್ಲಾ ಪಂಚಾಯತ್‌ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ ಮಾಹಿತಿ ನೀಡಿದರು.

ಇನ್ನು ಮುಂದಿನ 2-3 ದಿನಗಳಲ್ಲಿ ಜನರಿಗೆ ಹತ್ತಿರವಾಗಲಿ ಎಂಬ ಉದ್ದೇಶದಿಂದ ಬಸ್‌ ನಿಲ್ದಾಣ ಹಾಗೂ ದಕ್ಷಿಣ ಕ್ಷೇತ್ರದ ಆರ್‌ಪಿಡಿ ಕ್ರಾಸ್‌ ಬಳಿ ಸಸ್ಯ ಸಂತೆ ನಡೆಸಲಾಗುವುದು. ಇದರಿಂದ ಜನರಿಗೆ ಸಸ್ಯ ಖರೀದಿಸಲು ಅನುಕೂಲವಾಗುತ್ತದೆ ಎಂದು ರವೀಂದ್ರ ಹಕಾಟಿ ತಿಳಿಸಿದರು.

ತೋಟಗಾರಿಕೆ ಇಲಾಖೆಯಡಿ ಅಲಂಕಾರಿಕ ಹಾಗೂ ತರಕಾರಿ ಸಸ್ಯಗಳೂ ಇವೆ. ಸದ್ಯ 3,73,189 ಸಸ್ಯಗಳನ್ನು ಸಿದ್ಧ ಮಾಡಿಕೊಳ್ಳಲಾಗಿದ್ದು, ಈ ಪೈಕಿ 1.18 ಲಕ್ಷ ನುಗ್ಗೆ ಹಾಗೂ ಇತರೆ ತರಕಾರಿ ಸಸ್ಯಗಳು ಲಭ್ಯ ಇವೆ. 62,088 ಮಾವು ಸಸ್ಯ, 69,794 ಅಲಂಕಾರಿಕ ಹಾಗೂ ಹಲಸು ಸಸ್ಯಗಳು, 33161 ಸಪೋಟ ಸಸ್ಯ, 20,954 ಸೀಬೆ ಸಸ್ಯ, 33,505 ನಿಂಬೆ ಸಸ್ಯ, 22,439 ಕರಿಬೇವು ಸಸ್ಯಗಳನ್ನು ಜಿಲ್ಲೆಯಾದ್ಯಂತ ತೋಟಗಾರಿಕೆ ಇಲಾಖೆಯ ವಿವಿಧ ಕ್ಷೇತ್ರಗಳಲ್ಲಿ ಲಭ್ಯ ಇವೆ ಎಂದು ಹಕಾಟೆ ಅವರು ವಿವರ ನೀಡಿದರು.

ಆಪೂಸ್‌ ಮಾವು ಸಸ್ಯಕ್ಕೆ 32 ರೂ., ಮೆಣಸಿನಕಾಯಿ ಹಾಗೂ ಬದನೆಕಾಯಿ ಸಸ್ಯಕ್ಕೆ ತಲಾ ಒಂದು ರೂ., ಪೇರಲ ಸಸ್ಯ 35 ರೂ., ಕರಿಬೇವು ಸಸ್ಯ 12 ರೂ., ಮಾವು ಮಲ್ಲಿಕಾ ತಳಿ 32 ರೂ., ನೇರಳೆ ಸಸ್ಯ 30 ರೂ., ಸೀತಾಫಲ ಸಸ್ಯ 28 ರೂ., ಪಾಮ್‌ 28 ರೂ., ಬಾಟಲ್ ಪಾಮ್‌ 150 ರೂ., ಅಲಂಕಾರಿಕ ಸಸ್ಯಗಳಿಗೆ 20, 30, 40, 50 ರೂ. ಹೀಗೆ ದರ ನಿಗದಿ ಪಡಿಸಲಾಗಿದೆ.

ಪ್ರಸಕ್ತ ವರ್ಷದಿಂದ ರಾಜ್ಯದ ಪ್ರತಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯ:

ನಗರದ ಕ್ಲಬ್‌ ರಸ್ತೆಯ ಹ್ಯೂಂ ಪಾರ್ಕ್‌ನಲ್ಲಿ ರವಿವಾರದಿಂದ ಜೂ. 30ರ ವರೆಗೆ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿರುವ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಪರಿಸರ ಹಾಗೂ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಸಸ್ಯ ಸಂತೆ ಆಯೋಜಿಸುವುದರಿಂದ ಪರಿಸರ ಬೆಳೆಸಲು ಅನುಕೂಲಕರವಾಗಲಿದೆ. ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಪ್ರತಿ ವರ್ಷ ಈ ಸಸ್ಯ ಸಂತೆ ಹಮ್ಮಿಕೊಳ್ಳುವುದರಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಸ್ಯಗಳ ಮಾರಾಟ ಪ್ರಮಾಣದಲ್ಲಿಯೂ ಏರಿಕೆ ಆಗುತ್ತಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ರಾಜ್ಯದ ಪ್ರತಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯ ಈ ವರ್ಷ ಇರಲಿದೆ. ಪ್ರತಿ ಮಕ್ಕಳಿಗೂ ಸಸ್ಯ ವಿತರಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಸಸ್ಯ ವಿತರಣೆ ಮಾಡಲಾಗುವುದು. ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟ ಪ್ರಕಾರ ರಾಜ್ಯದಲ್ಲೆಡೆ ಗಿಡ ನೆಡುವ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು. ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನೆಕ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ಜಿಪಂ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಿರಣಕುಮಾರ ಉಪ್ಪಾಳೆ ಸೇರಿದಂತೆ ಇತರರು ಇದ್ದರು.

ವಿವಿಧ 13 ವನ್ಯ ಪ್ರಾಣಿಗಳು ಬೆಳಗಾವಿಗೆ: ಸಚಿವ ಜಾರಕಿಹೊಳಿ

ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ಆರಂಭಿಸಲು ಉದ್ದೇಶಿಸಿರುವ ಪ್ರಾಣಿ ಸಂಗ್ರಹಾಲಯ ಕಾರ್ಯ ತ್ವರಿತಗತಿವಾಗಿ ಮುಗಿಯಲಿದ್ದು, ವಿವಿಧ 13 ತರಹದ ವನ್ಯ ಪ್ರಾಣಿಗಳನ್ನು ತರಲಾಗುವುದು. ಮೈಸೂರು ಬಿಟ್ಟರೆ ರಾಜ್ಯದ ಅತಿ ದೊಡ್ಡ ಪ್ರಾಣಿ ಸಂಗ್ರಹಾಲಯ ಇದಾಗಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ಹುಲಿಗಳನ್ನು ಸಂಗ್ರಹಾಲಯಕ್ಕೆ ತರಲು ಈಗಾಗಲೇ ಕಾಯ್ದಿರಿಸಲಾಗಿದೆ. ಸಿಂಹ ಸೇರಿದಂತೆ ಒಟ್ಟು 13 ವಿವಿಧ ತರಹದ ಪ್ರಾಣಿಗಳು ಇಲ್ಲಿಗೆ ಬರಲಿವೆ. ಸಂಗ್ರಹಾಲಯಕ್ಕೆ ನೀರಿನ ಸಮಸ್ಯೆ ಆಗದಂತೆ ಹಿಡಕಲ್ ಡ್ಯಾಂದಿಂದ ನೀರು ತರಿಸಿ ಕೆರೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಈಗಾಗಲೇ ಕೇರಳಕ್ಕೆ ಮಾನ್ಸೂನ್‌ ಪ್ರವೇಶವಾಗಿದ್ದು, ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಪ್ರವೇಶ ಆಗುವ ಸಾಧ್ಯತೆ ಇದೆ. ಸದ್ಯ ನಗರದಲ್ಲಿ ಕುಡಿಯುವ ನೀರಿನ ಅಭಾವ ಇಲ್ಲ. ಹಿಡಕಲ್ ಡ್ಯಾಂನಲ್ಲಿ ನೀರು ಇರುವುದರಿಂದ ಸಮಸ್ಯೆ ಆಗುವುದಿಲ್ಲ. ಮಳೆಗಾಲ ಆರಂಭವಾದರೆ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ