ಕಾಂಗ್ರೆಸ್‌ಗೆ ದೇಶದ ಕಾಳಜಿ;ಬಿಜೆಪಿಗೆ ಅಧಿಕಾರದ ಚಿಂತೆ

Team Udayavani, Mar 5, 2019, 7:45 AM IST

ಅಥಣಿ: ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಯಾವ ಹಂತಕ್ಕೆ ಹೋಗುತ್ತಾರೆ ಎಂಬುದು ಜನ ಸಾಮಾನ್ಯರಿಗೂ ಗೊತ್ತು. ಇವತ್ತು ಸೇನೆಯ ಹೆಸರಲ್ಲಿ ಚುನಾವಣೆ ಸೋಲು ಗೆಲುವು ಲೆಕ್ಕಾಚಾರ ಹಾಕುವ ಮನೋಭಾವ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ಪೌರಾಡಳಿತ ಸಚಿವ ಯು.ಟಿ. ಖಾದರ ಹೇಳಿದರು.

ಸ್ಥಳೀಯ ಗಚ್ಚಿನಮಠದ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಈ ದೇಶ ಮತ್ತು ಯೋಧರ ಚಿಂತೆಯಾದರೆ ಬಿಜೆಪಿಗೆ ಅಧಿಕಾರದ ಚಿಂತೆಯಾಗಿದೆ. ಯಡಿಯೂರಪ್ಪನಂಥವರಿಗೆ ಚುನಾವಣೆಯಲ್ಲಿ ಸ್ಥಾನ ಗೆಲ್ಲುವ ಚಿಂತೆಯಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೀಯ ವಿಷಯವಾಗಿದೆ ಎಂದರು.

ಈ ವಿಷಯದ ಕುರಿತು ಬಿಜೆಪಿಯವರು ಯಡಿಯೂರಪ್ಪನವರ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕು. ನೀಜವಾಗಿ ಮೋದಿ ಮತ್ತು ಅಮಿತ ಶಾ ಅವರಿಗೆ ಈ ದೇಶ ಹಾಗೂ ಸೇನೆಯ ಮೇಲೆ ಅಭಿಮಾನವಿದ್ದರೆ ಯಡಿಯುರಪ್ಪನವರ ಮೇಲೆ ಕ್ರಮ ಜರುಗಿಸಲಿ ಎಂದು ಸವಾಲು ಹಾಕಿದರು. 

ವಿಧಾನ ಸಭೆ ಚುನಾಚಣೆಯಲ್ಲಿ ರಾಜ್ಯದ ಜನರು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮಿಶ್ರ ಸರ್ಕಾರಕ್ಕೆ ಅಧಿಕಾರದ ಅವಕಾಶ ದೊರಕಿಸಿ ಕೊಟ್ಟಿದೆ. ಅದಕ್ಕೆ ಅನುಗುಣವಾಗಿ ಸಮಿಶ್ರ ಸರ್ಕಾರ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಆದರೆ
ಬಿಜೆಪಿ ಮೇಲಿಂದ ಮೇಲೆ ಸಮಿಶ್ರ ಸರ್ಕಾರದ ಸಾಧನೆಯನ್ನು ಸಹಿಸದೇ ಸಮಿಶ್ರ ಸರ್ಕಾರವನ್ನು ಅಸ್ಥಿರ ಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸಾಲಮನ್ನಾ ಮಾಡುವುದು ಅಸಾಧ್ಯ ಎಂದು ಬಿಜೆಪಿ ಹೇಳಿತ್ತು. ಆದರೆ ಸಮಿಶ್ರ ಸರ್ಕಾರ ದೇಶಕ್ಕೆ ಮಾದರಿಯಾಗಿ ಸಾಲಮನ್ನಾ ಮಾಡಿ ಇದು ಸಾಧ್ಯ ಎಂದು ತೋರಿಸಿದೆ. ಕೇಂದ್ರ ಸರ್ಕಾರ ರೈತರಿಗೆ ಏನಾದರು ಮಾಡಬಹುದು ಎಂಬ ಆಲೋಚನೆ ಇತ್ತು. ಆದರೆ ಕೇಂದ್ರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಜನಪರ ಕಾರ್ಯಗಳನ್ನು ಮಾಡುತ್ತಿರುವ ಸಮಿಶ್ರ ಸರ್ಕಾರದ ಯಶಸ್ಸು ಸಹಿಸದ ಕೇಂದ್ರ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಸಮ್ಮಿಶ್ರ ಸರ್ಕಾರ ಇವತ್ತು ಬೀಳುತ್ತೆ, ನಾಳೆ ಬೀಳುತ್ತೆ ಎಂದು ಹೇಳಿ ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡುವ ಮೂಲಕ ಅತ್ಯಂತ ಕೀಳು ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ. ಇದರ ಹಿಂದೇ ಪ್ರಧಾನಿ ಮೋದಿ ಹಾಗೂ ಅಮಿತ ಶಾ ಅವರ ಕೈವಾಡವಿದೆ ಎಂದು ಆರೋಪಿಸಿದರು.

ಸಂವಿಧಾನಕ್ಕೆ ವಿರುದ್ಧವಾಗಿ ಬೇರೆ ಬೇರೆ ಆಮಿಷ ಒಡ್ಡುವ ಮೂಲಕ ಶಾಸಕರನ್ನು ಖರೀದಿ ಮಾಡುವ ವಿಚಾರವನ್ನು ಬಿಜೆಪಿ ಮಾಡುತ್ತಾ ಬರುತ್ತಿದೆ. ಬಿಜೆಪಿಗೆ ಸಮಿಶ್ರ ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಐದು ವರ್ಷ ಅಧಿಕಾರಾವಧಿಯನ್ನು ಸಮ್ಮಿಶ್ರ ಸರ್ಕಾರ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷ ಒಂದು ಸಾಗರವಿದ್ದಂತೆ ಇಲ್ಲಿ ಎಂತೆಂಥವರು ಬರುತ್ತಾರೆ ಹೋಗುತ್ತಾರೆ. ಆದರೆ ಪಕ್ಷ ಮಾತ್ರ ಸ್ಥಿರವಾಗಿದೆ. ನಮ್ಮ ಪಕ್ಷವನ್ನು ಬಿಟ್ಟು
ಹೋಗುವರು ಅಧಿಕಾರ ಕಳೆದುಕೊಳ್ಳುತ್ತಾರೆ ಹೊರತು ಬೇರೆ ಪಕ್ಷಕ್ಕೆ ಹೋಗಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಇದು ಅವರಿಗೆ ನಷ್ಟ ಹೊರತು ನಮಗಲ್ಲ ಎಂದರು. ಕೇಂದ್ರದಲ್ಲಿ ಬಿಜೆಪಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಐದು ವರ್ಷಗಳು ಮುಗಿಯುತ್ತ ಬಂದರೂ ಜನರಿಗಾಗಿ ಒಂದಾದರೂ ಒಳ್ಳೆಯ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಮೋದಿಯವರು ಮನಕೀ ಬಾತ್‌ ಎಂದು ಹೇಳಿ ರೇಡಿಯೋದ ಮುಂದೆ ಕುಳಿತು ಚರ್ಚೆಮಾಡುವುದಲ್ಲ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಕುಳಿತು ಚರ್ಚೆ ಮಾಡಲಿ. ದೇಶಕ್ಕಾಗಿ ಹುತಾತ್ಮರಾದ ಸೈನಿಕರ ಹೆಸರಲ್ಲಿ ಬಿಜೆಪಿಯವರು ರಾಜಕೀಯ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.

ದೇಶ ನಡೆಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದೇಶ ನಡೆಸಲು ಇವರಿಂದ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ದೇಶದ ಕುರಿತು
ಯುವಕರು ವಿದ್ಯಾರ್ಥಿಗಳು ಮತ್ತು ತಾಯಂದಿರು ಬಹಳ ಆಲೋಚನೆ ಮಾಡಿಕೊಂಡು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತೆ. ಈ ವೇಳೆ ಗಜಾನನ ಮಂಗಸೂಳಿ, ಅಸ್ಲಂ ನಾಲಬಂದ, ಸಲಾಂ ಕಲಿ, ಅನೀಲ ಸುಣದೋಳಿ, ಸುನೀಲ ಸಂಕ ಸೇರಿದಂತೆ ಅನೇಕರು ಇದ್ದರು. 

ಧಾರ್ಮಿಕ ಶಿಕ್ಷಣದಿಂದ ದುಷ್ಟಶಕ್ತಿಗೆ ಕಡಿವಾಣ
ಅಥಣಿ: ಧಾರ್ಮಿಕ ಶಿಕ್ಷಣದಿಂದ ಮಾತ್ರ ದುಷ್ಟಶಕ್ತಿಗಳನ್ನು ನಿವಾರಿಸಲು ಸಾಧ್ಯ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ ಹೇಳಿದರು. ಇಲ್ಲಿನ ಗಚ್ಚಿನಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಭಯೋತ್ಪಾದನೆ ಹಾಗೂ ಆಂತರಿಕ ಭಯೋತ್ಪಾದನೆ ನಿರ್ಮೂಲನೆಯ ಮಾರ್ಗಗಳ ಚಿಂತನಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಭಯ ಹುಟ್ಟಿಸುವವರೆ ಭಯೋತ್ಪಾದಕರು. ಯುವ ಜನರ ಕಾನೂನು ಬಾಹಿರ ಚಟುವಟಿಕೆಗಳತ್ತ ಒಲವು ತೋರಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ಆದ್ದರಿಂದ ಭಯೋತ್ಪಾದನೆ ಹೊಡೆದೊಡಿಸಲು ಯುವಕರಿಗೆ ಧಾರ್ಮಿಕ ಅರಿವು ಅಗತ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಇಡಿ ಜಗತ್ತು ಭಯದ ಹೊಸ್ತಿಲಲ್ಲಿದೆ. ಇದೊಂದು ಆತಂಕಕಾರಿ ಅನ್ನೋ ಮನಸ್ಥಿತಿ ಎಲ್ಲರಲ್ಲೂ ಉದ್ಬವವಾಗುತ್ತಿದೆ. ಬಹಿರಂಗ ಭಯೋತ್ಪಾದನೆಗಿಂತ ಆಂತರಿಕ ಭಯೋತ್ಪಾದನೆ ಹೆಚ್ಚಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ನಮ್ಮಲ್ಲಿ ಸ್ವಾರ್ಥ ಮನೋಭಾವದಿಂದ ದ್ವೇಷಭಾವನೆ ಬೆಳೆಯುತ್ತಿದೆ. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಶರಣರ ವಚನಗಳು ಅಗತ್ಯವಾಗಿವೆ ಎಂದರು.

ಮಾಜಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಧುರಾಸೆಯೇ ಭಯೋತ್ಪಾದನೆಗೆ ಕಾರಣವಾಗಿದ್ದು, ಬಾಹ್ಯ ಹಾಗೂ ಆಂತರಿಕ ಭಯೋತ್ಪಾದನೆ ನಿರ್ಮೂಲನೆಗೆ ಪ್ರತಿಯೊಬ್ಬರು ಪಣ ತೊಡಬೇಕು ಎಂದರು.

ರಾಯಚೂರಿನ ಕೃಷಿ ತಜ್ಞೆ ಕವಿತಾ ಮಿಶ್ರಾ ಹಾಗೂ ಬೆಂಗಳೂರಿನ ಡಾ| ಎಸ್‌.ಎಸ್‌. ಕುಲಕರ್ಣಿ ಮಾತನಾಡಿ, ರೈತರು ಕಷ್ಟಗಳಿಗೆ ಎದೆಗುಂದದೇ ಕೃಷಿಯಲ್ಲಿ ಸಾಧನೆ ಮಾಡಲು ಮುಂದಾಗಬೇಕು ಎಂದರು. ಈ ವೇಳೆ ಚಂದ್ರಕಾಂತ ಪಾಟೀಲ, ಡಾ| ಜ್ಯೋತಿ, ಕೆ.ಎ. ವನಜೋಳ, ಗಚ್ಚಿನಮಠದ ಶಿವಬಸವ ಸ್ವಾಮೀಜಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ಉಪ ಚುನಾವಣೆ ಮುಗಿದು ಫಲಿತಾಂಶ ಬಂದ ಬೆನ್ನಲ್ಲೇ ಯಾರು ಉಪ ಮುಖ್ಯಮಂತ್ರಿ, ಯಾರಿಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಯಾರಿಗೆ ಎಂಬ ಚರ್ಚೆ ಜಿಲ್ಲೆಯಲ್ಲಿ...

  • ಮೂಡಲಗಿ: ಗೋಕಾಕ ಮತಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮ ಭಾರೀಗೆ ಬಿಜೆಪಿಯಿಂದ ರಮೇಶ ಜಾರಕಿಹೊಳಿ ಅವರು ಆಯ್ಕೆಯಾಗಿದರಿಂದ ಮೂಡಲಗಿ ಪಟ್ಟಣ ಸೇರಿದಂತೆ ಅರಭಾವಿ ಕ್ಷೇತ್ರದಲ್ಲಿ...

  • ಹಾರೂಗೇರಿ: ಅಬಾಜಿಯವರು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಸಹಸ್ರಾರು...

  • ಚಿಕ್ಕೋಡಿ: ಕೃಷ್ಣಾ ನದಿಗೆ ಕಟ್ಟಿರುವ ಕಲ್ಲೋಳ-ಯಡೂರ ಸೇತುವೆ ಕಳೆದ ಹತ್ತು ವರ್ಷಗಳಿಂದ ಶಿಥಿಲಗೊಂಡು ಈಗಲೋ ಆಗಲೋ ಬೀಳುವ ಹಂತ ತಲುಪಿದೆ. ಸೇತುವೆ ಮೇಲೆ ಭಾರಿ ವಾಹನಗಳು...

  • ಚಿಕ್ಕೋಡಿ: ರಾಜ್ಯದ ಅಂಗನವಾಡಿ ಕಟ್ಟಡಗಳಿಗೆ ಪುನನಿರ್ಮಾಣ ಹಾಗೂ ನವೀಕರಣದ ಅವಶ್ಯಕವಿದ್ದು, ಕೂಡಲೇ ಕೇಂದ್ರ ಸಚಿವರು ಗಮನ ಹರಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು...

ಹೊಸ ಸೇರ್ಪಡೆ