ಸತತ ಮಳೆಗೆ ಉಕ್ಕಿದ ಕೃಷ್ಣೆ
•ನದಿ ನೀರಿನ ಮಟ್ಟ ಏರಿಕೆ•ಹಿಪ್ಪರಗಿ ಬ್ಯಾರೇಜ್‌ಗೆ 40,418 ಕ್ಯೂಸೆಕ್ ನೀರು
Team Udayavani, Jul 28, 2019, 3:57 PM IST
ಚಿಕ್ಕೋಡಿ: ಕಲ್ಲೋಳ ಹತ್ತಿರ ಕೃಷ್ಣಾ ನದಿ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶ ಹಾಗೂ ತಾಲೂಕಾದ್ಯಂತ ಉತ್ತಮ ಮಳೆ ಸುರಿಯುತ್ತಿರುವುದರಿಂದ ಗಡಿ ಭಾಗದ ನದಿಗಳ ನೀರಿನ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.
ಮಹಾರಾಷ್ಟ್ರದ ಕೊಂಕಣ ಭಾಗವಾದ ಕೊಯ್ನಾ, ಮಹಾಬಳೇಶ್ವರ, ವಾರಣಾ ಮತ್ತು ರಾಧಾನಗರಿ, ಚಿಕ್ಕೋಡಿ ತಾಲೂಕಿನ ನಿಪ್ಪಾಣಿ, ಗಳತಗಾ, ಸೌಂದಲಗಾ, ಸದಲಗಾ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯಲು ಆರಂಭಿಸಿದೆ. ಇದರಿಂದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ಮೂರು ನದಿಗಳು ಮೈದುಂಬಿ ಹರಿಯಲಾರಂಭಿಸಿವೆ.
ಕೃಷ್ಣಾ ನದಿ ಉಗಮಸ್ಥಾನ ಮಹಾಬಳೇಶ್ವರ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕೊಯ್ನಾ ಪ್ರದೇಶದಲ್ಲೂ ಒಂದೇ ರಾತ್ರಿ 237 ಮಿಮೀ ಮಳೆ ಸುರಿದರೆ ಇತ್ತ ದೂಧಗಂಗಾ ನದಿ ಪ್ರದೇಶವಾದ ನವಜಾ ಪರಿಸರದಲ್ಲಿ 271 ಮಿ.ಮೀ ಮಳೆ ಸುರಿದಿದೆ. ಹೀಗಾಗಿ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಇದೇ ರೀತಿ ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿದ್ದರೆ ಮುಂದಿನ ಎರಡು ದಿನಗಳಲ್ಲಿ ಚಿಕ್ಕೋಡಿ ತಾಲೂಕಿನ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಎಲ್ಲ ಸೇತುವೆಗಳು ಜಲಾವೃತವಾಗುವ ಸಂಭವವಿದೆ.
ಈಗಾಗಲೇ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 32,322 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ದೂಧಗಂಗಾ ಮತ್ತು ವೇದಗಂಗಾ ನದಿಗಳಿಂದ 9 ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಸೇರುತ್ತದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 40, 418 ಕ್ಯೂಸೆಕ್ ನೀರು ಹರಿದು ಹಿಪ್ಪರಗಿ ಬ್ಯಾರೇಜಿಗೆ ಹೋಗುತ್ತಿದೆ. ಹಿಪ್ಪರಗಿ ಬ್ಯಾರೇಜ್ ಮೂಲಕ 19 ಸಾವಿರ ಕ್ಯೂಸೆಕ್ ನೀರು ಹರಿದು ಆಲಮಟ್ಟಿಗೆ ಹೋಗುತ್ತಿದೆ ಎಂದು ತಹಶೀಲ್ದಾರ ಡಾ| ಸಂತೋಷ ಬಿರಾದಾರ ಮಾಹಿತಿ ನೀಡಿದರು.
ಮಹಾರಾಷ್ಟ್ರದ ಮಳೆ ವಿವರ: ಕೊಯ್ನಾ-237 ಮಿ.ಮೀ, ನವಜಾ-271 ಮಿ.ಮೀ, ಮಹಾಬಳೇಶ್ವರ-204 ಮಿ.ಮೀ, ವಾರಣಾ-230 ಮಿ.ಮೀ, ಸಾಂಗಲಿ-18 ಮಿ.ಮೀ, ಕೊಲ್ಲಾಪುರ-80 ಮಿ.ಮೀ, ಕಾಳಮ್ಮವಾಡಿ-81 ಮಿ.ಮೀ, ರಾಧಾನಗರಿ-80 ಮಿ.ಮೀ, ಪಾಟಗಾಂವ-56 ಮಿ.ಮೀ ಮಳೆ ಸುರಿದಿದೆ.
ಚಿಕ್ಕೋಡಿ ತಾಲೂಕಿನ ಮಳೆ ವಿವರ: ಚಿಕ್ಕೋಡಿ-10.5 ಮಿಮೀ, ಅಂಕಲಿ-4.2 ಮಿಮೀ, ನಾಗರಮುನ್ನೋಳ್ಳಿ-6.4 ಮಿಮೀ, ಸದಲಗಾ-9.8 ಮಿ.ಮೀ, ಗಳತಗಾ-11.2 ಮಿಮೀ, ಜೋಡಟ್ಟಿ-4.0 ಮಿಮೀ, ನಿಪ್ಪಾಣಿ -22 ಮಿಮೀ, ನಿಪ್ಪಾಣಿ ಎಆರ್‌ಎಸ್-22.1 ಮಿಮೀ, ಸೌಂದಲಗಾ-17.2 ಮಿಮೀ ಮಳೆ ಸುರಿದಿದೆ.