ಕೋವಿಡ್ ಭೀತಿ ಮಧ್ಯೆಯೂ ಸಂತೆ ಜೋರು
ವ್ಯಾಪಾರಿಗಳು-ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಸಂತೆ
Team Udayavani, Apr 20, 2021, 7:51 PM IST
ರಾಯಬಾಗ: ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ತಾಲೂಕಿನಲ್ಲಿ ಮಾತ್ರ ಕೋವಿಡ್-19 ತಡೆಗಟ್ಟಲು ತಾಲೂಕಾಡಳಿತ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಪ್ರಜ್ಞಾವಂತ ನಾಗರಿಕರನ್ನು ಕೆರಳಿಸಿದೆ.
ಸೋಮವಾರ ರಾಯಬಾಗ ಪಟ್ಟಣದ ವಾರದ ಸಂತೆ ದಿನ ಆಗಿದ್ದು, ಸಂತೆಗೆ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದ ಕೂಡ ವ್ಯಾಪಾರ ವಹಿವಾಟಿಗಾಗಿ ಸಾವಿರಾರು ಜನರು ಬಂದು ಸೇರುತ್ತಾರೆ. ಪಟ್ಟಣದ ಸಂತೆ ತಾಲೂಕಿನಲ್ಲಿ ಅತೀ ದೊಡ್ಡ ಸಂತೆಯಾಗಿದೆ. ಕೋವಿಡ್ 2ನೇ ಅಲೆ ಹೆಚ್ಚುತ್ತಿರುವ ಈ ವೇಳೆಯಲ್ಲಿ ಸಂತೆಯಲ್ಲಿ ಯಾವುದೇ ಸಾಮಾಜಿಕ ಅಂತರ ಇಲ್ಲದೇ ಜನರು ಕಿಕ್ಕಿರಿದು ಸೇರಿ ಸಂತೆ ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂತು. ಅಷ್ಟೇ ಅಲ್ಲದೆ ಬಹುತೇಕ ವ್ಯಾಪಾರಸ್ಥರು ಮತ್ತು ಜನರು ಮಾಸ್ಕ್ ಧರಿಸದೇ ಹಾಗೇ ಸಂತೆಯಲ್ಲಿ ಓಡಾಡುತ್ತಿರುವುದು ಪ್ರಜ್ಞಾವಂತ ನಾಗರಿಕರಲ್ಲಿ ಆತಂಕ ಮೂಡಿಸಿದೆ.
ಕಳೆದ ತಿಂಗಳು ತಾಲೂಕಿನ ಬಾನವಸೌಂದತ್ತಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ತಾಲೂಕಿನ ಜನರಲ್ಲಿ ಆತಂಕ ಮೂಡಿಸಿತ್ತು. ಈಗ ಮತ್ತೆ ದಿನಾಲೂ ಕೊರೊನಾ ಪಾಸಿಟಿವ್ ಪ್ರಕರಣಗಳು ಬರುತ್ತಿರುವುದು ಜನರಲ್ಲಿ ಭಯ ಮತ್ತು ಆತಂಕ ಹೆಚ್ಚಿಸಿದೆ.
ತಾಲೂಕಾಡಳಿತ, ಪೊಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯತ ಅಧಿಕಾರಿಗಳು ಕೋವಿಡ್ 2ನೇ ಅಲೆ ನಿಯಂತ್ರಿಸಲು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದಕ್ಕೆ ಪಟ್ಟಣದ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿ ಕಾರಿಗಳು ಎಚ್ಚೆತ್ತುಕೊಂಡು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕಿದೆ.