ಹೊಲಾ ಕಸಕೊಂಡ್ರ ಹೊಟ್ಟಿಗಿ ಏನ ಮಣ್ಣ ತಿನ್ನೋದು?

•ಒಂದೊಂದು ಕುಟುಂಬಕ್ಕೆ ಇರೋದು 5-10 ಗುಂಟೆ ಹೊಲ •ಹೊಲ ಇಲ್ಲಾ ಅಂದ್ರ ಭಿಕ್ಷಾ ಬೇಡೋ ಪರಿಸ್ಥಿತಿ

Team Udayavani, Jun 11, 2019, 7:28 AM IST

ಬೆಳಗಾವಿ: ಹಲಗಾ ಗ್ರಾಮದ ಹೊಲದಲ್ಲಿ ಎಸ್‌ಟಿಪಿಗಾಗಿ ಭೂಮಿ ವಶಪಡಿಸಿಕೊಂಡು ನೆಲ ಸಮಗೊಳಿಸುತ್ತಿರುವುದು.

ಬೆಳಗಾವಿ: ಇರೋ ಒಂದ ಎಕರೆ ಹೊಲದಾಗ ನಾಲ್ಕೈದು ಜನ ಅಣ್ತಮ್ಮಂದಿರಿಗೆ ಹಂಚಿ ಹೋಗಿರೋ ಹೊಲ ಉಳಿದಿದ್ದು ಒಬ್ಬೊಬ್ಬರಿಗೆ ಎಂಟೋ ಹತ್ತ ಗುಂಟೆ. ಇಂಥಾ ಸ್ಥಿತಿಯೊಳಗ ಇದ್ದ ಹೊಲಾ ಕಸಕೊಂಡ್ರ ಮುಂದ ನಾವ ಹೊಟ್ಟಿಗಿ ಏನ್‌ ತಿನ್ನೋದು. ಹೊಲಾ ಹೋತಂದ್ರ ಕಲ್ಲ, ಮಣ್ಣ ತಿನ್ನೋ ಗತಿ ಬರತೈತಿ. ಇದೆಲ್ಲ ಸರ್ಕಾರದಾವರಿಗೆ ಯಾಕ ಗೊರ್ತ ಆಗವಾಲ್ತು ಅಂತೀವಿ.

ನಗರದಿಂದ ಅತೀ ಸಮೀಪದಲ್ಲಿರುವ ಹಾಗೂ ಸುವರ್ಣ ವಿಧಾನಸೌಧ ಮುಂಭಾಗದ ಹಲಗಾ ರೈತರ ಗೋಳಿದು. ಹಲಗಾ ಗ್ರಾಮದ 19 ಎಕರೆ ಜಮೀನಿನಲ್ಲಿ ನಿರ್ಮಾಣ ಮಾಡಲು ಹೊರಟಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ)ಕ್ಕಾಗಿ ಭೂಮಿ ಬಿಟ್ಟು ಕೊಡದಿರಲು ರೈತರು ನಿರ್ಧರಿಸಿದ್ದಾರೆ. ಇದ್ದ ಹೊಲ ಕಸಿದುಕೊಂಡರೆ ಮುಂದಿನ ನಮ್ಮ ಪೀಳಿಗೆಯ ಬದುಕು ಸಾಗುವುದು ಹೇಗೆ ಎಂಬ ಪ್ರಶ್ನೆ ಮರಾಠಿ ಮಿಶ್ರಿತ ಕನ್ನಡದಲ್ಲಿಯೇ ಕೇಳುತ್ತಿದ್ದಾರೆ ಇಲ್ಲಿಯ ರೈತರು.ಬಂಗಾರ ಬೆಳೆಯೋ ಹೊಲಕ್ಕ ಕನ್ನ: ವರ್ಷಕ್ಕ ಮೂರ್‍ನಾಲ್ಕ ಬೆಳಿ ಕೊಡೋ ಈ ಹೊಲ ಬಿಟ್ಟು ಕೊಡಾಕ ನಾವ ಒಪ್ಪೊದಿಲ್ಲ. ನಮಗ ಗೊತ್ತ ಇಲ್ಲದಂಗ ಸರ್ಕಾರದವರು ಕಬ್ಜಾ ಮಾಡ್ಕೊಳ್ಳಾಕ ಹತ್ತ್ಯಾರ. ಒಂದ ಮನ್ಯಾಗ ಒಂದೊಂದ ಕುಟುಂಬಕ್ಕ ಐದೋ, ಆರ್‌ ಗುಂಟೆ ಹೊಲ ಐತಿ. ಇಷ್ಟರೊಳಗ ಕುಟುಂಬ ಸಾಗಸೊದೈತಿ. ಈ ಹೊಲಕ್ಕ ಬಂಗಾರ ಬೆಳೆಯೋ ಅಷ್ಟ ತಾಕತ್ತ ಐತಿ. ವರ್ಷಕ್ಕ ನಾವ ಸಾಸಿವಿ, ಗೋಧಿ, ಭತ್ತ, ಚನ್ನಂಗಿ ಅಂತ ಮೂರ್‍ನಾಲ್ಕ ಬೆಳಿ ತೆಗಿತೀವಿ. ಆದ್ರ ಹೊಲಾನ ಹ್ವಾದ್ರ ಬೆಳೆಯೊದ ಎಲ್ಲಿಂದ, ಹೊಟ್ಟಿಗಿ ತಿನ್ನೋದ ಏನ್‌ ಎಂದು ಕಣ್ಣೀರು ಸುರಿಸಿದರು ಹಲಗಾ ಗ್ರಾಮದ ರೈತ ಗುಂಡು ಹೆಬ್ಟಾಜಿ.

ಹೆಬ್ಟಾಜಿ ಕುಟುಂಬಕ್ಕೆ ಒಟ್ಟು 1 ಎಕರೆ ಜಮೀನು ಇದೆ. ಇದರಲ್ಲಿ ನಾಲ್ವರು ಸಹೋದರರಿದ್ದು, ಎಲ್ಲರಿಗೂ ಹಂಚಿ ಹೋದರೆ ಕೇವಲ 10 ಗುಂಟೆ ಜಮೀನು ಪಾಲಾಗಿದೆ. ಗುಂಡು ಹೆಬ್ಟಾಜಿ, ಸದು ಹೆಬ್ಟಾಜಿ, ಕಲ್ಲಪ್ಪ ಹೆಬ್ಟಾಜಿ ಹಾಗೂ ಪರುಶರಾಮ ಹೆಬ್ಟಾಜಿ ಕುಟುಂಬದಲ್ಲಿದ್ದಾರೆ. ಒಟ್ಟಾರೆ 25ರಿಂದ 30 ಜನರ ಈ ಕುಟುಂಬ ಈ ಹೊಲದಿಂದಲೆ ಬದುಕು ಸಾಗಿಸುತ್ತಿದೆ. ಇಂಥದರಲ್ಲಿ ಜಮೀನು ವಶಕ್ಕೆ ಪಡೆದುಕೊಂಡರೆ ಮುಂದಿನ ಪೀಳಿಗೆ ಮಾಡುವುದಾದರೂ ಏನು. ನೌಕರಿ, ಉದ್ಯೋಗ ಇಲ್ಲದಿರುವ ಈ ಕುಟುಂಬಕ್ಕೆ ಈ ಜಮೀನೇ ಆಸರೆ. ಹೀಗಾಗಿ ಜಮೀನು ಬಿಟ್ಟು ಕೊಡಲು ರೈತರು ಸುತಾರಾಂ ಒಪ್ಪುತ್ತಿಲ್ಲ.ಎಸ್‌ಟಿಪಿಗೆ ಜಾಗ ಕೊಡಲ್ಲ: ಇದೇ ಗ್ರಾಮದ ದೇವಲತಕರ ಎಂಬ ಕುಟುಂಬಕ್ಕೆ ಒಟ್ಟು 1 ಎಕರೆ 5 ಗುಂಟೆ ಜಮೀನಿದೆ. ಇದರಲ್ಲಿ ಶಂಕರ ದೇವಲಕರ, ಗೋಪಾಲ ದೇವಲತಕರ, ನಾಗಪ್ಪ ದೇವಲತಕರ ಸೇರಿದಂತೆ ಐವರು ಸಹೋದರರು. ಇದರಲ್ಲಿ ತಲಾ ಒಬ್ಬರಿಗೆ 10 ಗುಂಟೆ ಬರುತ್ತದೆ. ಹೀಗಿರುವಾಗ ಹೊಲ ಹೋದರೆ ಭವಿಷ್ಯದ ಚಿಂತೆ ಮಾಡುತ್ತಿರುವ ಈ ಕುಟುಂಬದವರು, ನಮ್ಮ ಜಮೀನು ನಮಗೆ ಬಿಟ್ಟು ಬೇರೆ ಎಲ್ಲಾದರೂ ತಮ್ಮ ಯೂನಿಟ್ ಸ್ಥಾಪಿಸಿಕೊಳ್ಳಲಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಹೊಟ್ಟಿ ತುಂಬಿಸಿಕೊಳ್ಳೋದ ಕಷ್ಟಾ ಆಗಿರುವಾಗ ಈ ದಿನಮಾನದಾಗ ರೈತರ ಹೊಟ್ಟಿ ಮ್ಯಾಲ ಕಲ್ಲ ಹಾಕೋದು ಸರಿ ಅಲ್ಲ. ಒಂದ ವ್ಯಾಳೆ ಈ ಹೊಲ ಹೋತ ಅಂದ್ರ ನಮ್ಮ ಸಂಸಾರ ನಾಶ ಆಗತೈತಿ. ತುತ್ತ ಕೂಳಿಗೆ ಗತಿ ಇಲ್ಲದಂಗ ಆಗತೈತಿ. ಈಗ ಇದ್ದ ಹೊಲದಾಗ ನಾವ ಗೆಳೆ ಹೊಡದ, ನಾಟಿ ಮಾಡಿ ಬೆಳೆ ತಗದ ಹೊಟ್ಟಿ ತುಂಬ ಉಣ್ಣಾಕತ್ತೀವಿ. ಇದ ಇಲ್ಲ ಅಂದ್ರ ಭಿಕ್ಷಾ ಬೇಡೋ ಪರಸ್ಥಿತಿ ಬರೋದ ಗ್ಯಾರಂಟಿ. ಹಿಂಗಾಗಿ ನಮ್ಮ ಹೊಲ ನಮಗೆ ಇರಲಿ. ನೀವ ಬ್ಯಾರೆ ಕಡೆ ಜಾಗ ನೋಡ್ಕೊರಿ ಎಂದು ಆಕ್ರೋಶದ ಮಾತುಗಳನ್ನಾಡುತ್ತಾರೆ ರೈತ ಸುರೇಶ ಕಾನೋಜಿ, ಮಾರುತಿ ಕಾನೋಜಿ, ಕೇದಾರಿ ಕಾನೋಜಿ ಹಾಗೂ ಶಾಮರಾವ ಕಾನೋಜಿ.

ಒಂದು ಎಕರೆ ಹೊಲದಾಗ 6 ಚೀಲ ಚೆನ್ನಂಗಿ ಬೇಳೆ ಹಾಗೂ 30 ಚೀಲ ಬಾಸಮತಿ ಭತ್ತ ತೆಗಿತೀವಿ. ಮತ್ತ ತರಕಾರಿ ಅಂತ ಅಲ್ಪಸ್ವಲ್ಪ ಬೆಳೆಯೋದು ಈ ಹೊಲದ ವಿಶೇಷ. ಆದರ ಇಂಥ ಫಲವತ್ತಾದ ಜಮೀನು ಕಸಿದುಕೊಳ್ಳುತ್ತಿರುವ ಜಿಲ್ಲಾಡಳಿತದವರು ಬೇರೆ ಕಡೆಗೆ ಜಾಗ ನೋಡಬೇಕ. ಪಾಡ ಬಿದ್ದ ಜಾಗ ಭಾಳ ಐತಿ. ಅದನ್ನೆಲ್ಲ ಬಿಟ್ಟ ಇಂಥಾ ಫಸಲು ಕೊಡೋ ಹೊಲಕ್ಕೆ ಕೈ ಹಾಕೋದು ಸರಿ ಅಲ್ಲ.
• ಶಂಕರ ದೇವಲತಕರ, ಹಲಗಾಗ್ರಾಮದ ರೈತ
ನಮ್ಮ ಹೊಟ್ಟಿ ತುಂಬಿಸೋ ಹೊಲ ಕಸ್ಕೊಳ್ಳೊದನ್ನ ಯಾವ ದ್ಯಾವ್ರೂ ಒಪ್ಪೊದಿಲ್ಲ. ಬಂಗಾರ ಹಂಗ ಬೆಳೆ ಬರೋ ಈ ಹೊಲಕ್ಕ ಮಳಿನ ಆಸರಿ. ಬಿದ್ದ ಮಳಿಯಿಂದ ಬೆಳೆ ತೆಗಿತೀವಿ. ಈ ಭಾಗದಾಗ ಛಲೂ ಫಸಲ ಕೊಡೋ ಈ ಶೇತಿ(ಹೊಲ) ಮ್ಯಾಗ ಜೆಸಿಬಿ ಆಡಿಸಿ ದಬ್ಟಾಳಿಕೆ ಮಾಡ್ಯಾರ. ಮಾರುದ್ದ ಬೆಳೆದ ನಿಂತಿದ್ದ ಮೆಣಸಿನ ಗಿಡಗೋಳ ಮ್ಯಾಲೂ ಜೆಸಿಬಿ ಹಾಕಿಸ್ಯಾರ. ಇದೆಲ್ಲ ನೋಡಿದರ ಹೊಟ್ಟ್ಯಾಗ ಖಾರ ಕಲಿಸಿದಂಗ ಆಗಾತೈತಿ. • ಗುಂಡು ಹೆಬ್ಟಾಜಿ, ಹಲಗಾ ಗ್ರಾಮದ ರೈತ
•ಭೈರೋಬಾ ಕಾಂಬಳೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ