ಗೋಕಾಕ್‌ನಲ್ಲಿ ಗೆದ್ದು ಸಿದ್ದುಗೆ ಉಡುಗೊರೆ: ಲಖನ್‌

Team Udayavani, Nov 13, 2019, 8:38 PM IST

ಗೋಕಾಕ್‌: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಸಾಧಿಸಿ ಗೋಕಾಕ್‌ ಕ್ಷೇತ್ರವನ್ನು ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡುತ್ತೇನೆ ಎಂದು ಲಖನ್‌ ಜಾರಕಿಹೊಳಿ ಘೋಷಿಸಿದ್ದಾರೆ.

ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನಗೆ ಕಾಂಗ್ರೆಸ್‌ ಟಿಕೆಟ್‌ ಸಿಗುವುದು ನಿಶ್ಚಿತ. ಶಾಸಕ ಸತೀಶ್‌ ಜಾರಕಿಹೊಳಿ ಬಂದ ಅನಂತರ ಇನ್ನೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸಲಾಗುವುದು. ಸಹೋದರರ ಮಧ್ಯೆ ಮ್ಯಾಚ್‌ ಫಿಕ್ಸಿಂಗ್‌ ನಡೆದಿದೆ ಎಂಬ ವದಂತಿ ಸತ್ಯಕ್ಕೆ ದೂರವಾದದ್ದು. ಇಲ್ಲಿಯವರಿಗೆ ರಮೇಶ್‌ ಮತ್ತವರ ಅಳಿಯ ಅಂಬಿರಾವ್‌ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೇವೆ. ಇನ್ನು ಮುಂದೆ ಮಾವ-ಅಳಿಯನ ಭ್ರಷ್ಟಾಚಾರ ಹೊರಗೆಳೆಯುತ್ತೇವೆ ಎಂದರು.

ಅಶೋಕ್‌ ಪೂಜಾರಿ ಮತ್ತು ಕಾಂಗ್ರೆಸ್‌ ಮುಖಂಡರ ಭೇಟಿ ಸಹಜವಾದದ್ದು. ಚುನಾವಣೆ ಬಂದಾಗ ಮುಖಂಡರನ್ನು ಎಲ್ಲರೂ ಭೇಟಿ ಆಗುತ್ತಾರೆ. ಕಳೆದ ಐದು ಚುನಾವಣೆಗಳಲ್ಲಿ ಕಾಂಗ್ರೆಸ್‌ನ್ನು ಕ್ಷೇತ್ರದಲ್ಲಿ ಗೆಲ್ಲಿಸಿದ್ದೇವೆ. ಅಶೋಕ್‌ ಪೂಜಾರಿ ಮೂರು ಬಾರಿ ಸೋತಿದ್ದಾರೆ. ಈ ಹಿನ್ನೆಲೆಯಲ್ಲಿ ಗೋಕಾಕ್‌ ಕ್ಷೇತ್ರದ ಟಿಕೆಟ್‌ ನನಗೆ ದೊರೆಯುವುದು ಖಚಿತ ಎಂದರು.

ಪಟಾಕಿ ಸಿಡಿಸುವವರು ಮಾತ್ರ ರಮೇಶ್‌ ಜತೆಗಿದ್ದಾರೆ. ನಮ್ಮ ಜತೆ ಇಡೀ ಕ್ಷೇತ್ರದ ಜನರೇ ಇದ್ದಾರೆ. ಈಗಾಗಲೇ ಕ್ಷೇತ್ರಾದ್ಯಂತ ನಾಲ್ಕು ಸುತ್ತು ಪ್ರಚಾರ ನಡೆಸಲಾಗಿದೆ. ಇಲ್ಲಿಯ ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಗೋಕಾಕ್‌ ಕ್ಷೇತ್ರದ ಮತದಾರರ ಮನೋಭಾವ ಜಾರಕಿಹೊಳಿ ಸೋದರರಿಗೆ ಮಾತ್ರ ಗೊತ್ತು. ರಮೇಶ್‌ ಜಾರಕಿಹೊಳಿ ತಂತ್ರಗಾರಿಕೆ ನಮಗೆಲ್ಲ ತಿಳಿದಿದೆ. ಅದಕ್ಕೆ ಪ್ರತಿತಂತ್ರ ಹೇಗೆ ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ. ಚುನಾವಣ ಪ್ರಚಾರಕ್ಕೆ ಕಾಂಗ್ರೆಸ್‌ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಡಿ.ಕೆ. ಶಿವಕುಮಾರ್‌ ಆಗಮಿಸಲಿದ್ದಾರೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ