ನದಿ-ಜಲಾಶಯಗಳಿಗೆ ಜೀವಕಳೆ

•ಕುಡಿವ ನೀರಿಗಿಲ್ಲ ಇನ್ನು ಚಿಂತೆ•ನಿರಂತರ ಮಳೆಯಿಂದ ನೀರಾವರಿ ಆತಂಕವೂ ದೂರವಾಯ್ತು

Team Udayavani, Jul 12, 2019, 9:12 AM IST

ಬೆಳಗಾವಿ: ಖಾನಾಪುರ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ.

ಬೆಳಗಾವಿ: ಭೀಕರ ಬರಗಾಲ ಹಾಗೂ ಮಳೆಯ ಕೊರತೆಯಿಂದ ಸಂಪೂರ್ಣ ಖಾಲಿಯಾಗಿ ಭಣಗುಡುತ್ತಿದ್ದ ಬೆಳಗಾವಿ ಜಿಲ್ಲೆಯ ನದಿಗಳು ಹಾಗೂ ಜಲಾಶಯಗಳು ಮತ್ತೆಮೊದಲಿನಂತೆ ಮೈದುಂಬಿಕೊಂಡಿವೆ.

ಬೇಸಿಗೆ ಸಮಯದಲ್ಲಿ ಎಲ್ಲ ನದಿಗಳ ಒಡಲು ಪೂರ್ಣ ಬರಿದಾಗಿದ್ದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿತ್ತು. ಜಿಲ್ಲೆಯ ಜೀವನದಿ ಕೃಷ್ಣಾ ಸಂಫೂರ್ಣ ಬತ್ತಿದ್ದರಿಂದ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿತ್ತು. ನದಿ ಪಾತ್ರದ ಜನರ ನೀರಿನ ದಾಹ ತಣಿಸಲು ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡಿಸಬೇಕು ಎಂದು ಹೋರಾಟಗಳು ಸಹ ನಡೆದಿದ್ದವು. ಆದರೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬರಲಿಲ್ಲ.

ಆದರೆ ಈಗ ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ಘಟಪ್ರಭಾ, ಹಿರಣ್ಯಕೇಶಿ, ಮಲಪ್ರಭಾ. ವೇದಗಂಗಾ, ಮಾರ್ಕಂಡೇಯ, ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಮುಂಗಾರು ವಿಳಂಬದಿಂದ ಉಂಟಾಗಿದ್ದ ನೀರಿನ ಆತಂಕ ದೂರವಾಗುತ್ತಿದೆ.

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿ ಅನುಕೂಲ ಮಾಡಿರುವ ಘಟಪ್ರಭಾ ನದಿ ನಿಧಾನವಾಗಿ ತುಂಬಿಕೊಳ್ಳುತ್ತಿದೆ. ಮಹಾರಾಷ್ಟ್ರದ ಸಾವಂತವಾಡಿ ಹಾಗೂ ಅಂಬೋಲಿ ಘಟ್ಟ ಪ್ರದೇಶದಲ್ಲಿ ವ್ಯಾಪಕಮಳೆಯಾಗುತ್ತಿರುವುದರಿಂದ ಹುಕ್ಕೇರಿ ತಾಲೂಕಿನಲ್ಲಿ ಹರಿಯುತ್ತಿರುವ ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ.

ಜಲಾಶಯಗಳಿಗೆ ಕಳೆ: ಹಿಡಕಲ್, ಮಲಪ್ರಭಾ ಹಾಗೂ ಮಾರ್ಕಂಡೇಯ ಜಲಾಶಯಗಳ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿ ಕುಡಿಯುವ ನೀರಿನ ಕೊರತೆ ಉಂಟಾಗಿತ್ತು. ಮೊದಲೇ ಭೀಕರ ಬರಗಾಲದಿಂದ ತತ್ತರಿಸಿದ್ದ ರೈತ ಸಮುದಾಯಕ್ಕೆ ಜಲಾಶಯಗಳು ಖಾಲಿಯಾಗಿ ಮತ್ತಷ್ಟು ಆತಂಕ ಹೆಚ್ಚಿಸಿದ್ದವು. ಆದರೆ ಕಳೆದ ಎರಡು ವಾರಗಳಿಂದ ಬೀಳುತ್ತಿರುವ ಮಳೆ ಹಾಗೂ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕುಡಿಯುವ ನೀರಿನ ಹಾಗೂ ನೀರಾವರಿಯ ಆತಂಕ ದೂರವಾಗುವ ವಿಶ್ವಾಸ ಮೂಡಿದೆ. ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ ಹಿಡಕಲ್ಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಒಂದೇ ದಿನದಲ್ಲಿ ನಾಲ್ಕು ಅಡಿಗಳಷ್ಟು ನೀರಿನಮಟ್ಟ ಏರಿಕೆಯಾಗಿದೆ. ಈಗ ಜಲಾಶಯಕ್ಕೆ 24 ಸಾವಿರ ಕ್ಯೂಸೆಕ್‌ ನೀರು ಹರಿದುಬರುತ್ತಿದ್ದು, ಒಟ್ಟು 2,175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2,119 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಬೆಳಗಾವಿ, ಧಾರವಾಡ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಒದಗಿಸುವ ಮಲಪ್ರಭಾ ಜಲಾಶಯಕ್ಕೆ ಸಹ ಅಧಿಕ ಪ್ರಮಾಣದಲ್ಲಿ ನೀರಿನ ಹರಿವು ಆರಂಭವಾಗಿದೆ. ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿಗೆ 14 ಸಾವಿರ ಕ್ಯೂಸೆಕ್‌ ನೀರು ಹರಿದು ಬರಲಾರಂಭಿಸಿದೆ. ಇದರಿಂದ ಒಂದೇ ದಿನದಲ್ಲಿ ಮೂರು ಅಡಿಯಷ್ಟು ನೀರು ಸಂಗ್ರಹವಾಗಿದೆ. ಒಟ್ಟು 2079 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2047 ಅಡಿ ನೀರು ಸಂಗ್ರಹವಾಗಿದೆ.

ರಕ್ಕಸಕೊಪ್ಪಕ್ಕೆ ನೀರು: ಬೆಳಗಾವಿ ನಗರಕ್ಕೆ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ತಿಂಗಳಷ್ಟೆ ಜಲಾಶಯದಲ್ಲಿ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದ್ದರಿಂದ ಬೆಳಗಾವಿಯ ಜನ ವಾರಕ್ಕೊಮ್ಮೆ ಕೆಲವು ಪ್ರದೇಶದಲ್ಲಿ 10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈಗ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬರುತ್ತಿದ್ದು ರಕ್ಕಸಕೊಪ್ಪ ಮೊದಲಿನಂತೆ ಕಂಗೊಳಿಸುತ್ತಿದೆ. ಜಲಾಶಯ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗುತ್ತಿರುವದರಿಂದ ನೀರಿನ ಮಟ್ಟ ಏರಿಕೆಯಾಗಿದೆ. ಒಟ್ಟು 2476.50 ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಈಗ 2465 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವದರಿಂದ ಜುಲೈ ಅಂತ್ಯದ ವೇಳೆಗೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂಬುದು ಜಲಮಂಡಳಿ ಅಧಿಕಾರಿಗಳ ಹೇಳಿಕೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ