ಸೋರುತಿಹುದು ಗ್ರಂಥಾಲಯ ಮಾಳಿಗೆ

Team Udayavani, Oct 21, 2019, 12:25 PM IST

ಚಿಕ್ಕೋಡಿ: ಶೈಕ್ಷಣಿಕ ಜಿಲ್ಲಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿಕ್ಕೋಡಿ ನಗರದಲ್ಲಿರುವ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಅವ್ಯವಸ್ಥೆ ಆಗರವಾಗಿದೆ.

ಶಿಥಿಲಾವಸ್ಥೆ ಕಟ್ಟಡದಲ್ಲಿ ಇರುವ ಜ್ಞಾನದ ಮಾಳಿಗೆ ಮಳೆ ನೀರಿನಿಂದ ಸೋರುತ್ತಿದೆ. ದಿನಪತ್ರಿಕೆ ಇಡಲು ಸ್ಥಳಾವಕಾಶ ಇಲ್ಲವಾಗಿದೆ. ಐತಿಹಾಸಿಕ ಕಾದಂಬರಿಗಳು ಗೋಣಿ ಚೀಲದಲ್ಲಿ ಮೂಲೆ ಸೇರಿವೆ. ನಗರದ ಪುರಸಭೆ ಹತ್ತಿರ ಹೃದಯ ಭಾಗದ ಕಿತ್ತೂರ ಚೆನ್ನಮ್ಮ ರಸ್ತೆಯ ಬದಿಯಲ್ಲಿರುವ ಕೇಂದ್ರ ಗ್ರಂಥಾಲಯ ದುಸ್ಥಿತಿ ಇದು. ಅತೀ ವೇಗವಾಗಿ ಬೆಳೆಯುತ್ತಿರುವ ಚಿಕ್ಕೋಡಿ ನಗರದಲ್ಲಿ ಜ್ಞಾನ ಭಂಡಾರ ಒದಗಿಸುವ ಸುಂದರವಾದಂತಹ ಗ್ರಂಥಾಲಯ ನಗರದ ಜನರಿಗೆ ಮರೀಚಿಕೆಯಾಗಿದೆ.

ಈಗೀರುವ ಗ್ರಂಥಾಲಯದ ಹಳೆ ಕಟ್ಟಡ ಶಿಥಿಲಾವಸ್ಥೆ ಕಂಡಿದ್ದು, ಸ್ವಂತ ಜಾಗ ಹೊಂದಿರುವ ಗ್ರಂಥಾಲಯದಲ್ಲಿ ಎರಡು ಕಟ್ಟಡಗಳಿದ್ದು, ಒಂದರಲ್ಲಿ ದಿನಪತ್ರಿಕೆ, ವಾರಪತ್ರಿಕೆ ಓದುವ ಕಟ್ಟಡವಾಗಿದೆ. ಇನ್ನೊಂದರಲ್ಲಿ ಹಂಚಿನ ಕಟ್ಟಡದಲ್ಲಿ ಕಾದಂಬರಿಗಳು, ನಿಯತಕಾಲಿಕೆಗಳು ಇವೆ. ಎರಡು ಕಟ್ಟಡಗಳು ಮಳೆನೀರಿನಿಂದ ಸೋರುತ್ತಿವೆ. ಸಾವಿರಾರು ಪುಸ್ತಕಗಳನ್ನು ಮಳೆನೀರಿನಿಂದ ರಕ್ಷಣೆಗೆ ಗ್ರಂಥ ಪಾಲಕರು ಹರಸಾಹಸ ಪಡುತ್ತಿರುವ ಸ್ಥಿತಿ ಶೋಚನೀಯವಾಗಿದೆ.

ಜಿಲ್ಲಾ ಕೇಂದ್ರ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದಲ್ಲಿ ಹೈಟಿಕ್‌ ಗ್ರಂಥಾಲಯ ನಿರ್ಮಿಸುವ ಅವಶ್ಯಕತೆ ಇದೆ. ಕಳೆದ 60 ವರ್ಷಗಳ ಹಿಂದೆ ನಿರ್ಮಿಸಿರುವ ಗ್ರಂಥಾಲಯದ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಮೇಲ್ಚಾವಣಿ ಹಂಚುಗಳು ಸಂಪೂರ್ಣ ಒಡೆದು ಹೋಗಿರುವುದರಿಂದ ಮಳೆಯಿಂದ ಗ್ರಂಥಾಲಯ ಸೋರುತ್ತಿದೆ. ಸಾವಿರಾರು ರೂಪಾಯಿ ಬೆಲೆ ಬಾಳುವ ಪುಸ್ತಕಗಳು ಮೂಲೆ ಸೇರಿವೆ. ಕಳೆದ 60 ವರ್ಷಗಳ ಹಿಂದೆ ಗ್ರಾಪಂ ಇದ್ದ ಚಿಕ್ಕೋಡಿಯಲ್ಲಿ ಬಸವೇಶ್ವರ ವಾಚನಾಲಯ ಎಂದು ಪ್ರಾರಂಭ ಮಾಡಿದ್ದರು.

ನಂತರ ದಿನಗಳಲ್ಲಿ ಚಿಕ್ಕೋಡಿಯು ಪುರಸಭೆ ಆದ ನಂತರ ಜಿಲ್ಲಾ ಕೇಂದ್ರ ಗ್ರಂಥಾಲಯವಾಗಿದೆ. ಹೃದಯ ಭಾಗದಲ್ಲಿರುವ ಈ ಗ್ರಂಥಾಲಯದಲ್ಲಿ ಪ್ರತಿನಿತ್ಯ ನೂರಾರು ಯುವಕರು ಮತ್ತು ಹಿರಿಯ ನಾಗರಿಕರು ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದಲು ಬರುತ್ತಾರೆ. ಆದರೆ ಮಳೆಯಿಂದ ಸೋರುವ ಗ್ರಂಥಾಲಯದಲ್ಲಿ ಅಸ್ತವ್ಯಸ್ತವಾಗಿ ಮೂಲ ಸೌಕರ್ಯಗಳಿಂದ ಸೊರಗುತ್ತಿದೆ.

43 ಸಾವಿರ ಪುಸ್ತಕಗಳು: ಶಿಥಿಲಾವಸ್ಥೆ ಕಂಡಿರುವ ಈ ಹಳೆಯದಾದ ಕೇಂದ್ರ ಗ್ರಂಥಾಲಯದಲ್ಲಿ ಸಾಮಾನ್ಯ, ಪರಾಮರ್ಶೆ ಗ್ರಂಥಗಳು, ಕಾದಂಬರಿಗಳು ಮತ್ತು ವಿವಿಧ ಪಠ್ಯ-ಪುಸ್ತಕಗಳು ಸೇರಿ ಸುಮಾರು 43 ಸಾವಿರ ಬೆಲೆ ಬಾಳುವ ಪುಸ್ತಕಗಳು ದಾಖಲಿವೆ. ಹೊಸದಾಗಿ ಬಂದಿರುವ ಎರಡು ಸಾವಿರ ಪುಸ್ತಕಗಳನ್ನು ಇಟ್ಟುಕೊಳ್ಳಲು ಸ್ಥಳದ ಅಭಾವ ಇರುವುದರಿಂದ ಎಲ್ಲ ಪುಸ್ತಕಗಳನ್ನು ಚೀಲದಲ್ಲಿ ತುಂಬಿ ಇಟ್ಟಿದ್ದಾರೆ. ಪ್ರತಿನಿತ್ಯ 16 ದಿನಪತ್ರಿಕೆಗಳು ಬರುತ್ತವೆ. ಅದರಲ್ಲಿ 10 ಕನ್ನಡ ಪತ್ರಿಕೆಗಳು, 3 ಮರಾಠಿ, 3 ಇಂಗ್ಲಿಷ್‌ ಸೇರಿವೆ. ಇನ್ನೂ ವಾರ ಪತ್ರಿಕೆ, ಮಾಸಿಕ ಪತ್ರಿಕೆ, ಪಾಕ್ಷಿಕ, ಸರಕಾರದ ವಾರ್ತಾ ಪತ್ರ ಸೇರಿ ಸುಮಾರು 50 ಪತ್ರಿಕೆಗಳು ಗ್ರಂಥಾಲಯಕ್ಕೆ ಬರುತ್ತವೆ.

2450 ಜನ ಸದಸ್ಯರು: ಜಿಲ್ಲಾ ಕೇಂದ್ರವಾಗಿರುವ ಚಿಕ್ಕೋಡಿ ನಗರದಲ್ಲಿ ಎಲ್ಲ ಜಿಲ್ಲಾ ಕಚೇರಿಗಳು ಇರುವುದರಿಂದ ಹೆಚ್ಚಿನ ಜನ ಓದುಗರು ಗ್ರಂಥಾಲಯಕ್ಕೆ ಬರುತ್ತಾರೆ. ಈಗಾಗಲೇ ಅಧಿಕೃತವಾಗಿ ಗ್ರಂಥಾಲಯಕ್ಕೆ 2,450 ಜನ ಸದಸ್ಯರಿದ್ದಾರೆ. ಇವರು ಮೂರು ನಾಲ್ಕೈದು ದಿನಗಳಿಗೊಮ್ಮೆ ಬಂದು ಪುಸ್ತಕ ಬದಲಿಸಿಕೊಂಡು ಹೋಗುತ್ತಾರೆ. ದಿನ ನಿತ್ಯ 150 ಜನ  ಶಾಲಾ ಕಾಲೇಜಿನ ಯುವಕರು, 200 ಜನ ಹಿರಿಯ ನಾಗರಿಕರು ಈ ಗ್ರಂಥಾಲಯಕ್ಕೆ ಓದಲು ಬರುತ್ತಾರೆ. ಈ ಗ್ರಂಥಾಲಯದಲ್ಲಿ ಹೆಚ್ಚಿನ ಜನ ಯುವಕರು ಮತ್ತು ಹಿರಿಯ ನಾಗರಿಕರು ಬರುವುದರಿಂದ ಮಹಿಳೆಯರಿಗೆ ಓದಲು ಪ್ರತ್ಯೇಕ ಕೊಠಡಿ ಇಲ್ಲವಾಗಿದೆ. ಓದಲು ಬರುವ ಮಹಿಳೆಯರು ಹೊರಗೆ ನಿಂತುಕೊಂಡು ಗ್ರಂಥ ಪಾಲಕರ ಬಳಿ ಪುಸ್ತಕ ತೆಗೆದುಕೊಂಡು ಮನೆಗೆ ತೆರಳುವ ಸನ್ನಿವೇಶ ಸಾಮಾನ್ಯವಾಗಿದೆ.

ಜಿಲ್ಲಾ ಕೇಂದ್ರ ಗ್ರಂಥಾಲಯ ಇರುವ ಕಟ್ಟಡ ಶಿಥಿಲಾವಸ್ಥೆ ಕಂಡಿದ್ದು, ಮಳೆ ಬಂದರೆ ಎಲ್ಲ ಪುಸ್ತಕಗಳು ನೀರಿನಲ್ಲಿ ನೆನೆದು ಹಾಳಾಗುತ್ತಿವೆ. ಹೀಗಾಗಿ ಹೊಸ ಕಟ್ಟಡ ನಿರ್ಮಿಸಲು ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧವಿದೆ. ದೊಡ್ಡ ಗ್ರಂಥಾಲಯ ನಿರ್ಮಿಸಬೇಕೆಂಬ ಉದ್ದೇಶದಿಂದ ಹೊಸ ಕಟ್ಟಡ ನನೆಗುದಿಗೆ ಬಿದ್ದಿದೆ. ಶೀಘ್ರವಾಗಿ ಸ್ಥಳೀಯ ಜನಪ್ರತಿನಿಧಿ  ಗಳೊಂದಿಗೆ ಚರ್ಚೆ ನಡೆಸಿ ಹೊಸ ಕಟ್ಟಡ ನಿರ್ಮಿಸಲಾಗುತ್ತದೆ. ಜಿ.ರಾಮಯ್ಯ, ಉಪನಿರ್ದೇಶಕರು ಸಾರ್ವಜನಿಕ ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ

 

-ಮಹಾದೇವ ಪೂಜೇರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ