ಪಕ್ಷಕ್ಕಿಂತ ಸಾಹುಕಾರ್‌ಗೆ ಜೈ ಎಂದ ಕೈ ಪಡೆ

|ಬೆಂಬಲಿಗರಿಗೆ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಮುಖ್ಯ |ಕೈ ಪಾಳಯದಲ್ಲಿ ತಳಮಳ; ಬೆಂಬಲಿಗರಲ್ಲಿ ಉತ್ಸಾಹ

Team Udayavani, Jul 10, 2019, 10:11 AM IST

ಬೆಳಗಾವಿ: ಸಮ್ಮಿಶ್ರ ಸರ್ಕಾರದ ಬುಡಕ್ಕೆ ಬೆಂಕಿ ಇಟ್ಟು ರಾಜ್ಯ ರಾಜಕಾರಣವೇ ಅಲಗಾಡುವಂತೆ ಮಾಡಿರುವ ಗಡಿ ಜಿಲ್ಲೆಯ ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ಪರವಾಗಿಯೇ ಒಲವು ತೋರಿಸಿರುವ ಬೆಂಬಲಿಗರು ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಮುಖ್ಯ ಎಂಬುದನ್ನು ಮತ್ತೂಮ್ಮೆ ಸಾಬೀತು ಪಡಿಸಿದ್ದಾರೆ.

ರಮೇಶ ಜಾರಕಿಹೊಳಿ ಈಗಾಗಲೇ ಮುಂಬೈನ ರೆಸಾರ್ಟ್‌ನಲ್ಲಿದ್ದರೂ ಇತ್ತ ಇವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಆತಂಕಕ್ಕೆ ಒಳಗಾಗದೇ ಸಾಹುಕಾರರು ಬರು ವುದನ್ನೇ ಕಾಯುತ್ತ ಕುಳಿತಿದ್ದಾರೆ. ರಮೇಶ ಜಾರಕಿಹೊಳಿ ಕೈಗೊಳ್ಳುವ ಯಾವ ನಿರ್ಧಾರಕ್ಕೂ ನಾವು ಬದ್ಧರಾಗಿರುವುದಾಗಿ ಸಭೆ ಮೂಲಕ ಮಾಹಿತಿ ರವಾನಿಸಿದ್ದಾರೆ.

ಖಡಕ್‌ ಸಂದೇಶ ರವಾನೆ: ರಮೇಶ ಅವರ ಅಳಿಯ ಅಂಬಿರಾವ ಪಾಟೀಲ ನೇತೃತ್ವದಲ್ಲಿ ಸೋಮವಾರ ನಡೆದ ಸಭೆ ಮಹತ್ವ ಪಡೆದುಕೊಂಡಿತ್ತು. ಗೋಕಾಕ ಕ್ಷೇತ್ರದ ಜಿಪಂ, ತಾಪಂ, ಗ್ರಾಪಂ ಹಾಗೂ ನಗರಸಭೆ ಸದಸ್ಯರು ಪಾಲ್ಗೊಂಡು ಸಾಹುಕಾರರ ಪರವಾಗಿ ನಿಂತಿದ್ದಾರೆ. ಸಾಹುಕಾರರು ಯಾವ ಪಕ್ಷದಲ್ಲಿ ಇರುತ್ತಾರೋ ಅವರ ಬೆನ್ನಿಗೆ ನಿಲ್ಲುವುದಾಗಿ ಕಾಂಗ್ರೆಸ್‌ಗೆ ಖಡಕ್‌ ಸಂದೇಶ ರವಾನಿಸಿದ್ದು, ಕೈ ಪಾಳೆಯದ ನಾಯಕರಿಗೆ ತಳಮಳ ಶುರುವಾಗಿದೆ.

ಕಾಂಗ್ರೆಸ್‌ ಪಕ್ಷದೊಂದಿಗೆ ಸಮರ ಸಾರಿರುವ ರಮೇಶ ಜಾರಕಿಹೊಳಿ ಸಿಟ್ಟು ಇನ್ನೂ ಕಡಿಮೆ ಆಗಿಲ್ಲ. ಸಚಿವ ಸ್ಥಾನ ಕೈತಪ್ಪಿ ಸಹೋದರನ ಪಾಲಿಗೆ ಹೋದಾಗಿನಿಂದಲೂ ಕೈ ವರಿಷ್ಠರ ಮೇಲೆ ರಮೇಶ ವಿಷ ಕಾರುತ್ತಿದ್ದಾರೆ. ಲೋಕಸಭೆ ಚುನಾವಣೆ ವೇಳೆಯೂ ಪಕ್ಷದ ಯಾವ ನಾಯಕರ ಮಾತು ಕೇಳದೇ ಆಂತರಿಕವಾಗಿ ಕೈಗೆ ಶಾಕ್‌ ನೀಡಿದ್ದರು. ಇದರ ಪರಿಣಾಮ ಲೋಕ ಫಲಿತಾಂಶ ಎಲ್ಲರ ಗಮನಕ್ಕೂ ಬಂದಿದೆ. ರಾಜೀನಾಮೆ ಕೊಟ್ಟರೂ ಯಾವೊಬ್ಬ ನಾಯಕರು ರಮೇಶ ಅವರನ್ನು ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ ಎನ್ನುವುದೇ ವಿಶೇಷ.

ಗೋಕಾಕದಲ್ಲಿ ಅಳಿಯನೇ ಸುಪ್ರೀಂ: ಅಳಿಯ ಅಂಬಿರಾವ್‌ ಪಾಟೀಲ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದು, ಕಳೆದ 20 ವರ್ಷಗಳಿಂದ ಹಳ್ಳಿ ಹಳ್ಳಿ ಸುತ್ತುತ್ತ ಪಕ್ಷ ಸಂಘಟನೆ ಮಾಡಿಕೊಂಡಿದ್ದಾರೆ. ಪ್ರತಿ ಮುಖಂಡ ಹಾಗೂ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ರಮೇಶ ಇಲ್ಲದಿದ್ದಾಗ ಅಂಬಿರಾವ ಅವರೇ ಇಲ್ಲಿ ಸುಪ್ರೀಂ. ಅಂಬಿರಾವ ಹೇಳಿದ ಮಾತನ್ನು ಯಾರೂ ದಾಟುವುದೇ ಇಲ್ಲ. ಅಷ್ಟೊಂದು ಬಿಗಿ ಹಿಡಿತ ಸಾಧಿಸಿಕೊಂಡು ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎನ್ನುತ್ತಾರೆ ರಮೇಶ ಆಪ್ತರು.

ಕಾಂಗ್ರೆಸ್‌ ಪಕ್ಷ ಬಲಪಡಿಸಲು ಲೋಕಸಭೆ ಚುನಾವಣೆಯಲ್ಲಿ ಸಹೋದರರಾದ ಸತೀಶ ಜಾರಕಿಹೊಳಿ ಹಾಗೂ ಲಖನ್‌ ಜಾರಕಿಹೊಳಿ ಫಿಲ್ಡ್ಗಿಳಿದಿದ್ದರು. ಆದರೆ ಇದನ್ನು ವಿರೋಧಿಸಿದ್ದ ರಮೇಶ ಗೌಪ್ಯವಾಗಿಯೇ ಕಾಂಗ್ರೆಸ್‌ಗೆ ಕೈ ಕೊಟ್ಟರೂ ಯಾರ ಮಾತಿಗೂ ಮಣಿದಿರಲಿಲ್ಲ. ಈಗ ಕ್ಷೇತ್ರದ ಕೈ ಮುಖಂಡರು ರಮೇಶ ಬರುವಿಕೆಗಾಗಿ ಕಾಯುತ್ತಿದ್ದಾರೆ.

ತಾಲೂಕಿನ ಬ್ಲಾಕ್‌ ಕಾಂಗ್ರೆಸ್‌, ಯುಥ್‌ ಕಾಂಗ್ರೆಸ್‌, ಮಹಿಳಾ ಘಟಕ, ಎಸ್‌ಸಿ-ಎಸ್‌ಟಿ ಘಟಕ ಸೇರಿದಂತೆ ವಿವಿಧ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟರೂ ಅಚ್ಚರಿ ಇಲ್ಲ. ರಮೇಶ ಯಾವ ಪಕ್ಷದಲ್ಲಿ ಇರುತ್ತಾರೋ ಅಲ್ಲಿ ತಾವಿರುವುದಾಗಿ ಹೇಳಿಕೊಂಡಿದ್ದಾರೆ. ರಮೇಶ ರಾಜೀನಾಮೆಯನ್ನು ಕ್ಷೇತ್ರದಲ್ಲಿ ಈವರೆಗೆ ಯಾರೂ ವಿರೋಧಿಸಿಲ್ಲ.

ಬೆಂಬಲಿಗರ ಸಂಪರ್ಕಕ್ಕೆ ಸಿಗುತ್ತಿಲ್ಲ ರಮೇಶ-ಮಹೇಶ:

ರಾಜೀನಾಮೆ ಕೊಟ್ಟು ಮುಂಬೈ ಸೇರಿರುವ ಬೆಳಗಾವಿ ಜಿಲ್ಲೆಯ ಇಬ್ಬರು ಶಾಸಕರನ್ನು ಸಂಪರ್ಕಿಸಲು ಅವರ ಬೆಂಬಲಿಗರು ಪರದಾಡುತ್ತಿದ್ದಾರೆ. ರಮೇಶ ಜಾರಕಿಹೊಳಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಬಹುಶ ಅವರ ಮೊಬೈಲ್ ಕರ್ನಾಟಕದಲ್ಲಿಯೇ ಇರಬಹುದು. ಮಹೇಶ ಕುಮಟಳ್ಳಿ ಮೊಬೈಲ್ ಸ್ವಿಚ್ ಆಫ್‌ ಆಗಿದೆ. ರಾಜೀನಾಮೆ ನೀಡುವ ಲಿಸ್ಟ್‌ನಲ್ಲಿರುವ ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ ಕೂಡ ಯಾವ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಮಂಗಳವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರು ಉಳಿದಿದ್ದು ಮತ್ತಷ್ಟು ಅನುಮಾನಕ್ಕೆ ಪುಷ್ಟಿ ನೀಡಿದಂತಾಗಿದೆ.
ಉತ್ತರಾಧಿಕಾರಿ ಅಳಿಯನೋ-ಪುತ್ರನೋ?:ರಾಜೀನಾಮೆ ಕೊಟ್ಟಿರುವ ರಮೇಶ ಜಾರಕಿಹೊಳಿ ಗೋಕಾಕ ಕ್ಷೇತ್ರ ಬಿಟ್ಟು ಬೇರೆ ಕಡೆಗೆ ನೆಲೆ ಕಂಡುಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಗೋಕಾಕ ಕ್ಷೇತ್ರವನ್ನು ಅಳಿಯ ಅಂಬಿರಾವ್‌ ಪಾಟೀಲ ಅಥವಾ ಪುತ್ರ ಅಮರನಾಥ ಜಾರಕಿಹೊಳಿಗೆ ಬಿಟ್ಟು ಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಮೇಶ ಅವರು ಗೋಕಾಕ ಬದಲಿಗೆ ಯಮಕನಮರಡಿ ಅಥವಾ ಬಳ್ಳಾರಿಯ ಯಾವುದಾದರೂ ಕ್ಷೇತ್ರಕ್ಕೆ ಹೋಗುವ ಸಾಧ್ಯತೆಯೂ ಉಂಟು. ಹೀಗಾಗಿ ತಮ್ಮ ಸ್ವಕ್ಷೇತ್ರವನ್ನು ಕುಟುಂಬದ ಯಾರಾದರೂ ಒಬ್ಬರಿಗೆ ಬಿಟ್ಟು ಕೊಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಅಳಿಯ ಅಂಬಿರಾವ್‌ಗೆ ಕ್ಷೇತ್ರದ ತುಂಬ ಹೆಚ್ಚಿನ ಸಂಪರ್ಕ ಇರುವುದರಿಂದ ಇವರೇ ಉತ್ತರಾಧಿಕಾರಿ ಎಂಬ ಗುಸುಗುಸು ರಮೇಶ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
•ಭೈರೋಬಾ ಕಾಂಬಳೆ

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ