ಬಿಜೆಪಿ ಗೆಲುವಿನಿಂದ ಹೆಚ್ಚುತ್ತಿದೆ ಜನರ ನಿರೀಕ್ಷೆ

Team Udayavani, May 25, 2019, 11:35 AM IST

ಪ್ರಧಾನಿ ನರೇಂದ್ರ ಮೋದಿ ಅವರ ಅಬ್ಬರದ ಅಲೆಯಲ್ಲಿ ಭಾರೀ ಜನಮತಗಳಿಸಿ ಲೋಕಸಭೆ ಮೆಟ್ಟಿಲು ಹತ್ತಿದ ಬೆಳಗಾವಿ ಜಿಲ್ಲೆಯ ಇಬ್ಬರು ಸಂಸದರು ಈಗ ಜನರ ನಿರೀಕ್ಷೆಗಳು ಹಾಗೂ ಆಶಯಗಳಿಗೆ ಸ್ಫಂದಿಸುವ ಜವಾಬ್ದಾರಿ ಹೊತ್ತಿದ್ದಾರೆ. ದೊಡ್ಡ ಮಟ್ಟದ ಮುನ್ನಡೆ ಕೊಟ್ಟಿರುವದರಿಂದ ಸಹಜವಾಗಿಯೇ ಮತದಾರರ ನಿರೀಕ್ಷೆಗಳು ಸಹ ಅಷ್ಟೇ ದೊಡ್ಡದಾಗಿವೆ ಎಂಬ ಅಭಿಪ್ರಾಯ ಸಂಸದರಿಂದ ವ್ಯಕ್ತವಾಗಿದೆ. ಆಯ್ಕೆಯಾದ ನಂತರ ಜನರ ಮಧ್ಯೆ ವಿಜಯೋತ್ಸವದಲ್ಲಿರುವ ಬೆಳಗಾವಿ ಸಂಸದ ಸುರೇಶ ಅಂಗಡಿ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಉದಯವಾಣಿಗೆ ಜೊತೆ ತಮ್ಮ ಮುಂದಿನ ಐದು ವರ್ಷಗಳ ಯೋಜನೆಯನ್ನು ಹಂಚಿಕೊಂಡಿದ್ದಾರೆ.

ಕ್ಷೇತದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ

• ಸತತ ನಾಲ್ಕನೇ ಜಯ ಬಂದಿದೆ. ನಿಮ್ಮ ಮೊದಲ ಪ್ರತಿಕ್ರಿಯೆ.

-ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತ ಹಾಗೂ ಜನಪರ ಕಾರ್ಯ. ಇದರ ಜೊತೆಗೆ ಕ್ಷೇತದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಕಾರಣ. ಕ್ಷೇತ್ರದ ಜನರ ಜೊತೆ ನಿಕಟ ಸಂಪರ್ಕ ನನಗೆ ಬಹಳ ಸಹಾಯಕಾರಿಯಾಯಿತು.

• ಈ ಬಾರಿಯ ಚುನಾವಣೆಯಲ್ಲಿ ದಾಖಲೆಯ ಅಂತರ ಸಿಕ್ಕಿದೆ. ಕಾರಣ ಏನು?

-ಜನರಿಗೆ ಕಾಂಗ್ರೆಸ್‌ ಬಗ್ಗೆ ಸಂಪೂರ್ಣ ತಾತ್ಸಾರ ಬಂದಿತ್ತು. ನಾವು ಅಭಿವೃದ್ಧಿ ಕೆಲಸಗಳನ್ನು ಹೇಳಿ ಜನರ ಮತ ಕೇಳಿದ್ದೆವು. ಆದರೆ ವಿರೋಧ ಪಕ್ಷದವರು ವೈಯಕ್ತಿಕ ಟೀಕೆ ಮಾಡಿದರು. ಹಗುರವಾದ ಶಬ್ದ ಬಳಸಿ ಆರೋಪ ಮಾಡಿದರು. ಇದೆಲ್ಲವನ್ನು ನೋಡಿದ್ದ ಮತದಾರರು ಅಭಿವೃದ್ಧಿ ಮನಸ್ಸಿರುವವರ ಕೈಹಿಡಿದರು. ಮೋದಿ ಅವರ ದೂರದೃಷ್ಟಿ ಆಡಳಿತ ಹಾಗೂ ಯೋಜನೆಗಳು ಜನರಿಗೆ ಹಿಡಿಸಿದ್ದರಿಂದ ನಮಗೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಜನರ ಬೆಂಬಲ ಸಿಕ್ಕಿದೆ.

• ಮುಂದಿನ ಐದು ವರ್ಷದ ಯೋಜನೆಗಳು ಏನು.?

-ಕ್ಷೇತ್ರದ ಸಮಸ್ಯೆ ನನಗೆ ಹೊಸದೇನಲ್ಲ. ಆದರೆ ನನ್ನದೇ ಆದ ಯೋಜನೆಗಳನ್ನು ಇಟ್ಟುಕೊಂಡಿದ್ದೇನೆ. ಮುಖ್ಯವಾಗಿ ಜನರಿಗೆ ಕುಡಿಯುವ ನೀರು ಹಾಗೂ ಉದ್ಯೋಗ ಸೃಷ್ಟಿ ಮಾಡುವ ಕೆಲಸ ಆಗಬೇಕಿದೆ. ಹಿಂದಿನ ವರ್ಷದಲ್ಲಿ ಮಾಡದೇ ಉಳಿದಿರುವ ಕಾರ್ಯಗಳನ್ನು ಈ ಬಾರಿ ಪೂರ್ಣಗೊಳಿಸುವೆ.

• ಯಾವ ಯೋಜನೆಗಳಿಗೆ ನಿಮ್ಮ ಮೊದಲ ಆದ್ಯತೆ..?

-ಕಳಸಾ ಬಂಡೂರಿ ನೀರು ಮಲಪ್ರಭಾ ನದಿಗೆ ಹರಿಯಬೇಕು ಎಂಬ ಕೂಗು ಅದರ ವ್ಯಾಪ್ತಿಯ ಜನರಿಂದ ಬಲವಾಗಿ ಕೇಳಿದೆ. ಈ ಬಾರಿ ಕಳಸಾ ಬಂಡೂರಿ ನೀರು ಹರಿಯುವಂತೆ ಮಾಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ.

ಎರಡನೇಯದಾಗಿ ಈ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಬೇಕಿದೆ. ಈ ಹಿನ್ನಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಸ್ವಯಂ ಉದ್ಯೋಗ ಆರಂಭಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶ ಇದೆ. ಇದರ ಜೊತೆಗೆ ರಸ್ತೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು.

• ಆದರ್ಶ ಗ್ರಾಮ ನಿರ್ಮಾಣದಂತಹ ಯೋಜನೆ ಇದೆಯೇ..?

-ಗ್ರಾಮಗಳ ಸಮಗ್ರ ಆಭಿವೃದ್ಧಿಗೆ ಅಲ್ಲಿನ ಗ್ರಾಮ ಪಂಚಾಯತ್‌ ಸದಸ್ಯರ ಸಹಕಾರ, ಸಹಭಾಗಿತ್ವ ಹಾಗೂ ಒಗ್ಗಟ್ಟು ಬಹಳ ಮುಖ್ಯ. ನಾವು ಎಷ್ಟೇ ಹಣ ತಂದು ಹಾಕಬಹುದು. ಆದರೆ ಅದು ಸರಿಯಾಗಿ ಬಳಕೆಯಾಗಬೇಕು. ಜನರು ಹಾಗೂ ಪಂಚಾಯತ್‌ ಪ್ರತಿನಿಧಿಗಳು ಆಸಕ್ತಿ ವಹಿಸಿದರೆ ಹೊಸ ಹೊಸ ಯೋಜನೆಗಳಿಂದ ಗ್ರಾಮಗಳ ಚಿತ್ರಣ ಬದಲಾಯಿಸಬಹುದು.

ಮೋದಿ ಅಲೆಯಿಂದಲೇ ದೊಡ್ಡ ಮಟ್ಟದ ಮುನ್ನಡೆ

•ತುರುಸಿನ ಪೈಪೋಟಿಯಲ್ಲಿ ಭರ್ಜರಿ ಅಂತರದ ಜಯಕ್ಕೆ ಪ್ರತಿಕ್ರಿಯೆ ಏನು.?

-ಪೈಪೋಟಿ ಇತ್ತು. ಆದರೆ ಪ್ರಧಾನಿ ಮೋದಿ ಅಲೆಯ ಮುಂದೆ ಈ ಪೈಪೋಟಿ ಪ್ರಮಾಣ ಕಡಿಮೆಯಾಗುತ್ತಲೇ ಹೋಯಿತು. ಮನೆ ಮನೆಗೆ ನಮ್ಮ ಪ್ರಚಾರ ಬಹಳ ಪರಿಣಾಮ ಬೀರಿತು. ಎಲ್ಲ ಶಾಸಕರು, ಮಾಜಿ ಶಾಸಕರು ಹಾಗೂ ಕಾರ್ಯಕರ್ತರು ಬಹಳ ಶ್ರಮವಹಿಸಿ ಕೆಲಸ ಮಾಡಿದರು. ಒಳ್ಳೆಯ ಸಹಕಾರ ನೀಡಿದರು.

•ದೊಡ್ಡ ಮುನ್ನಡೆಯ ನಿರೀಕ್ಷೆ ಇತ್ತೆ..?

-ಜಯದ ಗುರಿ ಖಂಡಿತ ಮಾಡಿದ್ದೆ. ನಮ್ಮ ಗುರಿ ಈ ಬಾರಿ ತಪ್ಪುವದಿಲ್ಲ ಎಂಬ ವಿಶ್ವಾಸ ಇತ್ತು. ಸೋತವರು ಒಮ್ಮೆ ಗೆಲ್ಲಲೇಬೇಕು. ಗೆದ್ದವರು ಒಮ್ಮೆ ಸೋಲು ಕಾಣಲೇಬೇಕು. ಇದು ಪ್ರಕೃತಿ ನಿಯಮ. ಅದು ನಿಜವಾಗಿದೆ. ಆದರೆ ಇಷ್ಟು ದೊಡ್ಡ ಮಟ್ಟದ ಮುನ್ನಡೆ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಜನರು ಬಹಳ ಪ್ರೀತಿಯಿಂದ ಈ ಜಯ ನೀಡಿದ್ದಾರೆ.

•ಮುಂದಿನ ಐದು ವರ್ಷಗಳಲ್ಲಿ ನಿಮ್ಮ ಮುಖ್ಯ ಯೋಜನೆಗಳೇನು..?

-ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ನನ್ನದೇ ಆದ ಕನಸು ಕಟ್ಟಿಕೊಂಡಿದ್ದೇನೆ. ಇಲ್ಲಿಯ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ. ಇದಲ್ಲದೆ ಈ ಭಾಗದ ರೈತರು ಎದುರಿಸುತ್ತಿರುವ ಸವಳು-ಜವಳು ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು. ಅದಕ್ಕೆ ಕೇಂದ್ರದಿಂದ ಅನುದಾನ ತರುವದು ಎರಡನೇ ಆದ್ಯತೆ.

ಇದರ ಜತೆಗೆ ಚಿಕ್ಕೋಡಿ ಜಿಲ್ಲಾ ರಚನೆ ಆಗಲೇಬೇಕು ಎಂಬ ಕೂಗು ಬಹಳ ವರ್ಷಗಳಿಂದ ಇದೆ. ಅದಕ್ಕೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ. ಯುವಕರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಬೇಕಿದೆ. ಪ್ರಚಾರದ ವೇಳೆಯಲ್ಲಿ ಜನರಿಂದ ಸಾಕಷ್ಟು ಸಲಹೆ ಹಾಗೂ ಸೂಚನೆಗಳು ಬಂದಿದ್ದು, ಅದೆಲ್ಲದರ ಬಗ್ಗೆ ಅಧ್ಯಯನ ಮಾಡಿ ಅನುಷ್ಠಾನಕ್ಕೆ ಪ್ರಯತ್ನಿಸುತ್ತೇನೆ.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ