ಬಳ್ಳಾರಿ ನಾಲಾ ಹಾಲಾಹಲ!
Team Udayavani, Aug 19, 2019, 11:35 AM IST
ಬೆಳಗಾವಿ: ಬಳ್ಳಾರಿ ನಾಲಾ ವ್ಯಾಪ್ತಿಯಲ್ಲಿ ಬೆಳೆಯುವ ಬಾಸುಮತಿ ಅಕ್ಕಿಯಿಂದ ಬರುವ ಸುಮಧುರ ವಾಸನೆ ಈಗ ದುರ್ನಾತ ಬೀರುವಂತಾಗಿದೆ. ಬಳ್ಳಾರಿ ನಾಲಾ ಈ ಭಾಗದ ರೈತರಿಗೆ ದುಃಸ್ವಪ್ನದಂತಾಗಿದೆ.
ಸಮಸ್ಯೆ ಚಿಕ್ಕದಾಗಿದ್ದರೂ ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಜಟಿಲವಾಗುತ್ತಲೇ ಇದೆ. ಸತತ ಪ್ರವಾಹಕ್ಕೆ ಶಾಶ್ವತ ಅಂತ್ಯ ಹಾಡಬೇಕು ಎಂದು ಹತ್ತು ವರ್ಷಗಳ ಹಿಂದೆ ಮಂಜೂರಾಗಿದ್ದ ಮೂರು ಕೋಟಿ ರೂ. ಯೋಜನೆ ವ್ಯರ್ಥವಾಗಿ ನೀರಿನಲ್ಲಿ ಕರಗಿದೆ.
ಇದರಿಂದ ಬಳ್ಳಾರಿ ನಾಲಾ ವ್ಯಾಪ್ತಿಯ ಸುಮಾರು 23 ಹಳ್ಳಿಯ ರೈತರು ಪ್ರತಿ ವರ್ಷ ಅಪಾರ ನಷ್ಟ ಅನುಭವಿಸುತ್ತಿದ್ದಾರೆ.
ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳು ಹಾಗು ರಾಜಕಾರಣಿಗಳ ಹಸ್ತಕ್ಷೇಪದಿಂದ ಸಣ್ಣ ಸಮಸ್ಯೆಗಳೂ ಜಟಿಲ ವಾಗುತ್ತ್ತಿವೆ. ಪರಿಹಾರಕ್ಕಾಗಿ ವೆಚ್ಚಮಾಡಿದ ಕೋಟ್ಯಂತರ ಹಣ ಪ್ರಯೋಜನವಿಲ್ಲದೆ ನೀರಿನಲ್ಲಿ ಕರಗುತ್ತದೆ. ಪ್ರತಿ ವರ್ಷ ಈ ಸಮಸ್ಯೆಯಿಂದ ಜನಸಾಮಾನ್ಯರು ಹಾಗೂ ರೈತರು ನಲುಗುತ್ತಿದ್ದರೂ ಶಾಶ್ವತ ಪರಿಹಾರದ ಲಕ್ಷಣಗಳು ಮಾತ್ರ ಕಾಣುತ್ತಲೇ ಇಲ್ಲ. ಇದಕ್ಕೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿರುವ ಬಳ್ಳಾರಿ ನಾಲಾ ಪ್ರವಾಹವೇ ಸಾಕ್ಷಿ.
ಉತ್ತಮ ಬೆಳೆಯಿಂದ ಕಂಗೊಳಿಸಬೇಕಿದ್ದ ಹೊಲಗಳು ನದಿಯಂತೆ ಕಾಣುತ್ತ್ತಿವೆ. ಬೆಳಗಾವಿ ತಾಲೂಕಿನ ದಕ್ಷಿಣ ಹಾಗೂ ಪೂರ್ವ ಭಾಗದ ಹಳ್ಳಿಗಳಿಗೆ ಪ್ರತಿ ಮಳೆಗಾಲದಲ್ಲಿ ಬಳ್ಳಾರಿ ನಾಲಾ ಸಮಸ್ಯೆ ತಪ್ಪಿಲ್ಲ. ಮಳೆಗಾಲ ಬಂತೆಂದರೆ ಸಾಕು ಇಲ್ಲಿನ ರೈತರಿಗೆ ಆತಂಕ ಎದುರಾಗುತ್ತದೆ.
ಬೆಳಗಾವಿ ಸುತ್ತಮುತ್ತ ಧಾರಾಕಾರ ಮಳೆಯಾದರೆ ಈ ನಾಲಾ ತುಂಬಿ ಹೊಲಗಳಿಗೆ ಆವರಿಸಿಕೊಳ್ಳುತ್ತದೆ. ನೀರು ಸರಾಗವಾಗಿ ಹರಿದು ಹೋಗಲು ನಾಲಾ ಇದ್ದರೂ ಅದರಲ್ಲಿ ಬೆಳೆದುನಿಂತಿರುವ ಆಪು (ಕಸ) ಹಾಗೂ ಅತಿಕ್ರಮಣ ಇದಕ್ಕೆ ಅಡ್ಡಿಯಾಗಿವೆ.
ಈ ಬಳ್ಳಾರಿ ನಾಲಾ ವ್ಯಾಪ್ತಿಯಲ್ಲಿ ಪ್ರತಿ ಮಳೆಗಾಲದಲ್ಲಿ 4600 ಕ್ಕೂ ಅಧಿಕ ಎಕರೆ ಕೃಷಿ ಜಮೀನು ನೀರಿನಲ್ಲಿ ಮುಳುಗುತ್ತದೆ. ಇದರಲ್ಲಿ ಕೈಗೆ ಬರುವ ಬೆಳೆ ಬಹಳ ಕಡಿಮೆ. ಇದಕ್ಕೆ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಿದ್ದರೂ ಅದು ಇದುವರೆಗೆ ಪೂರ್ಣಗೊಂಡಿಲ್ಲ ಈ ಯೋಜನೆ ಪೂರ್ಣಗೊಂಡರೆ ಬೆಳಗಾವಿ ತಾಲೂಕಿನ ಸುಮಾರು 20,262 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಲಿದೆ.
ಈ ತಿಂಗಳು ಸುರಿದ ಧಾರಾಕಾರ ಮಳೆ ಹಾಗೂ ಬಳ್ಳಾರಿ ನಾಲಾ ಪ್ರವಾಹ ರೈತ ಸಮುದಾಯದ ಉತ್ತಮ ಬೆಳೆಯ ಆಸೆಗೆ ತಣ್ಣೀರು ಎರಚಿದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಸುಮಾರು ಮೂರು ಸಾವಿರ ಎಕರೆ ಪ್ರದೇಶದ ಬೆಳೆ ಪ್ರವಾಹದಿಂದ ನಾಶವಾಗಿದೆ.
ಬೆಳಗಾವಿ ನಗರದಲ್ಲಿ ಸುಮಾರು 23 ಕಿಲೋಮೀಟರ್‌ವರೆಗೆ ಈ ಬಳ್ಳಾರಿ ನಾಲಾ ಹರಿಯುತ್ತದೆ. ಅದರಲ್ಲಿ ಶೇ. 90 ರಷ್ಟು ನಾಲಾ ದಕ್ಷಿಣ ಭಾಗದಲ್ಲೇ ಇದೆ. ಇಲ್ಲಿ ಈಗೀಗ ಮಳೆಗಾಲದಲ್ಲಿ ಬಳ್ಳಾರಿ ನಾಲಾದ ಅವಾಂತರ ಶಾಶ್ವತವಾಗಿ ಬಿಟ್ಟಿದೆ. ಸರಾಗವಾಗಿ ನೀರು ಹರಿಯುವ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳು ತಲೆಎತ್ತಿವೆ. ಇದರ ಪರಿಣಾಮ ಬಡವರು, ಮಧ್ಯಮ ವರ್ಗದ ಜನ ಹಾಗೂ ರೈತರ ಮೇಲಾಗುತ್ತಿದೆ.
•ಕೇಶವ ಆದಿ