ಸ್ಥಳಾಂತರಿಸಿದ ಮರಗಳನ್ನು ಕೆರೆ ಸುತ್ತಲೂ ನೆಟ್ಟು ಪೋಷಣೆ

Team Udayavani, Jul 9, 2019, 8:25 AM IST

ಬೆಳಗಾವಿ: ರಸ್ತೆ ಅಗಲೀಕರಣ ವೇಳೆ ತೆರವುಗೊಳಿಸಿದ ಮರಗಳನ್ನು ಸ್ಥಳಾಂತರಿಸಿ ಪೀರನವಾಡಿ ಕೆರೆಯ ಸುತ್ತಲೂ ನೆಟ್ಟು ಪೋಷಿಸುತ್ತಿರುವುದನ್ನು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಪರಿಶೀಲಿಸಿದರು.

ಬೆಳಗಾವಿ: ರಸ್ತೆ ಅಗಲೀಕರಣ ವೇಳೆ ತೆರವುಗೊಳಿಸಿದ ಮರಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಪೀರನವಾಡಿ ಕೆರೆಯ ಸುತ್ತಲೂ ನೆಟ್ಟು ಅವುಗಳನ್ನು ಪೋಷಿಸುತ್ತಿರುವುದನ್ನು ಜಿಲ್ಲಾಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಖುದ್ದಾಗಿ ಪರಿಶೀಲಿಸಿದರು.

ಪೀರನವಾಡಿ ಕೆರೆಗೆ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಮರಗಳ ಸ್ಥಳಾಂತರ ಮತ್ತು ಅವುಗಳ ಪೋಷಣೆಯ ಕುರಿತು ಮಾಹಿತಿ ಪಡೆದರು.

ರಸ್ತೆ ಅಗಲೀಕರಣ ಮತ್ತಿತರ ಅಭಿವೃದ್ಧಿ ಕಾರ್ಯಕ್ಕೆ ಮರಗಳನ್ನು ಕಡಿಯಲಾಗುತ್ತಿದೆ. ಆದರೆ ಅನಿವಾರ್ಯವಾಗಿ ತೆರವುಗೊಳಿಸಬೇಕಾದ ಬೃಹತ್‌ ಮರಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ. ಮರ ಸ್ಥಳಾಂತರಿಸುವ ಮೂಲಕ ಲೋಕೋಪಯೋಗಿ ಇಲಾಖೆ ಮತ್ತು ವಿವಿಧ ಸಂಘ-ಸಂಸ್ಥೆಗಳು ಪರಿಸರ ಕಾಳಜಿ ಪ್ರದರ್ಶಿಸಿವೆ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಲಮೂಲ ರಕ್ಷಣೆಗೆ ಸೂಚನೆ: ಪೀರನವಾಡಿ ಕೆರೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಡಾ| ಬೊಮ್ಮನಹಳ್ಳಿ , ಕೆರೆಯ ಜಲಮೂಲ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆರೆಯ ದಡದ ಮೇಲೆ ನಳನಳಿಸುತ್ತಿರುವ ಆಲದ ಮರಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ ಅವರು, ಕೆರೆಯ ಅಭಿವೃದ್ಧಿಯ ಜತೆಗೆ ಮಳೆಗಾಲದಲ್ಲಿ ಕೆರೆಗೆ ನೀರು ಸರಾಗವಾಗಿ ಹರಿದು ಬರುವಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆರೆಯ ಸುತ್ತಲೂ ಉದ್ಯಾನ ಹಾಗೂ ವಾಕಿಂಗ್‌ ಪಥ ನಿರ್ಮಿಸುವಂತೆ ತಿಳಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವಿ.ಆರ್‌. ಮುನವಳ್ಳಿ ಹಾಗೂ ಸಹಾಯಕ ಎಂಜಿನಿಯರ್‌ ಎಸ್‌.ಕೆ. ಎಂಟೆತ್ತನವರ ಅವರು ಮರಗಳ ಸ್ಥಳಾಂತರ ಕುರಿತು ವಿವರಿಸಿದರು.

ಬಾಕ್ಸೈಟ್ ರಸ್ತೆ ಅಗಲೀಕರಣಕ್ಕೆ ಒಟ್ಟು 30 ಮರಗಳನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು. ಆ ಪ್ರಕಾರ 19 ಮರಗಳನ್ನು ಪೀರನವಾಡಿ ಕೆರೆಯ ದಂಡೆಗೆ ಸ್ಥಳಾಂತರಿಸಲಾಗಿದೆ. ಮರಗಳ ಸ್ಥಳಾಂತರಕ್ಕೆ ಅಗತ್ಯವಾದ ಜೆಸಿಬಿ, ಲಾರಿ ಮತ್ತಿತರ ಸಲಕರಣೆಗಳು ಹಾಗೂ ಸಾರಿಗೆ ವೆಚ್ಚ ಸೇರಿದಂತೆ ಪ್ರತಿ ಮರದ ಸ್ಥಳಾಂತರಕ್ಕೆ 18 ಸಾವಿರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ಪರಿಸರ ಪ್ರೇಮಿಯಾಗಿರುವ ಧಾರವಾಡದ ಅಸ್ಲಂ ಅಬ್ಬಿಹಾಳ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ಥಳಾಂತರ ಕಾರ್ಯ ಕೈಗೊಳ್ಳಲಾಗಿತ್ತು. ನಿರೀಕ್ಷೆಯಂತೆ ಎಲ್ಲ ಮರಗಳೂ ಬೆಳೆಯುತ್ತಿದ್ದು, ಅವುಗಳ ಪೋಷಣೆ ಬಗ್ಗೆ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಎಂಟೆತ್ತನವರ ವಿವರಿಸಿದರು.

ಜಿಲ್ಲಾಧಿಕಾರಿಗಳ ಜತೆ ತೆರಳಿ ಮರಗಳ ಸ್ಥಳಾಂತರ ಹಾಗೂ ಅವುಗಳ ಪೋಷಣೆಯ ಬಗ್ಗೆ ಮಾಹಿತಿ ಪಡೆದುಕೊಂಡ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ, ಮರಗಳ ಸ್ಥಳಾಂತರ ಮೂಲಕ ಪರಿಸರ ಕಾಳಜಿ ಪ್ರದರ್ಶಿಸಿದ ಲೋಕೋಪಯೋಗಿ ಇಲಾಖೆ ಮತ್ತು ಸಂಘ-ಸಂಸ್ಥೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮರಗಳ ಸ್ಥಳಾಂತರಕ್ಕೆ ನೆರವಾದ ಪರಿಸರ ಪ್ರೇಮಿ ಧಾರವಾಡದ ಅಸ್ಲಂ ಅಬ್ಬಿಹಾಳ ಇತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ಉಪ ಚುನಾವಣೆ ಮುಗಿದು ಫಲಿತಾಂಶ ಬಂದ ಬೆನ್ನಲ್ಲೇ ಯಾರು ಉಪ ಮುಖ್ಯಮಂತ್ರಿ, ಯಾರಿಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಯಾರಿಗೆ ಎಂಬ ಚರ್ಚೆ ಜಿಲ್ಲೆಯಲ್ಲಿ...

  • ಮೂಡಲಗಿ: ಗೋಕಾಕ ಮತಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮ ಭಾರೀಗೆ ಬಿಜೆಪಿಯಿಂದ ರಮೇಶ ಜಾರಕಿಹೊಳಿ ಅವರು ಆಯ್ಕೆಯಾಗಿದರಿಂದ ಮೂಡಲಗಿ ಪಟ್ಟಣ ಸೇರಿದಂತೆ ಅರಭಾವಿ ಕ್ಷೇತ್ರದಲ್ಲಿ...

  • ಹಾರೂಗೇರಿ: ಅಬಾಜಿಯವರು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಸಹಸ್ರಾರು...

  • ಚಿಕ್ಕೋಡಿ: ಕೃಷ್ಣಾ ನದಿಗೆ ಕಟ್ಟಿರುವ ಕಲ್ಲೋಳ-ಯಡೂರ ಸೇತುವೆ ಕಳೆದ ಹತ್ತು ವರ್ಷಗಳಿಂದ ಶಿಥಿಲಗೊಂಡು ಈಗಲೋ ಆಗಲೋ ಬೀಳುವ ಹಂತ ತಲುಪಿದೆ. ಸೇತುವೆ ಮೇಲೆ ಭಾರಿ ವಾಹನಗಳು...

  • ಚಿಕ್ಕೋಡಿ: ರಾಜ್ಯದ ಅಂಗನವಾಡಿ ಕಟ್ಟಡಗಳಿಗೆ ಪುನನಿರ್ಮಾಣ ಹಾಗೂ ನವೀಕರಣದ ಅವಶ್ಯಕವಿದ್ದು, ಕೂಡಲೇ ಕೇಂದ್ರ ಸಚಿವರು ಗಮನ ಹರಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು...

ಹೊಸ ಸೇರ್ಪಡೆ