ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

Team Udayavani, Nov 22, 2019, 11:43 AM IST

ಬೆಳಗಾವಿ: ತಾಲೂಕಿನ ವಿವಿಧ ರಸ್ತೆಗಳು ಹದಗೆಟ್ಟಿದ್ದು, ರಸ್ತೆ ದುರಸ್ತಿ ಮಾಡದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಜಿಪಂ ಸದಸ್ಯೆ ಸರಸ್ವತಿ ಪಾಟೀಲ ನೇತೃತ್ವದಲ್ಲಿ ಗ್ರಾಮಸ್ಥರು ಗುರುವಾರ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಸ್ಥಳೀಯರು, ಹದಗೆಟ್ಟ ರಸ್ತೆ ನಿರ್ಮಾಣ ಮಾಡುವಂತೆ ಅನೇಕ ಸಲ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಎಪಿಎಂಸಿಯಿಂದ ಹಂದಿಗನೂರು ಕ್ರಾಸ್‌, ಹಿಂಡಲಗಾ ಕ್ರಾಸ್‌ದಿಂದ ತುರಮುರಿ ಬಾಚಿ ಗ್ರಾಮಮುಖ್ಯ ರಸ್ತೆ, ಹಿಂಡಲಗಾ ಕ್ರಾಸ್‌ದಿಂದ ಮನ್ನೂರ, ವೆಂಗುರ್ಲಾ ರಸ್ತೆಯಿಂದ ಉಚಗಾಂವ ವರೆಗೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ನಿತ್ಯ ವಾಹನ ಸವಾರರು ಪರದಾಡುವಂತಾಗಿದೆ.

ದಿನಾಲೂ ಮೂರ್‍ನಾಲ್ಕು ಜನ ಸವಾರರು ವಾಹನದ ಮೇಲಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ದೂರಿದರು. ಕಳೆದ ವರ್ಷವೂ ಕಂಗ್ರಾಳಿ, ಅಲತಗಾ, ಜಾಫರವಾಡಿ, ಕಡೋಲಿ, ಅಗಸಗಾ, ಹಂದಿಗನೂರ, ಕೆದನೂರ ರಸ್ತೆಗಳು ಹದಗೆಟ್ಟಿದ್ದವು. ಆಗ ರಸ್ತೆ ತಡೆದುಪ್ರತಿಭಟನೆ ನಡೆಸಿ ಸರ್ಕಾರವನ್ನು ಎಚ್ಚರಿಸಲಾಗಿತ್ತು. ಈಗ ಮತ್ತೆ ಈ ಭಾಗದ ರಸ್ತೆಗಳು ಕೆಟ್ಟಿದ್ದರಿಂದ ಕೂಡಲೇ ಜಿಲ್ಲಾಡಳಿತ ಗಮನಹರಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಸ್ಥಳೀಯರಾದ ಯಲ್ಲಪ್ಪ ಪಾಟೀಲ, ಪುಂಡಲೀಕ ಪಾಟೀಲ, ಆಶಾ ಕಿಲ್ಲೇಕರ, ಸುನೀತಾ ಜಾಧವ, ಮಹಾದೇವಿ ದೇಶನೂರ, ಸುವರ್ಣಾ ಕಾಂಬಳೆ, ಕವಿತಾ ಶಿಂಧೆ ಸೇರಿದಂತೆ ಇತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ