ಮಳೆ ಅವಾಂತರ: ಮನೆಗೆ ನುಗ್ಗಿದ ನೀರು

•ಜಿಲ್ಲಾಸ್ಪತ್ರೆ ಆವರಣದಲ್ಲಿ ಧರೆಗುರುಳಿದ ಮರ•ಕೋನವಾಳ ಗಲ್ಲಿಗೆ ಶಾಸಕ ಬೆನಕೆ ಭೇಟಿ

Team Udayavani, Aug 3, 2019, 11:09 AM IST

ಬೆಳಗಾವಿ: ಕೋನವಾಳ ಗಲ್ಲಿಯ ನಾಲಾ ಕಾಂಪೌಂಡ್‌ ಒಡೆದು ಮನೆಗಳಿಗೆ ನೀರು ನುಗ್ಗಿದ ಸ್ಥಳಕ್ಕೆ ಶಾಸಕ ಅಣಿಲ ಬೆನಕೆ ಭೇಟಿ ನೀಡಿ ಪರಿಶೀಲಿಸಿದರು.

ಬೆಳಗಾವಿ: ಒಂದು ದಿನದ ಮಟ್ಟಿಗೆ ತುಸು ಶಾಂತವಾಗಿದ್ದ ವರುಣರಾಯ ಶುಕ್ರವಾರ ಮತ್ತೆ ಅಬ್ಬರಿಸಿದ್ದು, ಬೆಳಗಿನ ಜಾವದಿಂದಲೂ ಎಡೆಬಿಡದೇ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ರಭಸದ ಗಾಳಿ-ಮಳೆಯಿಂದಾಗಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಬೃಹತ್‌ ಮರವೊಂದು ಧರೆಗುರುಳಿದೆ.

ಶುಕ್ರವಾರ ಬೆಳಗ್ಗೆಯಿಂದ ಸ್ವಲ್ಪವೂ ನಿಲ್ಲದೇ ಧಾರಾಕಾರ ಮಳೆ ಸುರಿಯಿತು. ಎಂದಿನಂತೆ ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಮಳೆ ಅವಾಂತರ ಸೃಷ್ಟಿಸಿತು. ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮರ ನೆಲಕ್ಕುರುಳಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಳೆಯಿಂದ ನಗರದ ಮರಾಠಾ ಕಾಲೋನಿ, ಸಮರ್ಥ ನಗರ, ಚೌಗುಲೆವಾಡಿ, ದ್ವಾರಕಾ ನಗರ, ವಡಗಾಂವಿಯ ಮಲಪ್ರಭಾ ನಗರ, ಪರಮೇಶ್ವರ ನಗರ, ಕಪಿಲೇಶ್ವರ ಕಾಲೋನಿ, ಮಾರುತಿ ನಗರ, ನಾನಾವಾಡಿ. ಅನಗೋಳದ ಕುರುಬರ ಗಲ್ಲಿ ಸೇರಿದಂತೆ ಬಹುತೇಕ ಪ್ರದೇಶ ಹಾಗೂ ಬಡಾವಣೆಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಯಿತು. ಬೆಳಗ್ಗೆಯಿಂದ ಈ ಭಾಗದ ನಿವಾಸಿಗಳು ಮನೆಗೆ ನುಗ್ಗಿದ ನೀರು ಹೊರ ಚೆಲ್ಲುವುದರಲ್ಲಿಯೇ ನಿರತರಾಗಿದ್ದರು.

ನಗರದಲ್ಲಿ ಸುರಿಯುತ್ತಿರುವ ಅತಿ ಮಳೆಯಿಂದಾಗಿ ಕೋನವಾಳ ಗಲ್ಲಿಯಲ್ಲಿನ ನಾಲಾ ಕೌಂಪೌಂಡ್‌ ಕುಸಿದು ಬಿದ್ದು ನಾಲಾದಲ್ಲಿನ ನೀರು ಹತ್ತಿರದ ಮನೆಗಳಿಗೆ ನುಗ್ಗಿದೆ. ಸ್ಥಳಕ್ಕೆ ಶಾಸಕ ಅನಿಲ ಬೆನಕೆ ಭೇಟಿ ನೀಡಿ ಪರಿಶೀಲಿಸಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ಕಳೆದ 10 ವರ್ಷಗಳ ಅವಧಿಯಲ್ಲಿ ಆಡಳಿತ ವೈಫಲ್ಯದಿಂದಾಗಿ ನಗರದ ಪ್ರಮುಖ ನಾಲೆಗಳಲ್ಲಿ ಒಂದಾದ ಕೋನವಾಳ ಗಲ್ಲಿ ನಾಲಾ ಕಾಮಗಾರಿ ನಿರ್ಲಕ್ಷಿಸಲಾಗಿದೆ. ಹೀಗಾಗಿ ನಾಲಾ ಕೌಂಪೌಂಡ್‌ ಕುಸಿದು ಬಿದ್ದಿದೆ. ಇದರ ನೀರು ಕೋನವಾಳ ಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನುಗ್ಗಿದೆ ಎಂದರು.

ಬಳಿಕ ಸ್ಥಳಕ್ಕೆ ಬಂದ ಹಾಗೂ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ಮಾಹಿತಿ ಪಡೆದುಕೊಂಡು ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಹೇಳಿದರು. ಮಾಜಿ ಮೇಯರ್‌ ಸರಿತಾ ಪಾಟೀಲ ಸೇರಿದಂತೆ ಇತರರು ಇದ್ದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ