ನೆರೆಗೆ ಮತ್ತೆ ತತ್ತರಿಸಿದ ರಾಮದುರ್ಗ

Team Udayavani, Sep 9, 2019, 10:26 AM IST

ರಾಮದುರ್ಗ: ನವಿಲು ತೀರ್ಥ ಅಣೆಕಟ್ಟಿನಿಂದ ಅಧಿಕ ನೀರು ಹರಿಬಿಟ್ಟ ಕಾರಣ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಮಲಪ್ರಭೆ.

ರಾಮದುರ್ಗ: ‘ಹೋದೆಯಾ ಪಿಶಾಚಿ ಎಂದರೆ ಮತ್ತೇ ಬಂದೆಯಾ ರಾಕ್ಷಸಿ’ ಎನ್ನುವಂತಾಗಿದೆ ಪ್ರವಾಹ ಸಂತ್ರಸ್ತರ ಬದುಕು. ಪ್ರವಾಹದ ಕಹಿ ನೆನಪು ಮಾಸುವ ಮೊದಲೇ ಮತ್ತೆ ಪ್ರವಾಹದ ಕಾರ್ಮೋಡ ಕವಿದಿದೆ.

ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಉಂಟಾದ ಪ್ರವಾಹ ಈಗ ಮತ್ತೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಪ್ರಾರಂಭವಾಗಿದ್ದು, ಕಳೆದೊಂದು ತಿಂಗಳಿಂದ ಸಂಕಷ್ಟ ಅನುಭವಿಸಿದ ನಿರಾಶ್ರಿತರು ಮತ್ತೆ ಆತಂಕಕ್ಕೆ ಪಡುವಂತೆ ಮಾಡಿದೆ. ಮುಂದೆ ನಮ್ಮ ಗತಿ ಏನಪ್ಪಾ ಎಂದು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತುಕೊಳ್ಳುವಂತೆ ಮಾಡಿದೆ ‘ಮಹಾ’ ಪ್ರವಾಹ. ಖಾನಾಪುರ ವ್ಯಾಪ್ತಿಯ ಸುತ್ತಮುತ್ತ ಭಾರಿ ಮಳೆ ಬೀಳುತ್ತಿರುವ ಕಾರಣದಿಂದಾಗಿ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ನಮೀಲು ತೀರ್ಥ ಡ್ಯಾಂನಿಂದ ಈಗಾಗಲೇ 20 ಸಾವಿರ ಕ್ಯೂಸೆಕ್‌ಗಿಂತ ಅಧಿಕ ನೀರನ್ನು ಹೊರಬಿಡಲಾಗಿದೆ. ತಾಲೂಕಿನ 29 ಗ್ರಾಮಗಳ ಹಾಗೂ ಪಟ್ಟಣದ ನಾಲ್ಕೈದು ವಾರ್ಡ್‌ಗಳಲ್ಲಿನ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಲು ಅಧಿಕಾರಿಗಳು ಸೂಚಿಸುತ್ತಿದ್ದಾರೆ.

ಸೇತುವೆಗಳು ಜಲಾವೃತ: ಪ್ರವಾಹದಿಂದಾಗಿ ಕಳೆದ 4 ದಿನಗಳಿಂದ ಪಟ್ಟಣದ ವೆಂಕಟೇಶ್ವರ ದೇವಸ್ಥಾನ ಹತ್ತಿರದ ಹಳೇ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಇನ್ನೂ ರಾಮದುರ್ಗದಿಂದ ಘಟಕನೂರಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯ ಸೇತುವೆ ಹಾಗೂ ಹಂಪಿಹೊಳಿ-ಬೆನ್ನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಸಂಪರ್ಕ ಕಡಿತಗೊಂಡಿವೆ.

ನೀರು ಹೆಚ್ಚಾದರೆ ರಸ್ತೆ ಸಂಚಾರ ಕಡಿತ: ಈಗ 20 ಸಾವಿರ ಕ್ಯೂಸೆಕ್‌ ನೀರು ಹರಿಬಿಟ್ಟ ಕಾರಣ ಈಗಾಗಲೇ ಗ್ರಾಮೀಣ ಪ್ರದೇಶದ ಕೆಲ ರಸ್ತೆಗಳ ಸಂಪರ್ಕ ಕಡಿತವಾಗಿದೆ. ಮಲಪ್ರಭೆ ಉಗಮ ಸ್ಥಾನವಾದ ಕಣಕುಂಬಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಳ ಹರಿವಿನ ಪ್ರಮಾಣ ಹೆಚ್ಚಾದಂತೆ ಅಧಿಕ ಪ್ರಮಾಣದ ನೀರನ್ನು ಬಿಟ್ಟರೆ ರಾಮದುರ್ಗದಿಂದ ತೆರಳುವ ಹುಬ್ಬಳ್ಳಿ ಹಾಗೂ ಬೆಳಗಾವಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ. ಕಳೆದ ಮೂರು ದಿನಗಳಿಂದ ನದಿಗೆ ಹರಿಬಿಡುತ್ತಿರುವ ನೀರಿನ ಪ್ರಮಾಣ ದಿನದಿಂದ-ದಿನಕ್ಕೆ ಹೆಚ್ಚುತ್ತಿದ್ದು, ಜನರಲ್ಲಿ ಇನ್ನೂ ಹೆಚ್ಚಿನ ಆತಂಕ ಮೂಡಿಸುತ್ತಿದೆ.

ನದಿ ಪಕ್ಕದ ಮನೆಗಳಿಗೆ ನುಗ್ಗಿದ ನೀರು: ಮಲಪ್ರಭಾ ನದಿಯ ಪಕ್ಕದ ಮನೆಗಳಿಗೆ ಈಗಾಗಲೇ ನೀರು ನುಗ್ಗಿದ್ದು, ಜನರೆಲ್ಲಾ ಮತ್ತೆ ಪರಿಹಾರ ಕೇಂದ್ರದತ್ತ ಮುಖ ಮಾಡಿದ್ದಾರೆ. ಇನ್ನೂ ಹೆಚ್ಚಿನ ನೀರು ಬಂದರೆ ಮನೆಗಳು ಸಂಪೂರ್ಣ ಜಲಾವೃತಗೊಂಡು ಅಳಿದುಳಿದ ಅವಶೇಷಗಳು ನೀರು ಪಾಲಾಗುವ ಸ್ಥಿತಿ ಬರಲಿದೆ.

ಆತಂಕದಲ್ಲಿ ನಿರಾಶ್ರಿತರು: ಕಳೆದ ತಿಂಗಳು ಉಂಟಾದ ಪ್ರವಾಹದಲ್ಲಿ ಮನೆ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್‌ ವ್ಯವಸ್ಥೆ ಮಾಡುವದಾಗಿ ಹೇಳಿರುವ ಮಾತು ಭರವಸೆಯಾಗಿದೆ ಹೊರತು ಕಾರ್ಯಗತವಾಗಿಲ್ಲ. ಹೀಗಿರುವಾಗಲೇ ಮತ್ತೆ ಪ್ರವಾಹ ಬಂದಿದ್ದು, ನಮ್ಮ ಗತಿ ಏನು? ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳಲ್ಲಿನ ಜನತೆಗೆ ಈಗಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಮುನ್ನಚ್ಚೆರಿಕೆಯಾಗಿ ಒಂದು ಎನ್‌ಡಿಆರ್‌ಎಫ್‌ ತಂಡವನ್ನು ಕರೆಸಲಾಗಿದೆ. ನದಿಗೆ ಹೊಂದಿಕೊಂಡ ಕಿಲಬನೂರ, ಸುನ್ನಾಳ, ಹಂಪಿಹೊಳಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ನೀರು ಆವರಿಸಿಕೊಂಡಿದೆ. ಹೆಚ್ಚಿನ ನೀರು ಬಂದರೂ ಮುಂದೆ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ತಾಲೂಕಾಡಳಿತದಿಂದ ಎಲ್ಲ ಸಿದ್ಧತೆ ಮಾಡಲಾಗಿದೆ. • ಬಸನಗೌಡ ಕೋಟುರ, ತಹಶೀಲ್ದಾರ್‌, ರಾಮದುರ್ಗ
ಈಗಾಗಲೇ ಪ್ರವಾಹ ಪೀಡಿತ 30 ಗ್ರಾಮಗಳ ಹಾಗೂ ಪಟ್ಟಣದಲ್ಲಿನ ವಿವಿಧ ವಾರ್ಡ್‌ಗಳಲ್ಲಿನ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಹೇಳಲಾಗಿದೆ. ಜನತೆಗೆ ತೊಂದರೆಯಾಗದಂತೆ, ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನತೆಯ ಸುರಕ್ಷತೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲು ಕ್ರಮವಹಿಸಲಾಗಿದೆ. • ಮಹಾದೇವಪ್ಪ ಯಾದವಾಡ, ರಾಮದುರ್ಗ ಶಾಸಕ
• ಈರನಗೌಡ ಪಾಟೀಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ನದಿಗಳು ಶಾಂತವಾಗಿವೆ. ಪರಿಹಾರ ಕೇಂದ್ರಗಳ ಬಾಗಿಲು ಮುಚ್ಚಿವೆ. ಮುಳುಗಡೆ ಮತ್ತು ಜಲಾವೃತವಾಗಿದ್ದ ಯಾವ ಗ್ರಾಮದಲ್ಲೂ ಈಗ ಗ್ರಾಮಗಳ ಕಟ್ಟೆಯ ಮೇಲೆ ತಲೆ...

  • ಬೆಳಗಾವಿ: ಉಪ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ನೀತಿ...

  • ಬೆಳಗಾವಿ: ಜಿಲ್ಲೆಯ ಮೂರು ಮತಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಸೋಮವಾರದಿಂದ ನಾಮಪತ್ರ ಸ್ವೀಕಾರ ಆರಂಭವಾಗಲಿದೆ. ಮಾದರಿ ನೀತಿ ಸಂಹಿತೆ ಜಿಲ್ಲಾ ವ್ಯಾಪ್ತಿಯಲ್ಲಿ...

  • ಬೈಲಹೊಂಗಲ: ಕೇಂದ್ರ, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸೌಲಭ್ಯವನ್ನು ಪ್ರತಿಯೊಬ್ಬ ನಾಗರಿಕರಿಗೆ ಅಧಿಕಾರಿಗಳು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು...

  • ಬೆಳಗಾವಿ: ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಅ. 21ರಂದು ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಪ್ರಕೃತಿ ವಿಕೋಪಕ್ಕೆ...

ಹೊಸ ಸೇರ್ಪಡೆ