ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರ ಒತ್ತುವರಿ ಸಮೀಕ್ಷೆ: ಜಾರಕಿಹೊಳಿ
Team Udayavani, Sep 19, 2020, 1:18 PM IST
ಬೆಳಗಾವಿ: ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರದ ಒತ್ತುವರಿ ಬಗ್ಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ನದಿ ಪಾತ್ರದ ತೆರವು ಕುರಿತು ಮಹತ್ವದ ಮೊದಲ ಸಭೆ ನಡೆಸಲಾಗಿದೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಹಾಗೂ ಸಲಹೆಗಳನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದರು.
ಈ ಮೊದಲು 1904 ರಲ್ಲಿಪ್ರವಾಹ ಬಂದಾಗ ಮೂರೇ ತಾಸಿನಲ್ಲಿ ನೀರು ಇಳಿಮುಖವಾಗುತ್ತಿತ್ತು. ಆದರೆ ಈಗ ಪ್ರವಾಹ ಬಂದರೆ 8-10 ದಿನಗಳವರೆಗೆ ನೀರು ಕಡಿಮೆಯಾಗುವದಿಲ್ಲ. ಜಲಾಶಯಗಳಲ್ಲಿ ಹೂಳು ತುಂಬಲು ಹಾಗೂ ನೀರು ಸಂಗ್ರಹ ಪ್ರಮಾಣ ಕಡಿಮೆಗೆ ಒತ್ತುವರಿಯೇ ಕಾರಣ ಎಂದು ಹೇಳಿದರು.
ಇದನ್ನೂ ಓದಿ: ದಿಲ್ಲಿ ಪ್ರವಾಸ ಯಶಸ್ವಿ, ಸಂಪುಟ ವಿಸ್ತರಣೆ ಬಗ್ಗೆ ಇಂದೇ ಅಂತಿಮ ನಿರ್ಧಾರ: ಬಿ ಎಸ್ ಯಡಿಯೂರಪ್ಪ
ಈ ನದಿಗಳ ಸಮೀಕ್ಷೆ ಬಳಿಕ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸಲಾಗುವುದು. ಅಗತ್ಯತೆ ಆಧರಿಸಿ ಸಮೀಕ್ಷೆ ಬಳಿಕ ಕೇಂದ್ರ ಸರ್ಕಾರದ ನೆರವು ಪಡೆಯುವ ಬಗ್ಗೆ ತೀರ್ಮಾನ ಮಾಡಲಾಗುವದು ಎಂದು ರಮೇಶ ಜಾರಕಿಹೊಳಿ ಹೇಳಿದರು.
ನದಿಪಾತ್ರದ ಅತಿಕ್ರಮಣ ಆಗಿರುವುದು ಸತ್ಯ. ಒತ್ತುವರಿ ತೆರವುಗೊಳಿಸಿದರೆ ಪ್ರವಾಹ ನಿಯಂತ್ರಣ ಸಾಧ್ಯ. ಈಗಾಗಲೇ ಬೆಳಗಾವಿ ಪ್ರಾದೇಶಿಕ ಆಯುಕ್ತರು ಪ್ರಾಥಮಿಕ ಸಮೀಕ್ಷೆ ನಡೆಸಿದ್ದಾರೆ. ಸಮಗ್ರ ಸಮೀಕ್ಷೆ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಶಾಶ್ವತ ಪರಿಹಾರ ರೂಪಿಸಲಾಗುವುದು ಎಂದರು.
ಸಂಪುಟ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಿರ್ಧರಿಸಲಿದೆ. ಉಮೇಶ ಕತ್ತಿ ಸಚಿವರಾದರೆ ಸಂತೋಷ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ, ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.