ಕಲಿಕೆ ಜತೆ ಸಾಮಾಜಿಕ ಕಳಕಳಿ ಅಗತ್ಯ
Team Udayavani, Mar 16, 2020, 3:57 PM IST
ಬೈಲಹೊಂಗಲ: ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಕಲಿಕೆಯಲ್ಲಿ ಸಾಧನೆ ಮಾಡುವ ಜತೆಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಎಂದು ಮುರಗೋಡ ದುರದುಂಡೀಶ್ವರಮಠದ ನೀಲಕಂಠ ಸ್ವಾಮೀಜಿ ಹೇಳಿದರು.
ಸಮೀಪದ ಹೊಸೂರ ಗ್ರಾಮದ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗೆ ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಡಬೇಕು ಎಂದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ಐ. ಪೂಜಾರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ತನ್ನದೇ ಆದ ಪ್ರತಿಭೆ ಹೊಂದಿದ್ದು, ನಿಶ್ಚಿತ ಗುರಿ ಹಾಗೂ ಪರಿಶ್ರಮದೊಂದಿಗೆ ಉತ್ತಮ ನಾಗರಿಕರಾಗಿಬೇಕು ಎಂದರು. ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಬೈಲಹೊಂಗಲದ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಕಸಾಪ ತಾಲೂಕ ಮಾಜಿ ಅಧ್ಯಕ್ಷ ಈಶ್ವರ ಹೋಟಿ, ಡಾ.ಮಹಾಂತೇಶ ರಾಮಣ್ಣವರ ಮಾತನಾಡಿದರು.
ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ ಮೂಗಬಸವ ಅಧ್ಯಕ್ಷತೆ ವಹಿಸಿದ್ದರು. ಅತ್ಯುತ್ತಮ ವಿದ್ಯಾರ್ಥಿನಿ ಗಂಗಮ್ಮ ಇಳಿಗೇರ, ಅತ್ಯುತ್ತಮ ವಿದ್ಯಾರ್ಥಿ ಶಿವಕುಮಾರ ಬೂದಿಹಾಳ ಅನಿಸಿಕೆ ವ್ಯಕ್ತಪಡಿಸಿದರು. ನಾನಾ ಚಟುವಟಿಕೆಯಲ್ಲಿ ಸ್ಥಾನ ಪಡೆದ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸತ್ಕರಿಸಲಾಯಿತು.
ಉದ್ಯಮಿ ಮಹಾಂತೇಶ ಶೀಲವಂತರ, ಚಂದ್ರಯ್ಯ ಯರಗಟ್ಟಿಮಠ, ರಾಚಪ್ಪ ಬೋಳೆತ್ತಿನ, ನಿರ್ದೇಶಕರಾದ ಎಸ್. ಕೆ.ಮೆಳ್ಳಿಕೇರಿ, ಮಲ್ಲಿಕಾರ್ಜುನ ವಿವೇಕಿ, ಶಿಕ್ಷಕರಾದ ಬಸವರಾಜ ಗಾಣಿಗೇರ, ಕಿರಣ ಅಸೋದೆ, ಮಂಜುಳಾ ಪಾಟೀಲ ಇದ್ದರು.