ಉದ್ಯೋಗ ಖಾತ್ರಿಯಡಿ ಶೀಘ್ರ ಕೆಲಸ: ರವಿ
Team Udayavani, Apr 23, 2020, 4:33 PM IST
ಕೋಹಳ್ಳಿ: ಲಾಕ್‌ಡೌನ್ ನಿಮಿತ್ತ ತಾಲೂಕಿನಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗವಿಲ್ಲದಂತಾಗಿದೆ. ಜನರಿಗೆ ಉದ್ಯೋಗ ನೀಡಲು ಎರಡ್ಮೂರು ದಿನಗಳಲ್ಲಿ ಕೋಹಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಲಾಗುವುದು ಎಂದು ಅಥಣಿ ತಾಪಂ ಇಒ ರವಿ ಬಂಗಾರೆಪ್ಪನ್ನವರ ಹೇಳಿದರು.
ಗ್ರಾಮದಲ್ಲಿ ಬೇರೆ ಗ್ರಾಮಗಳಿಂದ ಬಂದು ನೆಲೆಸಿದ ಜನರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ತಾಲೂಕಿನಲ್ಲಿ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತುವುದು, ವೈಯಕ್ತಿಕ ಕಾಮಗಾರಿ, ಕೃಷಿ ಹೊಂಡ, ಬದುವು ನಿರ್ಮಾಣ, ನಾಲಾ ಹೂಳೆತ್ತುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೆಲಸ ಮಾಡುವಾಗ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ಕುರಿತು ಗ್ರಾಮದಲ್ಲಿ ಡಂಗುರ ಸಾರಿ ಕೆಲಸ ಪ್ರಾರಂಭಿಸಬೇಕೆಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಅಥಣಿ ತಾಲೂಕಿನಲ್ಲಿ ಯಾವುದೇ ಕೋವಿಡ್ 19 ಕೇಸ್ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಅನೇಕರು ಬೇರೆಡೆಯಿಂದ ಬಂದಿದ್ದಾರೆ. ಇವರಿಂದ 15 ದಿನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು. ಈ ವೇಳೆ ಮಹಾತ್ಮ ಉದ್ಯೋಗ ಖಾತ್ರಿ ಯೋಜನೆ ತಾಲೂಕು ಸಹಾಯಕ ನಿರ್ದೇಶಕ ಅರುಣ ಮಾಚಕನೂರ, ಪಿಡಿಒ ಈರಪ್ಪ ತಮದಡ್ಡಿ, ಗ್ರಾಮ ಲೆಕ್ಕಾಧಿಕಾರಿ ಸಂಜೀವಕುಮಾರ ರಾಠೊಡ, ಆರೋಗ್ಯ ಇಲಾಖೆಯ ಎಫ್.ಎಸ್. ಕೋಲಕಾರ, ಪೊಲೀಸ್ ಅಧಿಕಾರಿ ಶ್ರೀಶೈಲ ಪಾಟೀಲ ಸೇರಿದಂತೆ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಇದ್ದರು.