ಟೋಲ್‌ ಸಂಗ್ರಹಕ್ಕೆ ತೀವ್ರ ವಿರೋಧ

ಅಹವಾಲು ಸ್ವೀಕರಿಸಿ ಸರ್ಕಾರಕ್ಕೆ ವರದಿ

Team Udayavani, Oct 15, 2019, 12:22 PM IST

ಚಿಕ್ಕೋಡಿ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಚಿಕ್ಕೋಡಿ ತಾಲೂಕಿನ ಕಬ್ಬೂರ ಮತ್ತು ಚಿಂಚಣಿ ಬಳಿ ಟೋಲ್‌ ಸಂಗ್ರಹಕ್ಕೆ ಕಬ್ಬೂರ ನಾಗರಿಕರು ಭಾರಿ ವಿರೋಧ ವ್ಯಕ್ತಪಡಿಸಿ ಟೋಲ್‌ ಸಂಗ್ರಹ ಘಟಕಗಳನ್ನು ತೆರವುಗೊಳಿಸಬೇಕೆಂದು ನೂರಾರು ಸಾರ್ವಜನಿಕರು ಒಕ್ಕೊರಲಿನಿಂದ ಆಗ್ರಹಿಸಿದರು.

ನಿಪ್ಪಾಣಿ-ಮುಧೊಳ ರಾಜ್ಯ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ನಿಲ್ಲಿಸಬೇಕೆಂದು ಭಾರಿ ವಿರೋಧ ವ್ಯಕ್ತವಾದಾಗ ಜಿಲ್ಲಾಧಿಕಾರಿ ಆದೇಶನ್ವಯ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ್‌ ಡಾ| ಸಂತೋಷ ಬಿರಾದಾರ ಮತ್ತು ಎಎಸ್‌ಪಿ ಮಿಥುನಕುಮಾರ ನೇತೃತ್ವದಲ್ಲಿ ಕಬ್ಬೂರ ಪಟ್ಟಣದಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆ ಮತ್ತು ನಾಗರಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಕಬ್ಬೂರ ಮತ್ತು ಸುತ್ತಮುತ್ತಲಿನ ನಾಗರಿಕರು ಒಕ್ಕೊರಲಿನಿಂದ ಟೋಲ್‌ ಸಂಗ್ರಹ ಮಾಡಬಾರದು ಮತ್ತು ಟೋಲ್‌ ಸಂಗ್ರಹ ಕೇಂದ್ರಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ಕಬ್ಬೂರಿನ ಧುರೀಣ ಸುರೇಶ ಬೆಲ್ಲದ ಮಾತನಾಡಿ, ಚಿಕ್ಕೋಡಿ ಮಾರ್ಗ ಮಧ್ಯದಲ್ಲಿ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ಇದೆ. ಇಚಲಕರಂಜಿ-ಹುಕ್ಕೇರಿ ರಾಜ್ಯ ಹೆದ್ದಾರಿ ಇದೆ. ಕೊಟ್ಟಲಗಿ ನಿಪ್ಪಾಣಿ ರಾಜ್ಯ ಹೆದ್ದಾರಿ ಇದೆ. ಆದರೆ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಗೆ ಮಾತ್ರ ಟೋಲ್‌ ಸಂಗ್ರಹ ಯಾಕೆ ಎಂದು ಪ್ರಶ್ನಿಸಿದರು. ಟೋಲ್‌ ಸಂಗ್ರಹ ಬೇಡವೇ ಬೇಡ ಎಂದು ಕಬ್ಬೂರ, ಜಾಗನೂರ, ನಾಗರಮುನ್ನೋಳ್ಳಿ, ಉಮರಾಣಿ ಮುಂತಾದ ಗ್ರಾಮಗಳಿಂದ ಠರಾವು ಪಾಸು ಮಾಡಿಕೊಡಲಾಗುತ್ತದೆ. ಕೂಡಲೇ ಟೋಲ್‌ ಸಂಗ್ರಹ ಘಟಕಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ನ್ಯಾಯವಾದಿ ಸುಧಾಕರ ಪಾಟೀಲ ಮಾತನಾಡಿ,

ಕಬ್ಬೂರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿನಿತ್ಯ ರೈತರು ತಮ್ಮ ಹೊಲಗಳಿಗೆ ಹೋಗುತ್ತಾರೆ. ಇಂಥವರು ಪ್ರತಿದಿನ ಟೋಲ್‌ ಹೇಗೆ ಕಟ್ಟಬೇಕು. ಸರ್ಕಾರ ಟೋಲ್‌ ಸಂಗ್ರಹ ಮಾಡುವ ನಿರ್ಧಾರ ಕೈಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ದುಂಡಪ್ಪ ಬೆಂಡವಾಡೆ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಸತತ ಬರಗಾಲದಿಂದ ಜನ ತತ್ತರಿಸಿದ್ದಾರೆ. ಈ ವರ್ಷ ಸ್ವಲ್ಪ ಮಳೆ ಆಗಿದೆ. ರೈತರು ಚೇತರಿಸಿಕೊಳ್ಳುವಾಗ ರಸ್ತೆಗೆ ಟೋಲ್‌ ಹಾಕಿ ಮತ್ತೆ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡಬಾರದು. ಅದು ಒಂದೇ ತಾಲೂಕಿನಲ್ಲಿ 25 ಕಿ.ಮೀ. ವ್ಯಾಪ್ತಿಯ ಒಳಗಡೆ ಎರಡು ಟೋಲ್‌ ಸಂಗ್ರಹ ಮಾಡುವ ನಿರ್ಧಾರ ಹಿಂತೆಗೆದುಕೊಂಡು ಸಾವಿರಾರು ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.ಮಹಾದೇವ ಬಾನೆ, ಲಗಮ್ಮಣ್ಣಾ ಪೂಜೇರಿ, ಮಹಾಂತೇಶ ಕಾಡೇಶಗೋಳ, ಚಂದ್ರಶೇಖರ ಮುಂತಾದವರು ಮಾತನಾಡಿ, ಟೋಲ್‌ ಸಂಗ್ರಹ ನಿರ್ಧಾರವನ್ನು ವಿರೋಧಿಸಿದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮತ್ತು ಸಾರ್ವಜನಿಕರ ಮಧ್ಯೆ ಮಾತಿಗೆ ಮಾತು ಬೆಳೆದಾಗ ಮಧ್ಯ ಪ್ರವೇಶಿಸಿದ ತಹಶೀಲ್ದಾರ್‌ ಸಂತೋಷ ಬಿರಾದಾರ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ. ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕೆಂದು ಮನವಿ ಮಾಡಿದಾಗ ಸಾರ್ವಜನಿಕರು ಶಾಂತರಾದರು.

ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಮಾತನಾಡಿ, ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಗೆ ಕಬ್ಬೂರ ಮತ್ತು ಚಿಂಚಣಿ ಬಳಿ ಅಳವಡಿಸಿರುವ ಟೋಲ್‌ ಸಂಗ್ರಹ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ. ಟೋಲ್‌ ಸಂಗ್ರಹ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಅಂತಿಮ ನಿರ್ಧಾರವಾಗುತ್ತದೆ. ಜನರ ಅಭಿಪ್ರಾಯದ ಮಾಹಿತಿಯನ್ನು ಸರ್ಕಾರಕ್ಕೆ ಕಳಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಎಎಸ್‌ಪಿ ಮಿಥುನಕುಮಾರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

  • ಮೂಡಲಗಿ: ದೇಶದಲ್ಲಿ ಕೃಷಿಯ ನಂತರ ಮತ್ತೂಂದು ಉತ್ಪಾದನೆಯ ಮಹಾ ಪರ್ವವೆಂದರೆ ಮಿನುಗಾರಿಕೆ ಉತ್ಪಾದನೆಯವಾಗಿದೆ. ಮೀನುಗಾರು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು...

  • ಚಿಕ್ಕೋಡಿ: ಶಿಕ್ಷಕರು ಕಚೇರಿಗೆ ವಿನಾಕಾರಣ ಅಲೆದಾಡುವುದನ್ನು ತಪ್ಪಿಸಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಜಾರಿಗೆ ತರಬೇಕು. ಶಿಕ್ಷಣ ಇಲಾಖೆ ಯಾವಾಗಲೂ ತಮ್ಮೊಂದಿಗಿದ್ದು,...

  • ಬೆಳಗಾವಿ: ತಾಲೂಕಿನ ಕಂಗ್ರಾಳಿ ಕೆ.ಎಚ್‌. ಗ್ರಾಪಂ ವ್ಯಾಪ್ತಿಯ ಅಲತಗಾ ಗ್ರಾಮದ ಹೊಲಗಳಿಗೆ ಹೋಗಲು ರಸ್ತೆ ಹಾಗೂ ಬ್ರಿಜ್‌ ಕಂ ಬಾಂದಾರ ಪುನರ್‌ ನಿರ್ಮಿಸುವಂತೆ ಆಗ್ರಹಿಸಿ...

  • ಬೆಳಗಾವಿ: ಉಪ ಚುನಾವಣೆ ಮುಗಿದು ಫಲಿತಾಂಶ ಬಂದ ಬೆನ್ನಲ್ಲೇ ಯಾರು ಉಪ ಮುಖ್ಯಮಂತ್ರಿ, ಯಾರಿಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಯಾರಿಗೆ ಎಂಬ ಚರ್ಚೆ ಜಿಲ್ಲೆಯಲ್ಲಿ...

  • ಮೂಡಲಗಿ: ಗೋಕಾಕ ಮತಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮ ಭಾರೀಗೆ ಬಿಜೆಪಿಯಿಂದ ರಮೇಶ ಜಾರಕಿಹೊಳಿ ಅವರು ಆಯ್ಕೆಯಾಗಿದರಿಂದ ಮೂಡಲಗಿ ಪಟ್ಟಣ ಸೇರಿದಂತೆ ಅರಭಾವಿ ಕ್ಷೇತ್ರದಲ್ಲಿ...

ಹೊಸ ಸೇರ್ಪಡೆ