ದೇಶದಲ್ಲಿಯೇ ಇತಿಹಾಸ ನಿರ್ಮಿಸಿದ ಪಕ್ಷ ಕಾಂಗ್ರೆಸ್‌

Team Udayavani, Apr 22, 2019, 2:13 PM IST

ರಾಮದುರ್ಗ: ಕಳೆದ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷ, ದೇಶದ ಬಡವರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಕೇವಲ ಚುನಾವಣೆಗಾಗಿ ಹುಟ್ಟಿಕೊಳ್ಳದೆ ದೇಶದಲ್ಲಿಯೇ ಇತಿಹಾಸ ನಿರ್ಮಿಸಿದ ಪಕ್ಷ ಇದಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಜಿ. ನಂಜಯ್ಯಮಠ ಹೇಳಿದರು.

ತಾಲೂಕಿನ ಕಟಕೋಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಡಾ| ವಿ.ಎಸ್‌. ಸಾಧುನವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್‌ನ ಕೊಡುಗೆ ಏನು ಇಲ್ಲ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ನ ಬಹುತೇಕರು ತಮ್ಮ ಪ್ರಾಣ, ಜೀವನ ತ್ಯಾಗ ಮಾಡಿದ್ದಾರೆ. ಉಳುವವನೆ ಭೂಮಿ ಒಡೆಯ ಕಾನೂನು ರಚಿಸಿ ತುಳಿತಕ್ಕೆ ಒಳಗಾದವರ ಏಳ್ಗೆಗಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಬ್ಯಾಂಕ್‌ಗಳ ರಾಷ್ಟ್ರೀಕರಣ, ರಸ್ತೆ, ನೀರಾವರಿ, ವಿಶ್ವವಿದ್ಯಾಲಯಗಳು, ಅಣೆಕಟ್ಟು, ರೈಲು ಅಭಿವೃದ್ಧಿಗಳು ಕಾಂಗ್ರೆಸ್‌ನ ಕೊಡುಗೆಯಾಗಿವೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲವನ್ನು ತ್ಯಾಗ ಮಾಡಿದ್ದಾರೆ ಎಂದು ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದಾರೆ. ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ದೇಶಕ್ಕಾಗಿ ಅವರ ತ್ಯಾಗ ಏನೂ ಇಲ್ಲ ಎಂದು ಟೀಕಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀಸಲಾತಿ ಜಾರಿ ಮಾಡಿ ಎಲ್ಲ ವರ್ಗದ ಜನರು ಅಧಿಕಾರದಲ್ಲಿ ಇರುವಂತೆ ನೋಡಿಕೊಂಡಿದ್ದು ಕಾಂಗ್ರೆಸ್‌ ಪಕ್ಷದ ಸಾಧನೆ. ಇದು ಸಮತಾವಾದ, ಸಮಾಜವಾದ. ಆದರೆ ಸಂವಿಧಾನವನ್ನೇ ಬದಲಿಸುವ ಮಾತುಗಳನ್ನಾಡುವ ಬಿಜೆಪಿ ದಲಿತರ ಮತಗಳನ್ನು ಕೇಳುವ ಹಕ್ಕು ಹೊಂದಿಲ್ಲ ಎಂದು ಹೇಳಿದರು.

ಅಭ್ಯರ್ಥಿ ಡಾ| ವಿ.ಎಸ್‌. ಸಾಧುನವರ ಮಾತನಾಡಿ, ದೇಶದಲ್ಲಿ ಕಳೆದ 60 ವರ್ಷದ ಆಡಳಿತದಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸಮಾಜ ಸೇವೆ ಸಲ್ಲಿಸಲು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ತಮ್ಮನ್ನು ಗೆಲ್ಲಿಸಲು ಮನವಿ ಮಾಡಿದರು.

ಮಾಜಿ ಶಾಸಕ ಅಶೋಕ ಪಟ್ಟಣ ಮಾತನಾಡಿ, ರಾಮದುರ್ಗ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸಮಯದಲ್ಲಿ ಮತದಾರರ ತಪ್ಪಿನಿಂದಾಗಿ ತಮ್ಮ ಸೋಲು ಆಗಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷದ ಸಂಸದರು ಇರಲು ಪಕ್ಷಕ್ಕೆ ಮತ ನೀಡಿ ಸಹಕರಿಸಬೇಕು. ಇಬ್ಬರೂ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಜೋಡೆತ್ತಿನಂತೆ ಶ್ರಮಿಸುವುದಾಗಿ ಹೇಳಿದರು.

ಜೆಡಿಎಸ್‌ ಪಕ್ಷದ ರಾಜ್ಯ ಉಪಾಧ್ಯಕ್ಷ ಪಿ.ಎಫ್‌. ಪಾಟೀಲ, ಉಸ್ತುವಾರಿ ವಿದ್ಯಾ ಹಿರೇಮಠ, ಮಹೇಶ ದೇಸಾಯಿ, ಬಿ.ಎಸ್‌. ನಾಯಕ, ಪರಪ್ಪ ಜಂಗವಾಡ ಸೇರಿದಂತೆ ಅನೇಕರು ಮಾತನಾಡಿದರು.


ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಜ್ಞಾನ ಸಂಗಮದಲ್ಲಿ ಭಯೋತ್ಪಾದನೆ ದುಷ್ಪರಿಣಾಮಗಳ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ...

  • ಬೆಳಗಾವಿ: ಲೋಕಸಭಾ ಚುನಾವಣೆ-2019ರ ಬೆಳಗಾವಿ ಮತಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮೇ 23ರಂದು ಬೆಳಗ್ಗೆ 8 ಗಂಟೆಯಿಂದ ನಗರದ ಟಿಳಕವಾಡಿ ಆರ್‌ಪಿಡಿ ಕಾಲೇಜಿನಲ್ಲಿ ನಡೆಯಲಿದೆ...

  • ಸಂಬರಗಿ: ಖೀಳೆಗಾಂವ ಗ್ರಾಮದಲ್ಲಿ ಬುದ್ಧ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ಜಯಂತಿ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಪಿಕೆಪಿಎಸ್‌ ಅಧ್ಯಕ್ಷ ಅಣ್ಣಪ್ಪ ನಿಂಬಾಳ...

  • ಬೆಳಗಾವಿ: ಮಳೆ ಬಂತೆಂದರೆ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕಿರಿಕಿರಿಯಾಗುವುದು ಸಹಜ. ಪ್ರತಿ ವರ್ಷ ಅದೇ ರಾಗ ಅದೇ ಹಾಡು ಎಂಬ ಸ್ಥಿತಿ ಬೆಳಗಾವಿ ನಗರದಲ್ಲಿದೆ....

  • ಚಿಕ್ಕೋಡಿ: ಕಳೆದ ಎರಡು ತಿಂಗಳಿಂದ ಸಂಪೂರ್ಣ ಬತ್ತಿದ ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಚಿಕ್ಕೋಡಿ ಉಪವಿಭಾಗದ ಕರವೇ ಕಾರ್ಯಕರ್ತರು ಅಂಕಲಿ-ಮಾಂಜರಿ...

ಹೊಸ ಸೇರ್ಪಡೆ