ಮೈಸೂರು ದಸರಾದಲ್ಲಿ ಸಂತ್ರಸ್ತರ ಅಳಲು

•ಬೆಳಗಾವಿಯ ಪ್ರವಾಹವೇ ಮೈಸೂರು ದಸರಾದ ಸ್ತಬ್ಧ ಚಿತ್ರ•ಜಿಲ್ಲೆಯ ಪ್ರವಾಹದ ನೋವೇ ರೂಪಕ

Team Udayavani, Sep 7, 2019, 10:47 AM IST

ಬೆಳಗಾವಿ: ಎಂದೂ ಕಂಡು ಕೇಳರಿಯದಷ್ಟು ಬಂದು ಅಪ್ಪಳಿಸಿದ ಪ್ರವಾಹದ ಅಘಾತದಿಂದ ಜನ ಇನ್ನೂ ಹೊರಬಂದಿಲ್ಲ. ಪ್ರವಾಹದಿಂದ ನಲುಗಿದ ಇಲ್ಲಿಯ ಜನಜೀವನ ಹಾಗೂ ಅದಕ್ಕೆ ಸರ್ಕಾರ ಸ್ಪಂದಿಸಿದ ಪರಿಕಲ್ಪನೆಯೇ ಈ ಸಲ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಬೆಳಗಾವಿ ಜಿಲ್ಲೆಯ ಸ್ತಬ್ಧ ಚಿತ್ರವಾಗಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮರವಣಿಗೆಯಲ್ಲಿ ಜಂಬೂ ಸವಾರಿ ಬಿಟ್ಟರೆ ರೂಪಕಗಳು ಅತಿ ಹೆಚ್ಚು ಆಕರ್ಷಣೀಯವಾಗಿರುತ್ತವೆ. ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳು ಆಯಾ ಜಿಲ್ಲೆಗಳ ವಿಶೇಷತೆ ಹೊಂದಿರುತ್ತವೆ. ಪ್ರತಿ ವರ್ಷ ಒಂದಿಲ್ಲೊಂದು ವಿಶೇಷತೆಯುಳ್ಳ ಸ್ತಬ್ಧ ಚಿತ್ರಗಳು ದಸರಾ ಉತ್ಸವದಲ್ಲಿ ಗಮನ ಸೆಳೆಯುತ್ತವೆ. ಅದೇ ರೀತಿ ಈ ಸಲವೂ ವಿವಿಧ ವಿಭಿನ್ನ ಶೈಲಿಯ ರೂಪಕಗಳನ್ನು ಕಳುಹಿಸುವಂತೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಪ್ರವಾಹದ ಸ್ಥಿತಿಗತಿ ಹಾಗೂ ಅದರಿಂದ ನಲುಗಿದ ಜನರ ಅಳಲು ಬಿಂಬಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಗಡಿ ಜಿಲ್ಲೆಯಲ್ಲಿ ಈ ಸಲ ಭಾರೀ ಪ್ರಮಾಣದಲ್ಲಿ ಜಲ ಪ್ರಳಯವಾಗಿದೆ. ಮಹಾರಾಷ್ಟ್ರದಿಂದ ಹರಿದು ಬಂದ ನೀರು ಹಾಗೂ ಜಿಲ್ಲೆಯ ಬಹುತೇಕ ಎಲ್ಲ ತಾಲೂಕಿನಲ್ಲಿ ಸುರಿದ ಮಳೆಯಿಂದ ಎಲ್ಲ ನದಿಗಳು ತುಂಬಿ ಹರಿದಿವೆ. ಜಲಾಶಯಗಳು ತುಂಬಿ ಅಲ್ಲೋಲ ಕಲ್ಲೋಲ ಸೃಷ್ಟಿಸಿವೆ. ಸೇತುವೆಗಳು, ನೂರಾರು ಗ್ರಾಮಗಳು, ರಸ್ತೆ, ಮಾರ್ಗಗಳು ಮುಳುಗಡೆಯಾಗಿವೆ. ಜನ ಸಂಪರ್ಕದ ಜತೆಗೆ ಜನ ಸಂಬಂಧವನ್ನೇ ಮುಳುಗಡೆ ಮಾಡಿದ ಈ ಪ್ರವಾಹ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ. ಇದೇ ಪ್ರಮುಖ ವಿಷಯವನ್ನಾಗಿ ಇಟ್ಟುಕೊಂಡು ಜಿಲ್ಲಾಡಳಿತ ದಸರಾ ಉತ್ಸವದಲ್ಲಿ ಬಿಂಬಿಸಲು ತಯಾರಿ ನಡೆಸಿದೆ.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್‌. ರಾಜೇಂದ್ರ ಅವರು ವಿಶೇಷ ಕಾಳಜಿ ವಹಿಸಿ ಪ್ರವಾಹದ ಬಗೆಗೆ ಟ್ಯಾಬ್ಲೋ ತಯಾರಿಸುವ ಬಗ್ಗೆ ಯೋಚನೆ ಮಾಡಿದ್ದಾರೆ. ಈ ಬಗ್ಗೆ ಮೈಸೂರು ದಸರಾ ಸ್ತಬ್ಧ ಚಿತ್ರಗಳ ನೋಡಲ್ ಅಧಿಕಾರಿ ಕೀರ್ತಪ್ಪ ಗೋಟೂರ ಅವರೊಂದಿಗೆ ಚರ್ಚಿಸಿ ಪ್ರವಾಹದ ಪರಿಕಲ್ಪನೆಯನ್ನೇ ಅಂತಿಮಗೊಳಿಸಿದ್ದಾರೆ. ಆಯಾ ಜಿಲ್ಲೆಗಳಿಗೆ ನೀಡುವ ವಿಷಯ ಕುರಿತು ಮೈಸೂರಿನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪ್ರಸ್ತಾವ ಇಡಲಾಗಿದೆ. ಇದಕ್ಕೆ ಬಹುತೇಕ ಹಸಿರು ನಿಶಾನೆ ನೀಡಿ ಕೆಲವು ಬದಲಾವಣೆ ಮಾಡುವಂತೆ ಸೂಚಿಸಿದೆ.

ಪ್ರವಾಹದ ಚಿತ್ರಣ ಒಂದೆಡೆಯಾದರೆ ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಕ್ಕ ಸ್ಪಂದನೆ ಕುರಿತೂ ಬಿಂಬಿಸಬೇಕು. ಮನೆ ಕಳೆದುಕೊಂಡು ಬೀದಿಗೆ ಬಿದ್ದ ಜನರಿಗೆ ಪರಿಹಾರ ಕೇಂದ್ರಗಳ ಸಹಾಯ, ಸಂತ್ರಸ್ತರಿಗೆ ಸರ್ಕಾರ ಯಾವ ರೀತಿಯಾಗಿ ನೆರವಾಗಿದೆ ಎಂಬುದನ್ನು ಟ್ಯಾಬ್ಲೋದಲ್ಲಿ ತೋರಿಸಬೇಕು. ಜನರ ನೋವಿಗೆ ಸರ್ಕಾರಗಳು ಧ್ವನಿಯಾಗಿದ್ದು, ಹಾಗೂ ನೆರೆ ಪೀಡಿತರ ರಕ್ಷಣೆಗೆ ನಿಂತ ರಕ್ಷಣಾ ಕಾರ್ಯಾಚರಣೆಯೂ ಇದರಲ್ಲಿ ಅಡಕ ಮಾಡುವಂತೆ ತಿಳಿಸಲಾಗಿದೆ.

ಪ್ರತಿ ವರ್ಷ ಖಾನಾಪುರದ ಕಲಾವಿದ ವಿನೋದ ಗಸ್ತಿ ಅವರೇ ಸ್ತಬ್ಧ ಚಿತ್ರಗಳನ್ನು ತಯಾರಿಸುತ್ತಾರೆ. ಈ ಸಲವೂ ಮೈಸೂರು ದಸರಾ ಉತ್ಸವದ ಸ್ತಬ್ಧ ಚಿತ್ರ ಇವರ ಕೈಚಳಕದಲ್ಲಿಯೇ ಮೂಡಿ ಬರಲಿದೆ. ಇದರ ಸಂಪೂರ್ಣ ಮೇಲ್ವಿಚಾರಣೆ ನೋಡಲ್ ಅಧಿಕಾರಿ ಗೋಟೂರ ಅವರೇ ನಿರ್ವಹಿಸಲಿದ್ದಾರೆ.

ಮೈಸೂರು ದಸರಾ ಉತ್ಸವದ ಸ್ತಬ್ಧ ಚಿತ್ರಗಳ ಆಯ್ಕೆ ಸಮಿತಿ ನೀಡಿದ ಬದಲಾವಣೆ ಮಾಡಿಕೊಂಡು ಪ್ರಸ್ತಾವ ಕಳುಹಿಸಲು ಜಿಲ್ಲಾಡಳಿತ ಒಂದು ದಿನ ಕಾಲಾವಕಾಶ ಕೇಳಿದೆ. ಅದಕ್ಕೆ ಸಂಬಂಧಿಸಿದಂತೆ ನೀಲನಕ್ಷೆ ಪೂರ್ತಿಗೊಳಿಸಿ ಆಯ್ಕೆ ಸಮಿತಿಗೆ ನೀಡಲಿದೆ. ಅದನ್ನು ಮೈಸೂರು ಜಿಲ್ಲೆಯ ಸಚಿವರ ಗಮನಕ್ಕೆ ತಂದು ಅಂತಿಮಗೊಳಿಸುವ ಸಾಧ್ಯತೆ ಇದೆ. ಬಹುತೇಕ ಇದೇ ಟ್ಯಾಬ್ಲೋ ಅಂತಿಮಗೊಳಿಸಲು ಜಿಪಂ ಸಿಇಒ ಹಾಗೂ ನೋಡಲ್ ಅಧಿಕಾರಿ ಪ್ರಯತ್ನಿಸುತ್ತಿದ್ದಾರೆ.

ಜಿಲ್ಲಾ ಪಂಚಾಯತ್‌ದಿಂದ ಒಟ್ಟು ಮೂರು ವಿಷಯಗಳನ್ನು ಆಯ್ಕೆ ಸಮಿತಿಗೆ ನೀಡಲಾಗಿತ್ತು. ಪ್ರವಾಹದ ಸ್ಥಿತಿಗತಿ-ಸಂತ್ರಸ್ತರ ಅಳಲು, ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಹಿತಿ ಹಾಗೂ ಶ್ರೀ ಸವದತ್ತಿ ಯಲ್ಲಮ್ಮ, ಶ್ರೀ ಸೊಗಲ ಸೋಮೇಶ್ವರ ದೇವಸ್ಥಾನಗಳ ಚಿತ್ರಣ ಕುರಿತು ವಿಷಯ ಮಂಡಿಸಲಾಗಿತ್ತು. ಇದರಲ್ಲಿ ಪ್ರವಾಹ ವಿಷಯಕ್ಕೆ ಆದ್ಯತೆ ನೀಡಲಾಗಿತ್ತು. ಅದರಂತೆ ಪ್ರವಾಹದ ಸ್ತಬ್ಧ ಚಿತ್ರವೇ ಈ ಬಾರಿ ಮೈಸೂರು ದಸರಾ ಉತ್ಸವದಲ್ಲಿ ಕಂಗೊಳಿಸಲಿದೆ ಎನ್ನುತ್ತಿವೆ ಮೂಲಗಳು.

 

•ಭೈರೋಬಾ ಕಾಂಬಳೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ