ಎಲ್ಲ ಬೀದಿ ವ್ಯಾಪಾರಿಗಳಿಗಿಲ್ಲ ಬಡವರ ಬಂಧು ಲಾಭ!

ಮರುಪಾವತಿಯಾಗದ ಸಾಲ •ಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಷ್ಟೇ ಸಾಲ ವಿತರಣೆ

Team Udayavani, Jul 24, 2019, 10:23 AM IST

ರಾಜ್ಯ ಸರ್ಕಾರದ ಆದೇಶ ಪ್ರತಿ.

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
‘ಬಡವರ ಬಂಧು’ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗಿದ್ದ ಸಾಲ ಸಮರ್ಪಕವಾಗಿ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಯೋಜನೆಯನ್ನೇ ಮರು ಪರಿಷ್ಕರಿಸಲಾಗಿದ್ದು, ಎರಡನೇ ಹಂತದಲ್ಲಿ ಕೇವಲ ನಗರಸಭೆ, ಮಹಾನಗರ ಪಾಲಿಕೆ, ಬೃಹತ್‌ ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗಷ್ಟೇ ಯೋಜನೆಯ ಲಾಭ ಸಿಗಲಿದೆ.

ಬೀದಿ ಬದಿಯಲ್ಲಿ ಹೂವು, ಹಣ್ಣು ಸೇರಿ ಇನ್ನಿತರೆ ವಸ್ತು ಮಾರಾಟ ಮಾಡಿ ಜೀವನ ಸಾಗಿಸುವ ವ್ಯಾಪಾರಿಗಳ ಆರ್ಥಿಕಾಭಿವೃದ್ಧಿಗಾಗಿ ಜಾರಿಗೆ ಬಂದಿದ್ದ ‘ಬಡವರ ಬಂಧು’ ಯೋಜನೆಯನ್ನು ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳಿಗೂ ವಿಸ್ತರಿಸಲಾಗಿತ್ತು. ಈ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ಲಭಿಸುತ್ತಿತ್ತು. ಇದರಿಂದ ಖಾಸಗಿ ಲೇವಾದೇವಿಗಾರರ ಬಡ್ಡಿ, ಚಕ್ರಬಡ್ಡಿ, ಮೀಟರ್‌ ಬಡ್ಡಿಗಳಿಂದ ವ್ಯಾಪಾರಿಗಳು ಮುಕ್ತರಾಗುತ್ತಿದ್ದರು. ಆದರೆ, ಮೊದಲ ಮೂರು ತಿಂಗಳ ಅವಧಿಗೆ ಸ್ಥಳೀಯ ಡಿಸಿಸಿ, ಬಳ್ಳಾರಿ ಅರ್ಬನ್‌ ಕೋ-ಆಪರೇಟಿವ್‌ ಬ್ಯಾಂಕ್‌ನಿಂದ ಕೊಡಿಸಲಾಗಿದ್ದ ಸಾಲದಲ್ಲಿ ಶೇ.60 ರಷ್ಟು ಮರುಪಾವತಿಯಾಗಿಲ್ಲ. ಇದು ಡಿಸಿಸಿ, ಅರ್ಬನ್‌ ಬ್ಯಾಂಕ್‌ಗಳ ನಿರ್ದೇಶಕರನ್ನು ಚಿಂತೆಗೀಡು ಮಾಡಿತ್ತು. ಈ ಹಿನ್ನೆಲೆಯಲ್ಲಿ ಯೋಜನೆಯನ್ನೇ ಮರುಪರಿಷ್ಕರಿಸಲಾಗಿದ್ದು, ಕೇವಲ ಪಾಲಿಕೆ, ಬೃಹತ್‌ ಮಹಾನಗರ ಪಾಲಿಕೆ, ನಗರಸಭೆಗಳಿಗಷ್ಟೇ ಸೀಮಿತಗೊಳಿಸಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಬಡವರ ಬಂಧು ಯೋಜನೆಯಡಿ ಮೊದಲನೇ ಹಂತದ ಸಾಲವನ್ನು ಜಿಲ್ಲೆಯ ಬಳ್ಳಾರಿ ಮಹಾನಗರದಲ್ಲಿ 948, ಹೊಸಪೇಟೆ ನಗರಸಭೆಯಲ್ಲಿ 636, ಸಂಡೂರು ಪುರಸಭೆ 103, ಸಿರುಗುಪ್ಪ ನಗರಸಭೆ 171, ಕೊಟ್ಟೂರು ಪಪಂ 154, ಹಡಗಲಿ ಪುರಸಭೆ 167, ಹ.ಬೊ.ಹಳ್ಳಿ ಪಪಂ 241, ಕಂಪ್ಲಿ ಪುರಸಭೆ 210, ಕೂಡ್ಲಿಗಿ ಪುರಸಭೆ 148, ಕುರುಗೋಡು ಪಪಂ 90 ಸೇರಿ ಜಿಲ್ಲೆಯಲ್ಲಿ ಒಟ್ಟು 2868 ಬೀದಿ ಬದಿ ವ್ಯಾಪಾರಿಗಳಿಗೆ ಸಹಕಾರಿ ಇಲಾಖೆ ನೇತೃತ್ವದಲ್ಲಿ ಬಿಡಿಸಿ, ಬಳ್ಳಾರಿ ಅರ್ಬನ್‌ ಕೋ-ಆಪರೇಟಿವ್‌ ಬ್ಯಾಂಕ್‌ ವತಿಯಿಂದ ಒಟ್ಟೂ 82,96,500 ರೂ.ಗಳ ಸಾಲ ವಿತರಿಸಲಾಗಿತ್ತು. ಆದರೆ, ಇದರಲ್ಲಿ ಕೇವಲ ಶೇ. 40 ರಷ್ಟು ಮಾತ್ರ ವಸೂಲಿಯಾಗಿದ್ದು, ಶೇ. 60ರಷ್ಟು ಮರುಪಾವತಿಯಾಗಿಲ್ಲ. ಹೀಗಾಗಿ ಸಹಕಾರ ಇಲಾಖೆ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಿದೆ.

ಈಗಾಗಲೇ ಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ ಸಾಲ ಪಡೆದ ವ್ಯಾಪಾರಿಗಳಲ್ಲಿ ಸಮರ್ಪಕವಾಗಿ ಮರುಪಾವತಿ ಮಾಡಿದವರನ್ನಷ್ಟೇ ಎರಡನೇ ಹಂತದಲ್ಲೂ ಪರಿಗಣಿಸಲಾಗುವುದು. ಅಲ್ಲದೆ ಸಾಲದ ಮೊತ್ತವನ್ನೂ ಹೆಚ್ಚಿಸಲಾಗುತ್ತದೆ ಎಂದು ಸಹಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾಲ ನೀಡಬೇಕಾದ ಗುರಿ: ಬಡವರ ಬಂಧು ಯೋಜನೆಯನ್ನು ಪರಿಷ್ಕರಿಸಲಾಗಿದ್ದು, ನಿರ್ದಿಷ್ಟ ಪ್ರದೇಶಗಳಿಗೆ ಗುರಿ ನಿಗದಿಪಡಿಸಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ಸಾವಿರ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಸಾವಿರ, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ 1 ಸಾವಿರ ವ್ಯಾಪಾರಿಗಳಿಗೆ ಸಾಲ ನೀಡಲು ಸೂಚಿಸಲಾಗಿದೆ.

ವ್ಯಾಪಾರಿಗಳಿಗಿಲ್ಲ ಪರವಾನಗಿ: ಬಹುತೇಕ ಬೀದಿಬದಿ ವ್ಯಾಪಾರಿಗಳ ಬಳಿ ಸ್ಥಳೀಯ ಸಂಸ್ಥೆಯ ಪರವಾನಗಿಯೇ ಇಲ್ಲ. ಇದು ‘ಬಡವರ ಬಂಧು’ ಯೋಜನೆಯಡಿ ಸಾಲ ಪಡೆಯಲು ತೊಡಕಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿನ ಪಾದಚಾರಿ ರಸ್ತೆಯನ್ನೇ ಆವರಿಸಿಕೊಂಡು ಹೂವು, ಹಣ್ಣು, ತಳ್ಳುಬಂಡಿಗಳನ್ನಿಟ್ಟು ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳು ಸಾವಿರಾರು ಸಂಖ್ಯೆಯಲ್ಲಿ ಕಂಡುಬಂದರೂ, ಪಾಲಿಕೆ, ನಗರಸಭೆಯಲ್ಲಿ ಪರವಾನಗಿ ಪಡೆದಿರುವವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಇವರಿಗೆ ಪರವಾನಗಿ ನೀಡಲು ಸ್ಥಳೀಯ ಸಂಸ್ಥೆಯಲ್ಲಿ ತಾಂತ್ರಿಕ ಸಮಸ್ಯೆಯೂ ಇದೆ. ಇವರಿಗೆ ಪರವಾನಗಿ ನೀಡಿದರೆ, ಅವರು ವ್ಯಾಪಾರ ಮಾಡಲು ಸ್ಥಳಾವಕಾಶ ಕಲ್ಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ಈ ಸ್ಥಳಾವಕಾಶದ ಸಮಸ್ಯೆಯಿಂದಾಗಿ ಸ್ಥಳೀಯ ಸಂಸ್ಥೆಗಳು ಸಹ ಬೀದಿಬದಿ ವ್ಯಾಪಾರಿಗಳಿಗೆ ಪರವಾನಗಿ ನೀಡುವಲ್ಲಿ ಮುಂದೆ ಬರುತ್ತಿಲ್ಲ. ಹೀಗಾಗಿ ಬೀದಿಬದಿ ವ್ಯಾಪಾರ ಮಾಡುವವರು ಸಾವಿರಾರು ಸಂಖ್ಯೆಯಲ್ಲಿದ್ದರೂ, ಯೋಜನೆಯಡಿ ಸಾಲ ಪಡೆಯಲು ಅರ್ಹತೆಯಿರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ