ಶಕ್ತಿ ದೇವತೆಗೆ ವಿಶೇಷ ಆರಾಧನೆ

ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಪಲ್ಲಕ್ಕಿ ಉತ್ಸವ-ಬನ್ನಿ ವಿನಿಮಯ

Team Udayavani, Oct 9, 2019, 5:43 PM IST

ಬಳ್ಳಾರಿ: ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬವನ್ನು ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಸಡಗರ, ಸಂಭ್ರಮಗಳಿಂದ ಮಂಗಳವಾರ ಆಚರಿಸಲಾಯಿತು.

ದಸರಾ ಎಂದಾಕ್ಷಣ ಮಹಾರಾಜರ ಅರಮನೆ, ವೈಭವದಿಂದ ಝಗಮಗಿಸುವ ದೀಪಾಲಂಕಾರ, ಜಗದ್ವಿಖ್ಯಾತ ಜಂಬೂಸವಾರಿ ಮೆರವಣಿಗೆ ಹೀಗೆ ಮೈಸೂರಿನ ದಸರಾ ಹಬ್ಬದ ಆಚರಣೆ ಕಣ್ಮುಂದೆ ಬರುತ್ತದೆ. ಇತ್ತ ಗಣಿನಾಡು ಬಳ್ಳಾರಿಯಲ್ಲೂ ಮಂಗಳವಾರ ಸಡಗರ ಸಂಭ್ರಮದಿಂದ ವಿಜಯದಶಮಿಯನ್ನು ಬರಮಾಡಿಕೊಂಡ ಜನತೆ, ತಮ್ಮ ಕುಟುಂಬ ಪರಿವಾರದೊಂದಿಗೆ ದೇಗುಲಗಳಿಗೆ ತೆರಳಿ ದುರ್ಗಾಮಾತೆ ದರ್ಶನ ಪಡೆದು ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಸಂತಸದಿಂದ ಆಚರಿಸಿದರು.

ದುಃಖ ದಾರಿದ್ರ್ಯಗಳ ನಿವಾರಣೆ, ಸಿರಿ ಸಂಪತ್ತುಗಳ ಸಮೃದ್ಧಿಗಾಗಿ, ಬುದ್ಧಿ ವಿವೇಕಗಳ ವರ್ಧನೆಗಾಗಿ ಸತತ ಹತ್ತು ದಿನಗಳ ಕಾಲ ನಡೆಯುವ ಹಬ್ಬದ ಸರಣಿಯೇ ದಸರಾ ಹಬ್ಬವಾಗಿದ್ದು, ಶರನ್ನವರಾತ್ರಿಯ ನಿಮಿತ್ತ ಬನ್ನಿ ಮಹಾಂಕಾಳಿ ದೇವಿಗೆ ದಿನ ನಿತ್ಯ ವಿಶೇಷ ಪೂಜೆ, ಪುನಸ್ಕಾರದಲ್ಲೇ ನಿರತರಾದ ಮಹಿಳೆಯರು ವಿಜಯದಶಮಿಯ ದಿನವಾದ ಮಂಗಳವಾರ ದೇವಿಗೆ ಸೀರೆ, ಬಳೆ, ಉಡಿಗೆ ಅಕ್ಕಿ, ನೈವೇದ್ಯದೊಂದಿಗೆ ತೆರಳಿ ಬಗೆಬಗೆಯ ಪುಷ್ಪಗಳಿಂದ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ದಸರಾ ಹಬ್ಬವನ್ನು ದೇಶದ ನಾನಾ ಭಾಗಗಳಲ್ಲಿ ನಾನಾ ಪ್ರಕಾರವಾಗಿ ಆಚರಿಸಲಾಗುತ್ತದೆ. ಹಾಗೆ ದಸರಾ ಹಬ್ಬದ ಅಂಗವಾಗಿ ನಗರದ ಶಕ್ತಿದೇವಿಯ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಗಳ ಮೂಲಕ ಅಲಂಕೃತಗೊಳಿಸಲಾಗಿದ್ದ ದೇವಿಯ ದರ್ಶನ ಪಡೆಯಲು ಭಕ್ತಾ ದಿಗಳು ಹೊಸ ಬಟ್ಟೆಗಳನ್ನು ಧರಿಸಿ, ಉತ್ಸಾಹ ಹಾಗೂ ಲವಲವಿಕೆಯಿಂದ ಮಕ್ಕಳು ಹಾಗೂ ಸಕಲ ಕುಟುಂಬದೊಂದಿಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಅದರಲ್ಲೂ ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಜಯದಶಮಿಯ ಅಂಗವಾಗಿ ದೇವಿಗೆ ವಿಶೇಷವಾಗಿ ಬಂಗಾರದ ಆಭರಣಗಳಿಂದ ಅಲಂಕರಿಸಲಾಗಿತ್ತು. ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ದೇವಸ್ಥಾನವು ಅಪಾರ ಭಕ್ತ ಸಮೂಹದಿಂದ ತುಂಬಿ ತುಳುಕುತ್ತಿತ್ತು.

ಹಬ್ಬದ ಮೆರುಗು ಹೆಚ್ಚಿಸಿದ ಆಯುಧ ಪೂಜೆ: ದಸರಾ ಹಬ್ಬಕ್ಕೂ ಮುನ್ನಾದಿನ ಆಚರಣೆಯಾದ ಆಯುಧ ಪೂಜೆ ಹಬ್ಬದ ಮೆರುಗು ಹೆಚ್ಚಿಸಿತು. ಸಾರ್ವಜನಿಕರು ತಮ್ಮ ಮನೆಗಳಲ್ಲಿ ವೃತ್ತಿಗೆ ಸಂಬಂಧಿಸಿದ್ದ ವಸ್ತುಗಳನ್ನಿಟ್ಟು ಪೂಜೆ ಮಾಡಿದರೆ, ಕೆಲವರು ಪ್ರತಿನಿತ್ಯ ಚಲಾಯಿಸುವ ದ್ವಿಚಕ್ರ ವಾಹನ, ಕಾರು ಇನ್ನಿತರೆ ವಾಹನಗಳನ್ನು ಶುಭ್ರಗೊಳಿಸಿ ಹೂವು, ಬಾಳೆಗಂಬದಿಂದ ಸಿಂಗಾರಗೊಳಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರು.

ಅಲ್ಲದೇ, ಪೂಜೆಗೆ ಅಗತ್ಯವಾದ ಮಾವಿನ ಎಲೆ, ಬಾಳೆಗಂಬ, ಹೂವು, ಚೆಂಡು ಹೂಗಳಿಗೆ ಎಲ್ಲಿಲ್ಲದ ಬೇಡಿಕೆಬಂದಿದ್ದು, ಹಬ್ಬದ ನಿಮಿತ್ತ ಆಯುಧ ‌ಪೂಜೆಯಂದು ಇವುಗಳ ಖರೀದಿ ಜೋರು ಪಡೆದಿತ್ತು. ನಗರದ ಬೆಂಗಳೂರು ರಸ್ತೆಯಲ್ಲಿ ಮಾವಿನ ಎಲೆ, ಬಾಳೆದಿಂಡು ಖರೀದಿಸಲು ಸೋಮವಾರ ಇಡೀ ದಿನ ಜನರು ಕಿಕ್ಕರಿದು ನೆರೆದಿದ್ದರು.

ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ: ದಸರಾ ಹಬ್ಬದ ನಿಮಿತ್ತ ನಗರದ ವಿವಿಧ ಕನಕದುರ್ಗಮ್ಮ ದೇವಸ್ಥಾನ, ಪಟೇಲ್‌ನಗರದ ಸಣ್ಣ ದುರ್ಗಮ್ಮ ದೇವಸ್ಥಾನ, ಮೋತಿ ವೃತ್ತದ ಬಳಿಯ ಏಳುಮಕ್ಕಳ ತಾಯಮ್ಮ ದೇವಿ, ಹವಂಬಾವಿ ಪ್ರದೇಶದಲ್ಲನ ಸೀತಾರಾಮ ಆಶ್ರಮ ಸೇರಿದಂತೆ ವಿವಿಧ ದೇವಿಯರ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಹೋಮ, ಪೂಜಾ ಕಾರ್ಯಕ್ರಮಗಳು ಜರುಗಿದವು.

ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ನವರಾತ್ರಿ ದಿನಗಳಲ್ಲಿ ಸೆ. 29ರಿಂದ ಅ. 5ರವರೆಗೆ ಮೂಲ ವಿಗ್ರಹಕ್ಕೆ ಬೆಳ್ಳಿ ಆಭರಣಗಳಿಂದ
ಅಲಂಕರಿಸಲಾಗಿದ್ದು, ಅ. 6ರಿಂದ ಚಿನ್ನದ ಆಭರಣಗಳಿಂದ ಅಲಂಕರಿಸಲಾಗಿತ್ತು. ಅಲ್ಲದೇ, ಹಬ್ಬದ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಿಯ ಉತ್ಸವ ಮೂರ್ತಿಗೆ ಪ್ರತಿದಿನ ಒಂದೊಂದು ಅಲಂಕಾರ ಮಾಡಲಾಗಿದ್ದು, ಭಕ್ತರ ವಿಶೇಷ ಆಕರ್ಷಣೆಯಾಗಿತ್ತು. ಅದೇ ರೀತಿ ಇಲ್ಲಿನ ಪಟೇಲ್‌ ನಗರದಲ್ಲಿನ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲೂ ಒಂಭತ್ತು ದಿನಗಳ ಕಾಲ ವಿಶೇಷ ಅಲಂಕಾರ ಹೋಮ ಕಾರ್ಯಕ್ರಮ ಮಾಡಲಾಯಿತು. ಇನ್ನು ಏಳು ಮಕ್ಕಳ ತಾಯಮ್ಮ ದೇವಸ್ಥಾನದಲ್ಲಿ ಹಬ್ಬದ ನಿಮಿತ್ತ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಪ್ರತಿದಿನ ಒಂದೊಂದು ವಿಧದಲ್ಲಿ ಅಲಂಕರಿಸಿ ಭಕ್ತರ ಗಮನ ಸೆಳೆಯಿತು.

ಪಲ್ಲಕ್ಕಿ ಉತ್ಸವ: ದಸರಾ ಹಬ್ಬದ ನಿಮಿತ್ತ ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಗರದ ಕೌಲ್‌ಬಜಾರ್‌, ಹಣ್ಣಿನ ಮಾರುಕಟ್ಟೆ ಬಳಿಯ ಸಣ್ಣ ದುರ್ಗಮ್ಮ ದೇವಸ್ಥಾನಗಳಿಗೆ ತೆರಳಿ ಬನ್ನಿ ಮುಡಿಯಲಾಯಿತು. ಅದೇ ರೀತಿ ಇಲ್ಲಿನ ಚಲುವಾದಿ ಬೀದಿ, ಬಾಪೂಜಿನಗರ, ಮರಿಸ್ವಾಮಿ ಮಠ ಸೇರಿದಂತೆ ಬಹುತೇಕ ಏರಿಯಾ, ಬಡಾವಣೆಗಳಲ್ಲಿನ ದೇವಸ್ಥಾನದಲ್ಲಿ ಆಯುಧ ಪೂಜೆಯಂದು ಇಡೀ ರಾತ್ರಿ ಭಜನೆ ಮಾಡಿದ ಭಕ್ತರು, ಹಬ್ಬದಂದು ದೇವರ ಫೋಟೋ, ಮೂರ್ತಿಗಳನ್ನು ಮೆರವಣಿಗೆ ಮೂಲಕ ತೆರಳಿದ ಭಕ್ತರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ, ಬನ್ನಿ ಮುಡಿದು ಪುನಃ ದೇವಸ್ಥಾನಗಳಿಗೆ
ಮರಳುವ ಮೂಲಕ ದಸರಾ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.

ಸಂಜೆ ಹೊಸ ಬಟ್ಟೆಗಳನ್ನು ಧರಿಸಿ ಹಿರಿಯರಿಗೆ ಕಿರಿಯರು, ಮಹಿಳೆಯರು, ಸಮಾನ ಮನಸ್ಕರರು ಬನ್ನಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...