ಅಭ್ಯರ್ಥಿಗಳ ರಣೋತ್ಸಾಹ-ಮತದಾರರ ನಿರುತ್ಸಾಹ

ಮತ್ತೆ ಚುನಾವಣೇನಾ ಎನ್ನುತ್ತಿರುವ ಮತದಾರ ಕೃಷಿ, ಕುಡಿಯುವ ನೀರಿನ ಸಮಸ್ಯೆಗಿಲ್ಲ ಪರಿಹಾರ

Team Udayavani, Apr 15, 2019, 3:42 PM IST

ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಮತ್ತೂಂದು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವೆಂದರೆ ಬಳ್ಳಾರಿ
ಗ್ರಾಮೀಣ ಕ್ಷೇತ್ರ. ಶಾಸಕ ಬಿ.ಶ್ರೀರಾಮುಲು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರ ಆರಂಭದಿಂದಲೂ ಬಿಜೆಪಿ ಭದ್ರಕೋಟೆಯಾಗಿದ್ದು, ಅವರ ರಾಜೀನಾಮೆಯಿಂದಾಗಿ ಇದೀಗ ಕಾಂಗ್ರೆಸ್‌ ಕೋಟೆ ನಿರ್ಮಿಸಿಕೊಂಡಿದೆ.

2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಹೊಸದಾಗಿ ರಚಿಸಲಾಯಿತು. ಆರಂಭದಿಂದಲೂ ಶಾಸಕ ಬಿ.ಶ್ರೀರಾಮುಲು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಒಮ್ಮೆ ಬಿಜೆಪಿ, ಎರಡು ಬಾರಿ ಬಿಎಸ್‌ ಆರ್‌ ಪಕ್ಷದಿಂದ ಜಯಗಳಿಸಿದ್ದಾರೆ. ಶ್ರೀರಾಮುಲು ರಾಜೀನಾಮೆಯಿಂದ ನಡೆದ ಉಪಚುನಾವಣೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸಿದ್ದು, ಇದೀಗ ಕಾಂಗ್ರೆಸ್‌ ಕೋಟೆ ನಿರ್ಮಿಸಿಕೊಂಡಿದೆ. ಬಳ್ಳಾರಿ ತಾಲೂಕಿನ
ಆಂಧ್ರದ ಗಡಿಭಾಗದ ಗ್ರಾಮಗಳು ಮತ್ತು ಪಾಲಿಕೆಯ 9 ವಾರ್ಡ್‌ಗಳನ್ನು ಒಳಗೊಂಡಿರುವ ಗ್ರಾಮೀಣ ಕ್ಷೇತ್ರದಲ್ಲಿ
ಕೃಷಿಯೇ ಪ್ರಮುಖ ಕಸುಬಾಗಿದ್ದು, ಎರಡನೇ ಬೆಳೆಗೆ ನೀರು ದೊರೆಯದಿರುವುದು ಪ್ರಮುಖ ವಿಷಯವಾಗಿದೆ.

ನೀರಿನದ್ದೇ ದೊಡ್ಡ ಸಮಸ್ಯೆ: ಕ್ಷೇತ್ರದಲ್ಲಿ ಪ್ರಮುಖವಾಗಿ ಕೃಷಿ ಚಟುವಟಿಕೆಗೆ ಮತ್ತು ಕುಡಿಯಲು ನೀರಿನ ಸಮಸ್ಯೆ ಕಾಡುತ್ತಿದೆ.
ಕೆಲ ರೈತ ಮುಖಂಡರು ಸಹ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತುಂಗಭದ್ರಾ ಹೂಳಿನ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಬೇಕು. ಪರ್ಯಾಯ ವ್ಯವಸ್ಥೆ, ರೈತರಿಗೆ ದೀರ್ಘಾವಧಿ ಯೋಜನೆಗಳನ್ನು ಜಾರಿಗೆ ತರುವಂತಹವರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಅಲ್ಲದೆ, ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲೂ ಸಹ ಕುಡಿಯುವ ನೀರಿನ ಸಮಸ್ಯೆಯಿದೆ. ಕ್ಷೇತ್ರದಲ್ಲಿ ಹರಿಯುವ ಹಗರಿ
(ವೇದಾವತಿ) ನದಿಯ ಅಂತರ್ಜಲವೇ ಈ ಭಾಗದ ಜನರ ದಾಹ ತಣಿಸುತ್ತಿದೆ. ಕುಡಿಯುವ ನೀರಿನ ಸಲುವಾಗಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ
ನಿರ್ಮಿಸಲಾಗಿರುವ ಕರೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ನೀರು ನಿಲ್ಲದಂತಾಗಿದೆ. ಪರಿಣಾಮ
ಈ ಭಾಗದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ
ಮುಕ್ತವಾಗದಂತಾಗಿದ್ದಾರೆ.

ಮತ್ತೆ ಚುನಾವಣೆನಾ?: ಕಳೆದ ಐದು ತಿಂಗಳ ಹಿಂದಷ್ಟೇ
ಉಪಚುನಾವಣೆಯನ್ನು ಎದುರಿಸಿರುವ ಕ್ಷೇತ್ರದ ಜನರಿಗೆ ಆಗಲೇ ಸಾರ್ವತ್ರಿಕ ಚುನಾವಣೆ ಆಗಮಿಸಿದೆ ಎಂಬ ಅರಿವು ಬಹುತೇಕರಿಗೆ
ಇಲ್ಲವಾಗಿದೆ. ವಿದ್ಯಾವಂತರು, ಯುವಕರಿಗೆ ಚುನಾವಣೆ ಬಗ್ಗೆ ಮಾಹಿತಿ ಇದ್ದರೂ, ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕುರಿತು ಕೇಳಿದರೆ ‘ಏನ್‌ ಸರ್‌, ಉಪಚುನಾವಣೆ ನಡೆದು ಆರು ತಿಂಗಳಾಗಿಲ್ಲ. ಆಗಲೇ ಸಾರ್ವತ್ರಿಕ ಚುನಾವಣೆ ಬಂದರೆ ಹೇಗೆ? ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಉಪಚುನಾವಣೆಯಿಂದ ಇಲ್ಲಿಯವರೆಗೆ ಸೂಕ್ಷ್ಮವಾಗಿ ಗಮನಿಸಿದರೆ, ಹೆಚ್ಚು ದಿನಗಳು ನೀತಿ ಸಂಹಿತೆ ಜಾರಿಯಲ್ಲಿದೆ. ಕ್ಷೇತ್ರದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಆಗಿರುವ ಅಭಿವೃದ್ಧಿ ಬಗ್ಗೆ ತೃಪ್ತಿಯೂ
ಇಲ್ಲ ಎಂಬುದು ಕ್ಷೇತ್ರದ ಜನರ ಬೇಸರದ ಮಾತುಗಳಿವು.

ರಾಜ್ಯ, ರಾಷ್ಟ್ರ ನಾಯಕರ ಆಗಮನ: ಗ್ರಾಮೀಣ ಕ್ಷೇತ್ರದಲ್ಲೂ ಶಾಸಕ ಬಿ.ನಾಗೇಂದ್ರ, ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. ಈ ಕ್ಷೇತ್ರಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಎರಡು ಬಾರಿ ಭೇಟಿ ನೀಡಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಹೊರತುಪಡಿಸಿ, ಯಾವುದೇ ರಾಜ್ಯ, ರಾಷ್ಟ್ರ ನಾಯಕರು ಪ್ರಚಾರಕ್ಕೆ ಆಗಮಿಸಿಲ್ಲ. ಏ.19ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಏ.21ಕ್ಕೆ ಬಿಜೆಪಿ ರಾಜ್ಯಸಭೆ ಸದಸ್ಯೆ ಸ್ಮೃತಿ ಇರಾನಿ ಆಗಮಿಸಿ
ಪ್ರಚಾರ ನಡೆಸಲಿದ್ದಾರೆ. ಇವರೊಂದಿಗೆ ಇತರೆ ರಾಜ್ಯ, ರಾಷ್ಟ್ರ ನಾಯಕರು ಆಗಮಿಸುವ ಸಾಧ್ಯತೆಯಿದೆ.

ಸರ್ಜಿಕಲ್‌ ಸ್ಟ್ರೈಕ್‌, ಬಾಲಾಕೋಟ್‌ ದಾಳಿ ಚರ್ಚೆ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿದ್ಯಾವಂತರು, ಯುವಕರಲ್ಲಿ ರಾಷ್ಟ್ರ ಮಟ್ಟಕ್ಕೆ ಸಂಬಂಧಿಸಿದಂತೆ ಸರ್ಜಿಕಲ್‌ ಸ್ಟ್ರೈಕ್‌, ಬಾಲಾಕೋಟ್‌ ಮೇಲಿನ ದಾಳಿಯ ಬಗ್ಗೆ ಚರ್ಚೆಗಳು ನಡೆದರೆ, ಪ್ರಗತಿಪರ ಚಿಂತಕರಲ್ಲಿ ರಫೇಲ್‌ ಡೀಲ್‌ ಹಗರಣದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಇನ್ನು ಗ್ರಾಮೀಣ ಭಾಗದ ಹಳ್ಳಿ ಜನರಲ್ಲಿ ಏ.23 ರಂದು ಹಕ್ಕು ಚಲಾಯಿಸಬೇಕು ಎಂಬುದನ್ನು ಬಿಟ್ಟರೆ, ಈ ವಿಷಯಗಳ ಬಗ್ಗೆ
ಅರಿವೇ ಇಲ್ಲ. ಇತ್ತೀಚೆಗೆ ಉಪಚುನಾವಣೆಯಲ್ಲಿ ಹಕ್ಕು ಚಲಾಯಿಸಿದ ಕೆಲವರಿಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಬಗ್ಗೆಯೇ ಗೊತ್ತಿಲ್ಲ. ಒಟ್ಟಾರೆಯಾಗಿ ಚುನಾವಣೆ ರಂಗು ಬಿರುಸು ಪಡೆದುಕೊಳ್ಳದ ಹಿನ್ನೆಲೆಯಲ್ಲಿ ಜನರಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ