ನೀರು ಶುದ್ಧೀಕರಣ ಘಟಕವೇ ಅಶುದ್ಧ!

ಹೊಸಪೇಟೆ ರಸ್ತೆಯ ಎಚ್ಎಲ್ಸಿ ಕಾಲುವೆ ಬಳಿಯಿರುವ ಘಟಕ•ಕುಸಿದ ನೀರು ಸಂಗ್ರಹಿಸುವ ಟ್ಯಾಂಕ್‌ ಮೇಲ್ಛಾವಣಿ

Team Udayavani, Sep 9, 2019, 1:20 PM IST

ಬಳ್ಳಾರಿ: ಹೊಸಪೇಟೆ ರಸ್ತೆಯ ಎಚ್ಎಲ್ಸಿ ಕಾಲುವೆ ಬಳಿ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧಗೊಂಡ ನೀರು ಸಂಗ್ರಹಿಸುವ ನೆಲಟ್ಯಾಂಕ್‌ ಶಿಥಿಲಾವಸ್ಥೆಗೆ ತಲುಪಿರುವುದು.

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ನಗರದ ಬಹುಪಾಲು ಜನರು ಕುಡಿಯುವ ನೀರನ್ನು ಶುದ್ಧೀಕರಿಸುವ ಘಟಕ ನೋಡಿದ್ರೆ ನೀರೇ ಕುಡಿಯಲ್ಲ!

ಹೌದು….! ಅಚ್ಚರಿ ಎನಿಸಿದರೂ ಇದು ಸತ್ಯ. ನಗರ ಹೊರವಲಯದ ಹೊಸಪೇಟೆ ರಸ್ತೆಯ ಎಚ್ಎಲ್ಸಿ ಕಾಲುವೆ ಬಳಿಯಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಶೇ.70ಕ್ಕೂ ಹೆಚ್ಚು ಭಾಗಕ್ಕೆ ಶುದ್ಧ ಕುಡಿವ ನೀರನ್ನು ಒದಗಿಸುತ್ತದೆ.

ನಗರದ ನಾಗರಿಕರಿಗೆ ದಶಕಗಳಿಂದ ಕುಡಿವ ನೀರು ಪೂರೈಕೆ ಮಾಡುತ್ತಿರುವ ಈ ಘಟಕವನ್ನು ಒಮ್ಮೆ ನೋಡಿದರೆ ವಾಕರಿಕೆ ಬರುತ್ತದೆ. ತುಂಗಭದ್ರಾ ಜಲಾಶಯದಿಂದ ಎಚ್ಎಲ್ಸಿ ಕಾಲುವೆ ಮೂಲಕ ಬರುವ ನೀರನ್ನು ಘಟಕದಿಂದ ಪಡೆದು ಮೊದಲು ಹರಿಸುವ ಎರಡು ಶುದ್ಧೀಕರಣ ಘಟಕಕ್ಕೆ ಆಲಂ, ಬ್ಲೀಚಿಂಗ್‌ ಪೌಡರ್‌ ಪೂರೈಕೆ ಮಾಡುವ ಕೊಠಡಿ ಓಬಿರಾಯನ ಕಾಲದಲ್ಲಿ ಕಟ್ಟಿದ ಗೋದಾಮಿನಂತಿದೆ.

ಬ್ರಿಟಿಷ್‌ ಕಾಲದಲ್ಲಿನ ಮೋಟಾರೊಂದು ಆಲಂ ಮಿಶ್ರಣ ಮಾಡುವ ಕಾರ್ಯಮಾಡುತ್ತದೆ. ಇನ್ನು ಅಲ್ಲಿಂದ ನೀರನ್ನು ನೇರ ಶೇಖರಣಾ ಘಟಕ, ನೆಲ ಟ್ಯಾಂಕ್‌ಗೆ ಬಿಡಲಾಗುತ್ತದೆ. ಈ ಟ್ಯಾಂಕ್‌ಗೆ ಯಾವುದೇ ಮೇಲ್ಛಾವಣಿ ಇಲ್ಲ. ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಿರುವ ಈ ಸಂಪ್‌ ಇಂದು ಪಕ್ಕಾ ಪಳಿಯುಳಿಕೆಯಂತೆ ಕಾಣುತ್ತದೆ. ತುಕ್ಕು ಹಿಡಿದಿರುವ ಇದರ ಮೇಲ್ಛಾವಣಿ ಶೇ. 70ರಷ್ಟು ಕುಸಿದಿದೆ. ಉಳಿದ ಭಾಗ ದಿನೇ ದಿನೇ ಇಂಚಿಂಚು ಉದುರಿ ಶುದ್ಧೀಕರಣಗೊಂಡ ನೀರಿಗೆ ಬೀಳುತ್ತಿದೆ. ಇದೇ ನೀರು ನೇರ ಪೈಪ್‌ಲೈನ್‌ ಮೂಲಕ ನಗರದ ಜನರಿಗೆ ಪೂರೈಕೆಯಾಗುತ್ತಿದೆ. ನಾಯಿ ಸೇರಿದಂತೆ ಸಾಕುಪ್ರಾಣಿ, ಅನ್ಯ ಪ್ರಾಣಿ ಪಕ್ಷಿಗಳ ಮಲ, ಮೂತ್ರ ನೇರ ಈ ನೀರನ್ನು ಸೇರುತ್ತಿದ್ದು ಅಂಥ ನೀರನ್ನು ಮದರ್‌ ಟ್ಯಾಂಕ್‌ ಮೂಲಕ ನಗರದ ನಾಗರಿಕರಿಗೆ ಪೂರೈಕೆ ಮಾಡುತ್ತಿರುವುದು ವಿಷಾದನೀಯ.

ಶುದ್ಧೀಕರಣಗೊಂಡ ನೀರನ್ನು ಸಂಗ್ರಹಿಸುವ ನೆಲ ಟ್ಯಾಂಕ್‌ ಮೇಲ್ಛಾವಣಿ ಸಹ ಸಂಪೂರ್ಣ ಕುಸಿದಿದೆ. ಇಡೀ ಟ್ಯಾಂಕ್‌ ಶಿಥಿಲಾವಸ್ಥೆ ತಲುಪಿದೆ. ಕುಸಿದಿರುವ ಮೇಲ್ಛಾವಣಿ ಕಾಂಕ್ರೀಟ್ ಸ್ಲಾಬ್‌ಗಳು ಅದರೊಳಗಿನ ಕಬ್ಬಿಣದ ಸರಳುಗಳಿಗೆ ಜೋತು ಬಿದ್ದಿವೆ. ಸ್ಲಾಬ್‌ನಲ್ಲಿನ ಕಬ್ಬಿಣದ ಸರಳುಗಳು ಸಹ ತುಕ್ಕು ಹಿಡಿದಿದ್ದು, ಅದರ ಚೂರುಗಳು ಶುದ್ಧಗೊಂಡ ನೀರಲ್ಲಿ ಉದುರುತ್ತಿವೆ.

ಇದೆಂಥ ನೀರನ್ನು ಪೂರೈಕೆ ಮಾಡುತ್ತಿದ್ದೀರಾ ನಗರದ ಜನರಿಗೆ ಎಂದು ಪ್ರಶ್ನಿಸಿದರೆ ಅಧಿಕಾರಿಗಳ ನೇರ ಉತ್ತರ ಜನಪ್ರತಿನಿಧಿಗಳ ಕಡೆ ಮುಖಮಾಡುವಂತೆ ಮಾಡುತ್ತದೆ. ಜನಪ್ರತಿನಿಧಿಗಳು ಹೇಳುವಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ನೂತನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಅಲ್ಲಿಂದಲೇ ನೀರು ಕೊಡಲು ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಅಲ್ಲಿಂದ ನೀರು ಕೊಟ್ಟರೆ ಕೌಲ್ ಬಜಾರ್‌ನ ಎಲ್ಲ ಭಾಗಗಳಿಗೆ ನೀರು ಪೂರೈಕೆ ಆಗುವುದಿಲ್ಲ ಎಂದು ಕಾರಣ ಹೇಳಿ ಅದೇ ಬ್ರಿಟೀಷರ ಕಾಲದ ಸಂಪಿನ ಮೂಲಕವೇ ನೀರು ಪಂಪ್‌ಮಾಡಿ ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಚರಂಡಿ ನೀರು ಸೇರುತ್ತದೆ: ಇನ್ನು ನಗರದಲ್ಲಿ ಕುಡಿಯುವ ನೀರು ಪೂರೈಕೆಮಾಡಲು ಅಳವಡಿಸಿರುವ ಪೈಪ್‌ಲೈನ್‌ ಸಹ ತೀರಾ ಹಳತಾಗಿದೆ. ಇವೇ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಓವರ್‌ಹೆಡ್‌ ಟ್ಯಾಂಕ್‌ಗಳ ಬಳಕೆ ಆಗುತ್ತಲೇ ಇಲ್ಲ. ಈ ಹಳೆ ಪೈಪ್‌ಗ್ಳಲ್ಲಿ ಎಲ್ಲೆಂದರಲ್ಲಿ ತೂತುಗಳಿವೆ. ಪೈಪ್‌ನಲ್ಲಿ ನೀರು ಹರಿಯದೆ ಇದ್ದಾಗ ಚರಂಡಿ ನೀರು ಇವುಗಳಲ್ಲಿ ಸೇರಿಕೊಳ್ಳುತ್ತದೆ. ನೀರು ಹರಿಸಿದಾಗ ಈ ನೀರು ಸಹ ಸೇರಿಕೊಂಡು ಕುಡಿಯುವ ನೀರಾಗಿ ನಳಗಳಲ್ಲಿ ಹರಿಯುತ್ತದೆ. ಹಾಗಾಗಿ ಪಾಲಿಕೆಯಿಂದ ವಾರಕ್ಕೊಮ್ಮೆ ಪೂರೈಕೆಯಾಗುವ ಕುಡಿವ ನೀರು, ಆರಂಭದಲ್ಲಿ ಕಲುಷಿತವಾಗಿದ್ದು, ನಂತರ ಶುದ್ಧವಾದ ನೀರು ಲಭಿಸುತ್ತದೆ ಎಂದು ಘಟಕದ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಶಿಥಿಲಾವಸ್ಥೆಗೆ ನೆಲಟ್ಯಾಂಕ್‌
ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧಗೊಂಡ ನೀರನ್ನು ಸಂಗ್ರಹಿಸುವ ನೆಲಟ್ಯಾಂಕ್‌ ಶಿಥಿಲಾವಸ್ಥೆ ತಲುಪಿದೆ. ಜತೆಗೆ ಪರ್ಯಾಯವಾಗಿ ಶುದ್ಧಗೊಂಡ ನೀರು ಸಂಗ್ರಹಣಾ ಘಟಕ ವ್ಯವಸ್ಥೆ ಮಾಡಲಾಗಿದೆ. ಹೊಸದನ್ನು ಬಳಕೆ ಮಾಡಿದರೆ, ನಗರದ ಕೆಲ ಭಾಗಕ್ಕೆ ಕುಡಿವ ನೀರು ಸಮರ್ಪಕವಾಗಿ ಪೂರೈಕೆಯಾಗಲ್ಲ. ಹೀಗಾಗಿ ಜನಪ್ರತಿನಿಧಿಗಳು ಸಹ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಾಲಿಕೆ ಅಧಿಕಾರಿಗಳ ಗಮನಕ್ಕೂ ಇದೆ. ಆದರೂ, ಪ್ರಯೋಜನವಾಗುತ್ತಿಲ್ಲ.
ಜಯಪ್ರಕಾಶ್‌ರೆಡ್ಡಿ, ಚೌಹಾಣ್‌,
ನೀರು ಶುದ್ಧೀಕರಣ ಘಟಕದ ಅಧಿಕಾರಿಗಳು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ