ಕುರಿಗಾಹಿಗಳಿಗೂ ತಟ್ಟಿತು ಬರದ ಬಿಸಿ!

•ಮಳೆಯಿಲ್ಲದೆ ಸಮಸ್ಯೆ•ಕುರಿಗಳಿಗಿಲ್ಲ ಸಮರ್ಪಕ ಮೇವು•ಮರಿಗಳಿಗೆ ರವೆಗಂಜಿಯೇ ಆಹಾರ

Team Udayavani, Jun 19, 2019, 11:10 AM IST

ಬಳ್ಳಾರಿ: ಬಾಟಲಿ ಮೂಲಕ ಕುರಿಮರಿಗಳಿಗೆ ಗಂಜಿ ಕುಡಿಸುತ್ತಿರುವ ಕುರಿಗಾಹಿಗಳು.

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಪ್ರಸಕ್ತ ವರ್ಷದ ಮಧ್ಯಾವಧಿ (ಜೂನ್‌ ತಿಂಗಳು) ಬಂದರೂ ಈವರೆಗೂ ಮಳೆಯಾಗದಿರುವುದು ರೈತರನ್ನು ಒಂದೆಡೆ ಚಿಂತೆಗೀಡು ಮಾಡಿದ್ದರೆ, ಕುರಿಗಾಹಿಗಳಿಗೂ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ. ಸಕಾಲಕ್ಕೆ ಮಳೆಯಾಗದ ಪರಿಣಾಮ ಕುರಿಗಳಿಗೆ ಮೇವಿನ ಕೊರತೆ ಎದುರಾಗಿದೆ. ಕುರಿಯ ಮರಿಗಳ ಆರೈಕೆ ದೊಡ್ಡ ಸವಾಲಾಗಿ ಹೋಗಿರುವ ಕುರಿಗಾಹಿಗಳು ರವೆಯ ಗಂಜಿಗೆ ಮೊರೆ ಹೋಗಿದ್ದಾರೆ.

ಜಿಲ್ಲೆಯ ಹೂವಿನಹಡಗಲಿ ಭಾಗದಲ್ಲಿನ ಕುರಿಗಾಹಿಗಳು ಮರಿಗಳನ್ನು ಸಾಕಲು ರವೆ ಗಂಜಿಗೆ ಮೊರೆಹೋಗಿದ್ದಾರೆ. ಸಣ್ಣ ಮಕ್ಕಳಿಗೆ ಹಾಲುಣಿಸುವ ರೀತಿ ನಿಪ್ಪಲ್ ಬಾಟಲಿಯಲ್ಲಿ ರವೆ ಗಂಜಿ ಕುಡಿಸಿ ಈ ಭಾಗದ ಕುರಿಗಾಹಿಗಳು ತಮ್ಮ ಮರಿಗಳನ್ನು ಕಾಪಾಡಿಕೊಳ್ಳುತ್ತಿದ್ದಾರೆ.

ಕುರಿ ಸರಿಯಾಗಿ ಮೇಯದೇ ಇದ್ದಾಗ ಹಾಲಿನ ಪ್ರಮಾಣ ಇಳಿದು ಹೋಗಲಿದೆ. ಹಾಲಿ ಈ ಭಾಗದಲ್ಲಿ ಮರಿ ಬದುಕುಳಿಯಲು ಬೇಕಾದಷ್ಟು ಸಹ ಹಾಲು ಕುರಿಯ ಕೆಚ್ಚಲಿಗೆ ಬರುತ್ತಿಲ್ಲ. ಇದೇ ಕಾರಣಕ್ಕೆ ಕುರಿ ಮಾಲೀಕರು ಗಂಜಿಯ ಮೊರೆ ಹೋಗಿದ್ದಾರೆ. ಬೆಳಗ್ಗೆ, ಸಂಜೆ ಎರಡೂ ಹೊತ್ತು 500 ಮಿಲಿ ಲೀಟರ್‌ ಗಂಜಿ ಕುಡಿಸಿ, ಕುರಿಮರಿಗಳನ್ನು ಸಲುಹುವ ಕೆಲಸವನ್ನು ಕುರಿಗಾಹಿಗಳು ಮಾಡುತ್ತಿದ್ದಾರೆ. ಹಡಗಲಿ ತಾಲೂಕು ಮಾನ್ಯರ ಮಸಲವಾಡ ಗ್ರಾಮದ ಕುರಿ ಶಿವನಾಗಪ್ಪ ಪ್ರತಿದಿನ ಬೆಳಗ್ಗೆ, ಸಂಜೆ 15-20 ಮರಿಗಳಿಗೆ ಗಂಜಿ ಕುಡಿಸಿ ಸಾಕುತ್ತಿದ್ದಾರೆ.

ಕುರಿಗಾಹಿ ಶಿವನಾಗಪ್ಪ ಅವರೇ ಹೇಳುವಂತೆ, ಕಳೆದ ಮೂರ್ನಾಲ್ಕು ತಿಂಗಳಿನಿಂದ ಕುರಿಗಳಿಗೆ ಸಮರ್ಪಕವಾಗಿ ಮೇವು ಸಿಗುತ್ತಿಲ್ಲ. ಸಾಮಾನ್ಯವಾಗಿ ಈ ವೇಳೆಗಾಗಲೇ ಮಳೆಯಾಗಿ ಎಲ್ಲೆಡೆ ಬಿತ್ತನೆ ಶುರುವಾಗುತ್ತಿತ್ತು. ಇದರ ಜತೆಗೆ ನಮ್ಮ ಕುರಿಗಳಿಗೂ ಸಹ ಕೆರೆದಂಡೆ ಸೇರಿದಂತೆ ಬಿತ್ತದೆ, ಬೀಳು ಬಿಡುವ ಜಮೀನುಗಳಲ್ಲಿ ಹುಲುಸಾಗಿ ಹುಲ್ಲು ಬೆಳೆಯುತ್ತಿತ್ತು. ನಾವು ಸಹ ನೆಮ್ಮದಿಯಿಂದ ಕುರಿ ಮೇಯಿಸಿಕೊಂಡು ಇರುತ್ತಿದ್ದೆವು. ಈ ಬಾರಿ ಪರಿಸ್ಥಿತಿ ಭೀಕರವಾಗಿದೆ. ಎಲ್ಲೂ ಸಹ ಕುರಿಗಳಿಗೆ ಮೇವಿಲ್ಲವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಈಗಲಾದರೂ ಮಳೆಯಾಗದೇ ಇದ್ದರೆ ಮುಂದಿನ ದಿನಗಳಲ್ಲಿ ಕುರಿ ಸಲುಹುವುದು ಹೇಗೆ ಎಂಬುದೇ ನಮ್ಮನ್ನು ಕಾಡುತ್ತಿದೆ. ದೂರದ ಹಗರನೂರು, ಕೊಳಚಿ, ಮಾಡಲಗೇರಿ ಗ್ರಾಮಗಳತ್ತ ಕುರಿಗಳನ್ನು ಕರೆದೊಯ್ದು ಮೇಯಿಸುವ ಕಾರ್ಯ ನಡೆಯುತ್ತಿದೆ. ಅಲ್ಲೂ ಸಹ ಮಳೆ ಇಲ್ಲದೇ ಇರುವುದರಿಂದ ಸಮಸ್ಯೆ ಗಂಭೀರವಾಗಿದೆ ಎಂದು ಮತ್ತೂಬ್ಬ ಕುರಿಗಾಹಿ ರಾಮಪ್ಪ ತಮ್ಮ ನೋವನ್ನು ಹೊರಹಾಕುತ್ತಾರೆ.

ಸದ್ಯ ಕೆರೆ ತುಂಬಿದ್ದರಿಂದ ನೀರಿನ ಸಮಸ್ಯೆ ಇಲ್ಲವಾಗಿದೆ. ಪ್ರತಿ ವರ್ಷ ನೀರಿನ ಸಮಸ್ಯೆಯ ಕಾರಣಕ್ಕಾಗಿಯೇ ಈ ಊರು ಬಿಟ್ಟು ದೂರದ ನದಿ ದಡದಲ್ಲಿರುವ ಹಳ್ಳಿಗಳಲ್ಲಿ ಬೀಡು ಬಿಟ್ಟು ಕುರಿ ಮೇಯಿಸುತ್ತಿದ್ದೆವು. ಈ ಬಾರಿ ಕೆರೆಯಲ್ಲಿ ನೀರು ಇರುವುದರಿಂದ ನೀರಿನ ಸಮಸ್ಯೆ ಇಲ್ಲವಾಗಿದೆ. ಆದರೆ, ಮಳೆ ಕೈಕೊಟ್ಟು ಮೇವಿನ ಸಮಸ್ಯೆ ಸೃಷ್ಟಿಯಾಗಿದೆ ಎಂದರು.

ಕಳೆದ ವರ್ಷ ಈಗಾಗಲೇ ಮಳೆಯಾಗಿತ್ತು. ಆದರೆ, ಪ್ರಸಕ್ತ ವರ್ಷ ಜೂನ್‌ ತಿಂಗಳು ಮುಗಿಯುತ್ತಿದ್ದರೂ ವರುಣ ಕೃಪೆ ತೋರದಿರುವುದು ಕುರಿಗಳಿಗೆ ಮೇವು ಒದಗಿಸುವುದು ದಿಕ್ಕು ತೋಚದಂತಾಗಿದೆ. ಕುರಿಗಳಿಗೆ ಮೇವು ದೊರೆಯದಿದ್ದರೆ ಅವುಗಳ ಮರಿಗಳಿಗೆ ಹಾಲಿನ ಕೊರತೆ ಕಾಡಲಿದೆ. ಅದಕ್ಕಾಗಿ ರವೆಗಂಜಿಯನ್ನು ಬಾಟಲ್ ಮೂಲಕ ಮರಿಗಳಿಗೆ ಕುಡಿಸುತ್ತಿದ್ದೇವೆ. ಸದ್ಯ ಕೆರೆಗಳು ತುಂಬಿರುವುದು ಸಮಾಧಾನ ತಂದಿದ್ದು, ಇನ್ನಾದರೂ ವರುಣ ಕರುಣಿಸದಿದ್ದರೆ ಮುಂದಿನ ದಿನಗಳಲ್ಲಿ ಕುರಿಗಳನ್ನು ಸಾಕುವುದು ಕಷ್ಟಕರವಾಗಲಿದೆ.
ಶಿವನಾಗಪ್ಪ, ಕೊಟ್ರಮ್ಮ, ಕುರಿಗಾಹಿಗಳು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ