ಬಳ್ಳಾರಿಯಲ್ಲಿ ಮಳೆಗೆ 2.39 ಕೋಟಿ ರೂ. ಹಾನಿ
Team Udayavani, May 22, 2022, 3:56 PM IST
ಬಳ್ಳಾರಿ: ಜಿಲ್ಲೆಯಲ್ಲಿ ಏಪ್ರಿಲ್ ಮೊದಲ ವಾರದಿಂದ ಇಲ್ಲಿಯವರೆಗೆ ಸುರಿದ ಮಳೆಯಿಂದಾಗಿ 2.39 ಕೋಟಿ ರೂ. ಗಳಷ್ಟು ಹಾನಿಯಾಗಿದೆ. ಬೆಳೆಹಾನಿ, ವಸತಿ ಹಾನಿ ಮತ್ತು ಜನ-ಜಾನುವಾರುಗಳ ಹಾನಿಯಾಗಿದ್ದಕ್ಕೆ ಪರಿಹಾರ ವಿತರಿಸಲಾಗಿದೆ.
ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಹಾನಿಯಾದ ಬೆಳೆ, ವಸತಿ ಮತ್ತು ಜಾನುವಾರುಗಳಿಗೆ ನಿಯಮಾನುಸಾರ ಪರಿಹಾರವನ್ನು 3 ದಿನದೊಳಗೆ ವಿತರಿಸುವಂತೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಮುಖ್ಯಮಂತ್ರಿಗಳ ಸಭೆ ನಂತರ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಇಬ್ಬರು ಸಾವನ್ನಪ್ಪಿದ್ದು ಅವರಿಗೆ ನಿಯಮಾನುಸಾರ ತಲಾ 5ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ. 2 ದೊಡ್ಡ ಮತ್ತು 12 ಸಣ್ಣ ಜಾನುವಾರುಗಳು ಸಾವನ್ನಪ್ಪಿವೆ. 161 ಮನೆಗಳಿಗೆ ಹಾನಿಯಾಗಿದೆ. 244.1 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದೆ. 371 ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಇದರ ಜೊತೆಗೆ 31 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟಿದ್ದು, ಒಟ್ಟು 2.39 ಕೋಟಿ ರೂ.ಗಳ ಹಾನಿ ಜಿಲ್ಲೆಯಲ್ಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಸಿಇಒ ಜೆ. ಲಿಂಗಮೂರ್ತಿ, ಎಸ್ಪಿ ಸೈದುಲು ಅಡಾವತ್, ಎಡಿಸಿ ಪಿ.ಎಸ್. ಮಂಜುನಾಥ, ಸಹಾಯಕ ಆಯುಕ್ತ ಡಾ| ಆಕಾಶ ಶಂಕರ್ ಸೇರಿದಂತೆ ಕೃಷಿ, ತೋಟಗಾರಿಕೆ, ಜೆಸ್ಕಾಂ, ಕಂದಾಯ, ಅಗ್ನಿಶಾಮಕದಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.