ಆನ್‌ಲೈನ್‌ನಲ್ಲಿ ಕಾರ್ಯಕರ್ತರೊಂದಿಗೆ ಡಿಕೆಶಿ ಚರ್ಚೆ
ಕಾಂಗ್ರೆಸ್ ಪಕ್ಷದ ಸಂಘಟನೆ ಬಗ್ಗೆ ಸಮಾಲೋಚನೆ
Team Udayavani, Jun 8, 2020, 6:34 PM IST
ಬಳ್ಳಾರಿ: ಪಾಲಿಕೆ ಸದಸ್ಯೆ, ಮಾಜಿ ಮೇಯರ್ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಆನ್‌ಲೈನ್ ಮೂಲಕ ಪಕ್ಷದ ಕಾರ್ಯಕರ್ತರು ಭಾನುವಾರ ಸಮಾಲೋಚನೆ ನಡೆಸಿದರು
ಬಳ್ಳಾರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೂ.14ರಂದು ಪದಗ್ರಹಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ನಗರದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.
ನಗರದ ಎಪಿಎಂಸಿ ಬಳಿಯ 6ನೇ ವಾರ್ಡ್‌ನ ಪಾಲಿಕೆ ಮಾಜಿ ಮೇಯರ್ ನಿವಾಸದ ಆವರಣದಲ್ಲಿ ಈ ಆನ್‌ಲೈನ್ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರೊಂದಿಗೆ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದರು. ಈ ವೇಳೆ ಕೋವಿಡ್ ಲಾಕ್ ಡೌನ್ ದಿನಗಳಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜನರೊಂದಿಗೆ ಸಮಾಲೋಚನೆ ನಡೆಸಿದ ಡಿ.ಕೆ. ಶಿವಕುಮಾರ್, ಲಾಕ್‌ಡೌನ್ ದಿನಗಳಲ್ಲಿ ಸರ್ಕಾರದಿಂದ ಯಾವುದಾದರೂ ಸೌಲಭ್ಯಗಳು ಲಭಿಸಿವೆಯೇ? ಎಂದು ಪ್ರಶ್ನಿಸಿದರು. ಒಂದು ವೇಳೆ ಸೌಲಭ್ಯಗಳು ಲಭಿಸದಿದ್ದರೆ ಸರ್ಕಾರದ ಜತೆಗೆ ಮಾತನಾಡಿ, ನನ್ನ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಸೌಲಭ್ಯಗಳನ್ನು ಸರ್ಕಾರದಿಂದ ಲಭಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಪಕ್ಷದ ಕಾರ್ಯ ಕರ್ತರೊಂದಿಗೂ ಚರ್ಚೆ ನಡೆಸಿದ ಡಿ.ಕೆ. ಶಿವಕುಮಾರ್, ನಾನು ಪಕ್ಷದ ಅಧ್ಯಕ್ಷನಲ್ಲ. ನಿಮ್ಮಲ್ಲರಂತೆ ನಾನು ಸಹ ಕಾರ್ಯಕರ್ತ. ನಾವೆಲ್ಲರೂ ಪಕ್ಷದ ಕಾರ್ಯಕರ್ತರಾಗಿದ್ದು, ಪಕ್ಷವನ್ನು ಬಲಪಡಿಸುವಲ್ಲಿ ಶ್ರಮಿಸಬೇಕು. ನನ್ನದು ಆ ಘಟಕ, ಈ ಘಟಕ ಎಂದೆಲ್ಲ ತಾರತಮ್ಯ ಮಾಡಿಕೊಳ್ಳದೆ ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಈ ವೇಳೆ ಮಾಜಿ ಮೇಯರ್ ಪಾಲಿಕೆ ಸದಸ್ಯರಾದ ಸುಶೀಲಾಬಾಯಿ, ಪಾಲಿಕೆ ಸದಸ್ಯೆ ಪರ್ವಿನ್ ಬಾನು, ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಅಸುಂಡಿ ಹೊನ್ನೂರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೌತಮ್, ಉಸ್ತುವಾರಿಗಳಾದ ಸತ್ಯಪ್ರಕಾಶ್, ವೆಂಕಟೇಶ್ ಹೆಗಡೆ, ಹರ್ಷದ್ ಅಹ್ಮದ್, ಟಿ.ಪದ್ಮಾ, ಎಸ್. ಶರ್ಮಾಸ್, ಡಿ.ಸೂರಿ, ಶೋಭಾ ಕಳಿಂಗ, ನಾಗರಾಜ್, ಸಂತೋಷ್ ಸ್ವಾಮಿ, ಅಲಿವೇಲು ಸುರೇಶ್ ಇದ್ದರು.