ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ

Team Udayavani, Jan 18, 2019, 9:20 AM IST

ಬಳ್ಳಾರಿ: ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿಯವರು ನಡೆಸುತ್ತಿರುವ ಆಪರೇಷನ್‌ ಕಮಲ ವಿರೋಧಿಸಿ, ನಗರದ ಗಡಿಗಿಚನ್ನಪ್ಪ ವೃತ್ತದಲ್ಲಿ ಸಂಸದ ವಿ.ಎಸ್‌. ಉಗ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಕಾರ್ಯಕರ್ತರು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಸಂಸದ ವಿ.ಎಸ್‌.ಉಗ್ರಪ್ಪ ಮಾತನಾಡಿ, ಕಳೆದ 70 ವರ್ಷದ ಸ್ವತಂತ್ರ ಭಾರತದ ಇತಿಹಾಸದಲ್ಲಿ ಜನಾದೇಶವನ್ನು ಧಿಕ್ಕರಿಸಿ ಶಾಸಕರ ಖರೀದಿ ನಡೆದಿರಲಿಲ್ಲ. ಬಿಜೆಪಿಯವರಿಗೆ ಜನಾದೇಶ ಇಲ್ಲದಿದ್ದರೂ ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಮೇಲೆ ಒತ್ತಡ ಹೇರಿ ಆಪರೇಷನ್‌ ಕಮಲ ನಡೆಸಲು ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ. ಬಿಜೆಪಿ ಜನಾದೇಶಕ್ಕೆ, ಸಂವಿಧಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರ ಮಾಡುತ್ತಿದೆ. ಇದನ್ನು ರಾಜ್ಯದ ಜನ ಸಹಿಸಲ್ಲ ಎಂದರು.

ಸಿದ್ಧಾಂತ, ಚಿಹ್ನೆಯ ಮೇಲೆ ಆಯ್ಕೆಯಾಗಿರುವ ಶಾಸಕರಿಗೆ ಐದು ವರ್ಷ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು. ಬಿಜೆಪಿಯವರು ಯಾವುದೇ ಕಾರಣಕ್ಕೂ ಆಪರೇಷನ್‌ ಕಮಲ ಮಾಡಿ ಜನರಿಗೆ ದ್ರೋಹ ಬಗೆಯಲು ಕಾಂಗ್ರೆಸ್‌ ಬಿಡಲ್ಲ. ಅದರ ವಿರುದ್ಧ ಹೋರಾಡಲು ನಾವು ಸಿದ್ಧ. ಸರಕಾರ ಅಸ್ಥಿರಗೊಳಿಸುವ ಬಿಜೆಪಿಯವರಿಗೆ 2019ರ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಕರ್ನಾಟಕದಲ್ಲಷ್ಟೇ ಅಲ್ಲ. ಮಧ್ಯಪ್ರದೇಶದಲ್ಲೂ ಆಪರೇಷನ್‌ ಕಮಲಕ್ಕೆ ಬಿಜೆಪಿ ಮುಂದಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರೇ ನೇರ ಹೊಣೆಯಾಗಿದ್ದಾರೆ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇದ್ದರೆ ಕೂಡಲೇ ಈ ಆಪರೇಷನ್‌ ಕಮಲ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಎಲ್ಲ ಆರು ಜನ ಶಾಸಕರು ಪಕ್ಷದೊಂದಿಗೆ ಇದ್ದಾರೆ. ಶಾಸಕರಾದ ನಾಗೇಂದ್ರ, ಭೀಮಾನಾಯ್ಕ, ಜೆ.ಎನ್‌.ಗಣೇಶ್‌, ಆನಂದ್‌ಸಿಂಗ್‌, ಸಚಿವರಾದ ಪಿ.ಟಿ.ಪರಮೇಶ್ವರ ನಾಯ್ಕ, ಈ.ತುಕಾರಾಮ್‌ ಎಲ್ಲರೂ ಕಾಂಗ್ರೆಸ್‌ನಲ್ಲೇ ಉಳಿಯಲಿದ್ದಾರೆ. ಐದು ವರ್ಷಗಳ ಕಾಲ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನೀಡಲು ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಬದ್ಧವಾಗಿದೆ. ಶುಕ್ರವಾರ ಸಿಎಲ್‌ಪಿ ಸಭೆ ನಡೆಯಲಿದ್ದು, ಅದರಲ್ಲಿ ಎಲ್ಲ ಶಾಸಕರು ಹಾಜರಾಗಲಿದ್ದು, ಆದ್ಯತೆ ಮೇರೆಗೆ ಅರ್ಹರಿಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಪಕ್ಷದ ವರಿಷ್ಠರು ನಿರ್ಣಯಿಸಲಿದ್ದಾರೆ. ಅದಕ್ಕೆ ನಾವೆಲ್ಲರೂ ಬದ್ಧರಿದ್ದೇವೆ ಎಂದವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಹ್ಮದ್‌ ರಫೀಕ್‌, ಪಾಲಿಕೆ ಸದಸ್ಯರಾದ ಬೆಣಕಲ್‌ ಬಸವರಾಜ್‌, ಪರ್ವಿನ್‌ಬಾನು, ಯೂತ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹನುಮಕಿಶೋರ್‌, ಮುಖಂಡರಾದ ಅಸುಂಡಿ ನಾಗರಾಜ, ಅರ್ಜುನ್‌, ಪದ್ಮಾ, ಶೋಭಾ ಕಳಿಂಗ, ಅರುಣ್‌ಕುಮಾರ್‌, ತಾಯಪ್ಪ, ಚಂದ್ರಾನಾಯ್ಕ, ಕೊಳಗಲ್ಲು ಅಂಜಿನಿ, ತೊಲಮಾಮಿಡಿ ರಾಜು ಸೇರಿದಂತೆ ಪಕ್ಷದ ಹಲವಾರು ಕಾರ್ಯಕರ್ತರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

  • ಕಂಪ್ಲಿ: ರಾಜ್ಯದಲ್ಲಿ ಬೇರೆ ಪಕ್ಷದ ಸರ್ಕಾರವಿದ್ದರೂ ಸಹಿತ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ...

  • ಹರಿಹರ: ಮಾನವ ಸಮಾಜಕ್ಕೆ ಕಳಂಕವಾಗಿರುವ ಲಿಂಗ ತಾರತಮ್ಯ ನಿವಾರಣೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಇಲ್ಲಿನ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ...

  • ಬಳ್ಳಾರಿ: ಕಾನೂನು ಉಲ್ಲಂಘಿಸುವುದೇ ಅಪರಾಧವಾಗಿದ್ದು, ಪ್ರಾಣ ಉಳಿಸಲೆಂದೇ ಇರುವ ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಹೆಚ್ಚುವರಿ ಎಸ್‌ಪಿ...

  • ಬಳ್ಳಾರಿ: ತಾಲೂಕಿನ ಇಬ್ರಾಹಿಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ರೂಪನಗುಡಿ ಕ್ಲಸ್ಟರ್‌ ಮಟ್ಟದ...

  • ಬಳ್ಳಾರಿ: ಪೊಲೀಸ್‌ ಇಲಾಖೆಯ ಸಿಬ್ಬಂದಿಯವರು ಕರ್ತವ್ಯದ ಜೊತೆಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಕರೆ...

ಹೊಸ ಸೇರ್ಪಡೆ