ಕೋವಿಡ್; ಆಯುರ್ವೇದ ಮದ್ದಿನತ್ತ ಜನರ ಗಮನ!
ಮಾತ್ರೆಗಳಿಗಾಗಿ ಆಯುರ್ವೇದ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚಳ
Team Udayavani, Jul 29, 2020, 3:13 PM IST
ಬಳ್ಳಾರಿ: ಆಯುರ್ವೇದದಲ್ಲಿ ಅಂಗೈಯಲ್ಲೇ ಔಷಧವಿದೆ ಎಂಬ ಅರಿವಿದ್ದರೂ, ಚಿಕ್ಕ ಜ್ವರದಿಂದ ಹಿಡಿದು ದೊಡ್ಡ ಕಾಯಿಲೆಗಳಿಗೂ ಇಂಗ್ಲಿಷ್ ಪದ್ಧತಿಯ ಅಲೋಪತಿ ಔಷಧಗಳಿಗೆ ಜೋತುಬಿದ್ದಿದ್ದ ಜನಸಾಮಾನ್ಯರಿಗೆ ಕೋವಿಡ್ ಸೋಂಕು ಪುನಃ ಆಯುರ್ವೇದ ಔಷಧಗಳತ್ತ ಮುಖ ಮಾಡುವಂತೆ ಮಾಡಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳಿಗಾಗಿ ಆಯುಷ್ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ಜನರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಯುರ್ವೇದ ಪದ್ಧತಿಯಲ್ಲಿ ಪ್ರತಿಯೊಂದು ಕಾಯಿಲೆಗಳಿಗೂ ಅಂಗೈಯಲ್ಲೇ ಔಷಧಗಳಿವೆ ಎಂಬುದು ಜಗಜ್ಜಾಹೀರಾಗಿದೆ. ಆಯುರ್ವೇದ ಚಿಕಿತ್ಸೆ ನಿಧಾನವಾದರೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಈ ಬಗ್ಗೆ ಗೊತ್ತಿದ್ದರೂ ಇಂಗ್ಲಿಷ್ ಪದ್ಧತಿಯ ಅಲೋಪತಿ ಔಷಧಗಳಿಗೆ ಮಾರುಹೋಗಿದ್ದ ಜನರು ಇದೀಗ ಕೋವಿಡ್ ಸೋಂಕಿನಿಂದ ಎಚ್ಚೆತ್ತುಕೊಂಡಿದ್ದಾರೆ. ಸೋಂಕು ಆವರಿಸದಂತೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕ್ ಆಲ್ಬ ಮಾತ್ರೆಗಳಿಗಾಗಿ ಬಳ್ಳಾರಿ ಜಿಲ್ಲೆಯಾದ್ಯಂತ ಆಯುಷ್ ಆಸ್ಪತ್ರೆಗಳ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕೋವಿಡ್ ಗೂ ಮುನ್ನ ಆಯುಷ್ ಆಸ್ಪತ್ರೆಗಳಿಗೆ ಬರುತ್ತಿದ್ದ ಜನರ ಪ್ರಮಾಣ ಕೋವಿಡ್ ನಂತರ ಶೇ.10 ರಷ್ಟು ಹೆಚ್ಚಳವಾಗಿದೆ.
ಕೋವಿಡ್‌ಗೂ ಮುನ್ನ ಜಿಲ್ಲೆಯ ವಿವಿಧೆಡೆ ಇರುವ 82 ಆಯುಷ್ ಆಸ್ಪತ್ರೆಗಳಿಗೆ ತಿಂಗಳಿಗೆ ಬರುತ್ತಿದ್ದ ರೋಗಿಗಳ ಸಂಖ್ಯೆ ಸರಾಸರಿ 24600 ಇದ್ದರೆ, ಕೋವಿಡ್ ನಂತರ ಸುಮಾರು 2 ಲಕ್ಷ ಜನರು ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ ಸೇರಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವುದು ಜನರು ಆಯುರ್ವೇದದತ್ತ ಮುಖಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
1.8 ಲಕ್ಷ ಜನರಿಗೆ ಮಾತ್ರೆ ವಿತರಣೆ: ಕೋವಿಡ್ ಸೋಂಕು ದೇಶದಲ್ಲಿ ಲಗ್ಗೆಯಿಡುತ್ತಿದ್ದಂತೆ ಆತಂಕ, ಭಯದಲ್ಲಿದ್ದ ಜನರಲ್ಲಿ, ಸೋಂಕು ನಿವಾರಣೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ರಾಮಬಾಣ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಆಯುಷ್ ಇಲಾಖೆ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕಲ್ ಅಲ್ಬ, ಶಂಶನ್ ಓಟಿ, ಅರ್ಕೆ ಅಜಿಬ್ ಮಾತ್ರೆಗಳನ್ನು ವಿತರಿಸಿ ಇವನ್ನು ಸೇವಿಸುವ ವಿಧಾನವನ್ನು ಜನರಿಗೆ ತಿಳಿಸಿಕೊಡಲಾಗಿದೆ. ಜತೆಗೆ ಕೋವಿಡ್‌ವಿರುದ್ಧ ಹೋರಾಟ ಮಾಡುವ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಪೊಲೀಸರು, ಪತ್ರಕರ್ತರು ಸೇರಿದಂತೆ ನ್ಯಾಯಾಂಗ ಇಲಾಖೆ, ಸರ್ಕಾರಿ ಕಚೇರಿ ಸಿಬ್ಬಂದಿ, ಜನಸಾಮಾನ್ಯರು ಸೇರಿ ಜಿಲ್ಲೆಯಾದ್ಯಂತ ಒಟ್ಟು 1.8 ಲಕ್ಷ ಜನರಿಗೆ ಈ ಮಾತ್ರೆಗಳನ್ನು ವಿತರಿಸಲಾಗಿದೆ. ಜೊತೆಗೆ ಪ್ರತಿನಿತ್ಯ ಕಷಾಯ ಮಾಡಿಕೊಂಡು ಸೇವಿಸುವ ಪದ್ಧತಿ ಕುರಿತು ತಿಳಿಸಿಕೊಡಲಾಗಿದೆ. ಮನೆಯಲ್ಲಿಯೇ ಇರುವ ಔಷಧಿಧೀಯ ಗುಣ ಇರುವ ಪದಾರ್ಥಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ| ವರಪ್ರಸಾದ್ ತಿಳಿಸಿದರು.
ಆಯುಷ್ ಇಲಾಖೆ ನೀಡಿದ ಮಾಹಿತಿ ಆಧರಿಸಿ, ತೋರಿಸಿಕೊಟ್ಟ ಮಾರ್ಗದಂತೆ ಕಷಾಯ ಮಾಡಿಕೊಂಡು ಸೇವಿಸಿದರು. ಕೊಟ್ಟ ಮಾತ್ರೆಗಳನ್ನು ಕಾಲ ಕಾಲಕ್ಕೆ ತೆಗೆದುಕೊಂಡರು. ಇದು ಕೆಲವರಲ್ಲಿ ಉತ್ತಮ ಪರಿಣಾಮ ಸಹ ಬೀರಿತು. ಜೊತೆಗೆ ಅಲ್ಲಲ್ಲಿ ಆಯುಷ್ ಪದ್ಧತಿಯಡಿ ಕೋವಿಡ್‌ದಿಂದ ಗುಣಮುಖರಾದವರ ಕುರಿತು ಸುದ್ದಿ ತಿಳಿದ ಜನ ಆಯುಷ್ ಇಲಾಖೆಯನ್ನು ಬಹುವಾಗಿ ನೆಚ್ಚಿಕೊಂಡಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಯುಷ್ ಇಲಾಖೆಯತ್ತ ಮುಖಮಾಡಲು ಕಾರಣವಾಗಿದೆ.
ಕೋವಿಡ್ ಸೋಂಕು ನಿವಾರಣೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ರಾಮಬಾಣವಾಗಿದೆ. ಈ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಆಯುಷ್‌ನಲ್ಲಿದೆ. ಕೇಂದ್ರ ಸರ್ಕಾರ ಈ ಕುರಿತು ಜನರಲ್ಲಿ ಮನವರಿಕೆ ಮಾಡಿಕೊಡುವ ಸಲುವಾಗಿ ಸಾಕಷ್ಟು ಪ್ರಚಾರವನ್ನೂ ಮಾಡಿದೆ. ಜೊತೆಗೆ ಕೋವಿಡ್‌ತಡೆಯಲು ಆಯುಷ್ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನೂ ಪಾಲಿಸುವಂತೆಯೂ ತಿಳಿಸಿದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಜನರು ಆಯುಷ್ ಆಸ್ಪತ್ರೆಗಳಿಗೆ ಬರಲು ಆರಂಭಿಸಿದ್ದಾರೆ. ಕೋವಿಡ್ ನಂತರ ಜಿಲ್ಲೆಯಾದ್ಯಂತ ಆಯುಷ್ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇ.10 ರಷ್ಟು ಹೆಚ್ಚಳವಾಗಿದೆ. -ಡಾ. ವರಪ್ರಸಾದ್, ಜಿಲ್ಲಾ ಆಯುಷ್ ಅಧಿಕಾರಿ
-ವೆಂಕೋಬಿ ಸಂಗನಕಲ್ಲು