ದೇವದಾಸಿಯರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

Team Udayavani, Nov 19, 2019, 3:06 PM IST

ಸಿರುಗುಪ್ಪ: ಸರ್ಕಾರವು ದೇವದಾಸಿ ಮಹಿಳೆಯರ ಪುನರ್ವಸತಿಗಾಗಿ ಹಾಗೂ ಅವರ ಮಕ್ಕಳ ಭವಿಷ್ಯಕ್ಕಾಗಿ ವಿವಿಧ ಸೌಲಭ್ಯಗಳನ್ನು ನೀಡುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸಿದ ಫಲವಾಗಿ ಕೇವಲ ರೂ. 500ಗಳನ್ನು ಮಾತ್ರ ನೀಡುವ ಭರವಸೆಯನ್ನು ಸರ್ಕಾರ ನೀಡಿದ್ದು ಇದರ ಬದಲಾಗಿ 5000ರೂ. ನೀಡಬೇಕೆಂದು ದೇವದಾಸಿ ವಿಮೋಚನ ಸಂಘ ಹಾಗೂ ದೇವದಾಸಿ ಮಕ್ಕಳ ಸಂಘದ ರಾಜ್ಯ ಗೌರವಾಧ್ಯಕ್ಷ ಯು. ಬಸವರಾಜ ಒತ್ತಾಯಿಸಿದರು.

ನಗರದ 7, 8ನೇ ವಿಭಾಗ ಸರ್ಕಾರಿ ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ವಿಮೋಚನ ಸಂಘ ಹಾಗೂ ದೇವದಾಸಿ ಮಕ್ಕಳ ಸಂಘದ ತಾಲೂಕು ಘಟಕದ ವತಿಯಿಂದ ಭಾನುವಾರ ನಡೆದ ತಾಲೂಕು ಸಮಾವೇಶದಲ್ಲಿ ಮಾತನಾಡಿ, ದೇವದಾಸಿ ಮಹಿಳೆಯರ ಮಕ್ಕಳ ಮದುವೆಗೆ 5ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು. ಕುಟುಂಬದ ನಿರ್ವಹಣೆಗಾಗಿ 5ಎಕರೆ ಕೃಷಿ ಜಮೀನು, ನಿವೇಶನ ಸಹಿತ ಪಕ್ಕಾ ಮನೆ, ಸ್ವ-ಉದ್ಯೋಗ ಕೈಗೊಳ್ಳಲು ಅಗತ್ಯವಿರುವಂತೆ 5ಲಕ್ಷ ರೂ. ವರೆಗೆ ಸಹಾಯಧನ ನೀಡಿದರೆ ಮಾತ್ರ ದೇವದಾಸಿಯಂಥ ಅನಿಷ್ಠ ಪದ್ಧತಿಯನ್ನು ರಾಜ್ಯದಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ.

ಈ ಕುರಿತು ಡಿ. 15ರಿಂದ 25ರ ವರೆಗೆ ರಾಜ್ಯಾದ್ಯಂತ ತಾಲೂಕಿನ ಪ್ರಮುಖ ವೃತ್ತಗಳಲ್ಲಿ ದೇವದಾಸಿ ಮಹಿಳೆಯರು ಒಂದು ಗಂಟೆಗಳ ಕಾಲ ರಸ್ತೆತಡೆ ನಡೆಸುವ ಮೂಲಕ ಪ್ರತಿಭಟನೆ ಕೈಗೊಂಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದೇವದಾಸಿ ಮಹಿಳೆಯರು ಭಾಗವಹಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ತಾಲೂಕು ಅಧ್ಯಕ್ಷೆ ಈರಮ್ಮ, ಉಪಾಧ್ಯಕ್ಷೆ ಸೀತಮ್ಮ, ಪ್ರ.ಕಾರ್ಯದರ್ಶಿ ಹುಲಿಗೆಮ್ಮ, ಹಾಗಲೂರು ಹುಲಿಗೆಮ್ಮ, ದೇವದಾಸಿ ಮಕ್ಕಳ ಸಂಘದ ತಾ.ಅಧ್ಯಕ್ಷ ರಮೇಶ, ಮುಖಂಡರಾದ ದುರುಗಪ್ಪ, ಯಲ್ಲಪ್ಪ, ಓಬಳೇಶಪ್ಪ, ಹುಲೆಪ್ಪ, ಮಾರುತಿ, ತಿಪ್ಪಯ್ಯ, ಬಿ.ಎಲ್‌.ಈರಣ್ಣ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ