ಪ್ರತಿಭಟನೆಗೆ ತೆರಳಿದ್ದ ರೈತರ ಪರದಾಟ

Team Udayavani, Dec 4, 2018, 6:00 AM IST

ಬಳ್ಳಾರಿ: ಸಾಲ ಮನ್ನಾ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲು ದಿಲ್ಲಿಗೆ ತೆರಳಿದ್ದ ಜಿಲ್ಲೆಯ ರೈತರು ರೈಲು ತಪ್ಪಿಸಿಕೊಂಡು ವಾಪಸ್‌ ಬರಲು ಹಣವಿಲ್ಲದೆ ಕಾಶಿ (ವಾರಾಣಸಿ) ರೈಲು ನಿಲ್ದಾಣದಲ್ಲಿ ಅತಂತ್ರರಾಗಿ ಪರದಾಡುತ್ತಿದ್ದಾರೆ. ನ. 29, 30ರಂದು ನಡೆದ ಪ್ರತಿಭಟನೆಗಾಗಿ ಜಿಲ್ಲೆಯಿಂದ 30ಕ್ಕೂ ಹೆಚ್ಚು ರೈತರು ತೆರಳಿದ್ದರು. ಇದಕ್ಕಾಗಿ ಗದಗ-ಕಾಶಿ-ದಿಲ್ಲಿ ಮತ್ತು ದಿಲ್ಲಿ-ಕಾಶಿ-ಗದಗ ನಡುವೆ ಸಂಚರಿಸುವ ರೈಲಿನಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಲಾಗಿತ್ತು. ಪ್ರತಿಭಟನೆ ಮುಗಿದ ಬಳಿಕ ರೈಲು ಹತ್ತಿ ಕಾಶಿಯಲ್ಲಿ ಬಂದಿಳಿದಿದ್ದರು. ಅಲ್ಲಿಂದ ಗದಗಕ್ಕೆ ತೆರಳಲು ಡಿ.1ರಂದು ಸಂಜೆ 6 ಗಂಟೆಗೆ ಆಗಮಿಸಬೇಕಿದ್ದ ರೈಲು ತಡವಾಗಲಿದೆ ಎಂಬ ಮಾಹಿತಿ ಪಡೆದ ರೈತರೆಲ್ಲರೂ ನಿಲ್ದಾಣದಿಂದ ಹೊರಬಂದು ಕಾಶಿ ವೀಕ್ಷಣೆಗೆ ತೆರಳಿದ್ದರು.

ಡಿ. 1ರಂದು ಸಂಜೆ 6 ಗಂಟೆಗೆ ಆಗಮಿಸಬೇಕಿದ್ದ ರೈಲು ಡಿ. 2ರಂದು ಬೆಳಗ್ಗಿನ ಜಾವ ಆಗಮಿಸಿದೆ. ಈ ವೇಳೆ ರೈತರು ರೈಲು ನಿಲ್ದಾಣಕ್ಕೆ ಆಗಮಿಸಿಲ್ಲದ ಕಾರಣ ಈ ರೈಲನ್ನೂ ತಪ್ಪಿಸಿಕೊಂಡಿದ್ದಾರೆ. ಹುಬ್ಬಳ್ಳಿಗೆ ಆಗಮಿಸುವ ಶತಾಬ್ದಿ ಎಕ್ಸ್‌ ಪ್ರಸ್‌ ರೈಲನ್ನು ಸಹ ರೈತರು ತಪ್ಪಿಸಿಕೊಂಡಿದ್ದು, ಈಗ ಗದಗಕ್ಕೆ ಆಗಮಿಸುವ ರೈಲಿಗಾಗಿ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಕಾಶಿಯಿಂದ ಬಸ್‌ ಅಥವಾ ಬೇರೆ ರೈಲಿನಲ್ಲಿ ಸಂಚರಿಸಲು ರೈತರ ಕೈಯಲ್ಲಿ ಹಣವಿಲ್ಲ. ಇದರಿಂದ ಕಾಶಿ ನಿಲ್ದಾಣದಲ್ಲಿರುವ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ನೆರವಿನ ಹಸ್ತಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ