ಉಚ್ಚೆಂಗೆಮ್ಮ ದೇವಿ ಜಾತ್ರೆಗೆ ಕೊರೊನಾ ವಿಘ್ನ

harapanahalli-uchchengamma-devi-jatra

Team Udayavani, Mar 25, 2020, 1:05 PM IST

ಹರಪನಹಳ್ಳಿ: ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಅಪಾರ ಭಕ್ತರನ್ನು ಹೊಂದಿರುವ ಮಧ್ಯ ಕರ್ನಾಟಕದ ಉಚ್ಚಂಗಿದುರ್ಗ ಗ್ರಾಮದ ಶಕ್ತಿ ದೇವತೆ ಉಚ್ಚೆಂಗೆಮ್ಮದೇವಿ ಜಾತ್ರೋತ್ಸವ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರದ್ದಾಗಿದೆ.

ಮಹಾಮಾರಿ ಕೊರೊನಾ ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಜಾತ್ರೋತ್ಸವ ರದ್ದುಪಡಿಸಿ ಆದೇಶ ಹೊರಡಿಸಿದ್ದು, ಜಾತ್ರೋತ್ಸವ ನಡೆಯದಂತೆ ತಡೆಯುವಲ್ಲಿ ತಾಲೂಕು ಆಡಳಿತ ಸಂಪೂರ್ಣ ಯಶಸ್ವಿಯಾಗಿದೆ.

ಪ್ರತಿ ವರ್ಷ ನವಸಂವತ್ಸರ ಯುಗಾದಿ ಹಬ್ಬದ ಅಂಗವಾಗಿ 5 ದಿನಗಳ ಕಾಲ ಅದ್ಧೂರಿ ಜಾತ್ರೋತ್ಸವ ನಡೆಯುತ್ತಿತ್ತು. ಮಾ. 23ರಿಂದ 27ವರೆಗೆ ನಡೆಯಬೇಕಿದ್ದ ಜಾತ್ರೆಗೆ ಕೊರೊನಾ ಕರಿ ನೆರಳು ಹಿನ್ನೆಲೆಯಲ್ಲಿ ದೇವಸ್ಥಾನ ಬಂದ್‌ ಮಾಡಲಾಗಿದ್ದು, ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಯುಗಾದಿ ಅಮಾವಾಸ್ಯೆ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ನೂತನ ಮತ್ತು ಹಳೆ ವಾಹನಗಳನ್ನು ತಂದು ಪೂಜೆ ಮಾಡಿಕೊಂಡು ಹೋಗಲಾಗುತ್ತಿತ್ತು. ಆದರೆ ಹರಪನಹಳ್ಳಿ ಮತ್ತು ದಾವಣಗೆರೆ ಮಾರ್ಗವಾಗಿ ಆಗಮಿಸುವ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ವಾಹನಗಳು ಉಚ್ಚಂಗಿದುರ್ಗ ಗ್ರಾಮದೊಳಗೆ ಪ್ರವೇಶಿಸದಂತೆ ತಡೆಯಲಾಗಿದೆ. ಉಚ್ಚಂಗಿದುರ್ಗದ ಗ್ರಾಮ ಪಂಚಾಯಿತಿ, ತಾಲ್ಲೂಕು ಆಡಳಿತ, ಪೊಲೀಸ್‌ ಇಲಾಖೆ ಕಳೆದ ಒಂದು ವಾರದಿಂದ ಬ್ಯಾನರಗಳು, ಅಟೋದಲ್ಲಿ ಧ್ವನಿವರ್ಧಕ ಮೂಲಕ ಭಕ್ತರು ಆಗಮಿಸದಂತೆ ಜಾಗೃತಿ ಮೂಡಿಸಿದ್ದರು. ಆದರೂ ಮಂಗಳವಾರ ಭಕ್ತರು ಆಗಮಿಸುತ್ತಿದ್ದು ಅವರನ್ನು ತಡೆದು ವಾಪಾಸ್‌ ಕಳಿಸಲಾಗಿದೆ.

ಸಿಪಿಐ ಕೆ. ಕುಮಾರ್‌ ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪೊಲೀಸರಿಗೆ ಸೂಚನೆ ನೀಡಿದರು. ಅರಸೀಕೆರೆ ಠಾಣೆ ಪಿಎಸ್‌ಐ ಕಿರಣ್‌ಕುಮಾರ್‌ ನೇತೃತ್ವದಲ್ಲಿ ಪೊಲೀಸ್‌ ಪಡೆ ಉಚ್ಚಂಗಿದುರ್ಗ ಗ್ರಾಮದಲ್ಲಿ ಬೀಡು ಬಿಟ್ಟಿದೆ.

ಕೊರೊನ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಉಚ್ಚೆಂಗೆಮ್ಮನ ಜಾತ್ರೆಯನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ದೇವಸ್ಥಾನಕ್ಕೆ ಬರುವ ಭಕ್ತರನ್ನು ತಮ್ಮ ಊರುಗಳಿಗೆ ವಾಪಸ್‌ ಕಳುಹಿಸುತ್ತಿದ್ದೇವೆ. ಜನರು ಗುಂಪು ಸೇರುವುದನ್ನು ನಿಷೇಧ ಮಾಡಲಾಗಿದೆ. 144 ಸೆಕ್ಷನ್‌ ಜಾರಿಯಲ್ಲಿರುವುದರಿಂದ ಯಾರು ಅನವಶ್ಯಕವಾಗಿ ಹೊರಗಡೆ ತಿರುಗಾಡಬಾರದು. ಅನವಶ್ಯಕವಾಗಿ ಹೊರಗಡೆ ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಕೆ. ಕುಮಾರ್‌,
ವೃತ್ತ ನಿರೀಕ್ಷಕ

ಉಚ್ಚೆಂಗೆಮ್ಮನ ಜಾತ್ರೆ ನಡೆಯುವ ಹಾಲಮ್ಮನ ತೋಪಿನಲ್ಲಿ ಪ್ರತಿ ವರ್ಷ ಸುಮಾರು 500ಕ್ಕೂ ಹೆಚ್ಚು ಅಂಗಡಿ ಲೈಸೆನ್ಸ್‌ ವಿತರಿಸಲಾಗುತ್ತಿತ್ತು. ಆದರೆ ಈ ಭಾರಿ ಯಾವುದೇ ತರಹದ ಅಂಗಡಿಗಳನ್ನು ಹಾಕುವುದಕ್ಕೆ ಪಂಚಾಯ್ತಿಯಿಂದ ಪರವಾನಗಿ ನೀಡಿಲ್ಲ. ಕೊರೊನಾ ತಡೆಗೆ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ.
ಈ.ಉಮೇಶ್‌, ಪಿಡಿಒ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ