ಸೋರುವ ಕಟ್ಟಡ, ಓದುಗರಿಗೆ ಹಳೆ ಪುಸ್ತಕ!

Team Udayavani, Nov 3, 2019, 2:13 PM IST

ಹಗರಿಬೊಮ್ಮನಹಳ್ಳಿ: ಹಳೆ ಪುಸ್ತಕ, ದೂರ ಉಳಿದ ಆಧುನಿಕ ಸ್ಪರ್ಶ ಮತ್ತು ಸೋರುವ ಕಟ್ಟಡದಿಂದಾಗಿ ಪಟ್ಟಣದ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಕ್ಷೀಣಿಸಿದೆ. ಕಳೆದ 25 ವರ್ಷಗಳಿಂದ ಪಟ್ಟಣದ ದೇವಸ್ಥಾನಕ್ಕೆ ಸೇರಿದ ಬಾಡಿಗೆ ಕಟ್ಟಡದಲ್ಲಿ ಆಶ್ರಯ ಪಡೆದಿದ್ದ ಗ್ರಂಥಾಲಯ ಕಟ್ಟಡ, ಸ್ವಂತ ಕಟ್ಟಡವಿಲ್ಲದೆ ದೇವಾಲಯದಂತೆ ಇದ್ದ ಒಂದು ಹಾಲ್‌ ಗ್ರಂಥಾಲಯವಾಗಿತ್ತು. ತೀರಾ ಇತ್ತೀಚೆಗೆ 2007ರಲ್ಲಿ ಗ್ರಂಥಾಲಯಕ್ಕೆ ಹೊಸ ಕಟ್ಟಡ ನಿರ್ಮಾಣವಾಯಿತು. ಆದರೆ, ಹೊಸ ಕಟ್ಟಡವೇನೋ ಬಂತು, ಗ್ರಂಥಾಲಯ ಮಾತ್ರ ಇಂದಿಗೂ ಬದಲಾದ ವ್ಯವಸ್ಥೆಗೆ ಹೊಂದಿಕೊಂಡಿಲ್ಲ. ಹಳೆ ಪುಸ್ತಕಗಳಿಗೆ ಜೋತು ಬಿದ್ದಂತಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾದ ಪುಸ್ತಕಗಳು ದೊರೆಯುತ್ತಿಲ್ಲ.

ಹಳೆಯ 15ರಿಂದ 20ವರ್ಷದ ಹಿಂದಿನ ಪಠ್ಯಕ್ರಮ ಆಧರಿಸಿದ ಪುಸ್ತಕಗಳು ಮಾತ್ರ ದೊರೆಯುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಪುಸ್ತಕದ ಹುಡುಕಾಟ ನಡೆಸಿದರೆ ರೈಲ್ವೆ, ಪೊಲೀಸ್‌ ಮತ್ತು ಎಫ್‌ಡಿಸಿ ಪರೀಕ್ಷೆಗಳಿಗೆ ಅಗತ್ಯವಾದ ಅಪ್‌ಡೇಟೆಡ್‌ ಪುಸ್ತಕಗಳು ಲಭ್ಯವಿಲ್ಲ. ಗ್ರಂಥಾಲಯದಲ್ಲಿ ಒಟ್ಟು 28 ಸಾವಿರ ಪುಸ್ತಕಗಳು ಇವೆ ಎಂದು ಗ್ರಂಥಪಾಲಕರು ತಿಳಿಸುತ್ತಾರೆ. ಆದರೆ, ಈ ಪೈಕಿ ಬಹುತೇಕ ಪುಸ್ತಕಗಳು ಬಳಕೆಯಾಗದೆ ಮೂಲೆಗುಂಪಾಗಿವೆ. ಈ ಗ್ರಂಥಾಲಯ ಪರಿಕಲ್ಪನೆಯಿಂದ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಓದುಗರನ್ನು ಸೆಳೆಯುವ, ಗ್ರಂಥಾಲಯ ಸದುಪಯೋಗವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುವುದು ಸರಕಾರದ ಪ್ರಮುಖ ಹೊಣೆಯಾಗಿದೆ ಎಂದು ಎಸ್‌ ಎಫ್‌ಐ ಸಂಘಟನೆಯ ಅನಂತ ಹೇಳುತ್ತಾರೆ.

ಗೊಂದಲದ ಕಟ್ಟಡ: ವಿಚಿತ್ರವಾದ ಸಂಗತಿ ಎಂದರೆ ಗ್ರಂಥಾಲಯ ಕಟ್ಟಡದ ನಿವೇಶನ ಕುರಿತಂತೆ ಪುರಸಭೆ ಮತ್ತು ಗ್ರಂಥಾಲಯ ಅಧಿಕಾರಿಗಳು ಇಂದಿಗೂ ಗೊಂದಲದಲ್ಲಿದ್ದಾರೆ. ಗ್ರಂಥಾಲಯವನ್ನ ಅಭಿವೃದ್ಧಿಪಡಿಸುವುದಕ್ಕೆ ಈ ಗೊಂದಲವೇ ಪ್ರಮುಖ ಅಡ್ಡಿಯಾಗಿದೆ. ಗ್ರಂಥಾಲಯ ಕಟ್ಟಡ ರಸ್ತೆ ಮೇಲಿದೆ ಎಂಬುದು ಪುರಸಭೆ ಅಧಿಕಾರಿಗಳ ವಾದವಾದರೆ, ಗ್ರಾಮ ಪಂಚಾಯ್ತಿಯಿಂದ ಒದಗಿಸಿದ ನಿವೇಶನದಲ್ಲಿಯೇ ಗ್ರಂಥಾಲಯ ನಿರ್ಮಿಸಲಾಗಿದೆ ಎಂಬುದು ಗ್ರಂಥಾಲಯ ಇಲಾಖೆ ಅಧಿಕಾರಿಗಳ ಪ್ರಮುಖ ವಾದವಾಗಿದೆ. ಪರಸ್ಪರ ನಡುವಿನ ಗೊಂದಲದಿಂದಾಗಿ ಗ್ರಂಥಾಲಯದ ಮೇಲ್ದರ್ಜೆಗೇರಿಕೆ ಮರೀಚಿಕೆಯಾಗಿದೆ.

ಗ್ರಂಥಾಲಯ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಮಳೆಗಾಲದಲ್ಲಿ ಓದುಗರು ಗ್ರಂಥಾಲಯದಿಂದ ದೂರ ಉಳಿಯುವಂತಾಗಿದೆ. ಈಗಾಗಲೇ ಕಟ್ಟಡದ ಅಲ್ಲಲ್ಲಿ ಬಿರುಕು ಬಂದಿದ್ದು ನೂತನ ಕಟ್ಟಡದ ಅಗತ್ಯವಿದೆ. ಗ್ರಂಥಾಲಯದ ಒಳಭಾಗದಲ್ಲಿ ನಿರ್ಮಾಣವಾಗಿದ್ದ ಶೌಚಾಲಯವನ್ನು ಗ್ರಂಥಾಲಯ ಅ ಧಿಕಾರಿಗಳು ಸಂಗ್ರಹಣೆ ಕೊಠಡಿಯಾಗಿ ಬಳಸುತ್ತಿರುವುದು ಓದುಗರ ಬೇಸರಕ್ಕೆ ಕಾರಣವಾಗಿದೆ. ಹಳೆ ಪೀಠೊಪಕರಣಗಳ ಸಂಗ್ರಹಣೆಗೆ ಪ್ರತ್ಯೇಕ ಕೊಠಡಿ ಸೌಲಭ್ಯವಿಲ್ಲದೆ ಗ್ರಂಥಾಲಯ ಮೂಲೆಯೊಂದರಲ್ಲಿ ಒಟ್ಟಲಾಗಿದೆ.

 

-ಸುರೇಶ ಯಳಕಪ್ಪನವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ