ಹಂಪಿ ಉತ್ಸವ ಆಚರಣೆಗೆ ಸಿದ್ಧತೆ: ಡಿಸಿ

Team Udayavani, Feb 8, 2019, 10:33 AM IST

ಬಳ್ಳಾರಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಮಾರ್ಚ್‌ 2,3 ರಂದು ಎರಡು ದಿನಗಳ ಕಾಲ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಹಂಪಿ ಉತ್ಸವದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿರ್ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಸಲಹೆ ಸೂಚನೆ, ಮಾರ್ಗದರ್ಶನದ ಮೇರೆಗೆ ಹಂಪಿ ಉತ್ಸವದ ಕಾರ್ಯಕಾರಿ ಸಮಿತಿ ಸಭೆ ಕರೆದು ಆಯಾ ಸಮಿತಿಗಳ ಜವಾಬ್ದಾರಿ ಕುರಿತು ಚರ್ಚಿಸಲಾಯಿತು. ಎಲ್ಲ ಅಧಿಕಾರಿಗಳಿಗೂ ಕಳೆದ ಹಂಪಿ ಉತ್ಸವದ ಅನುಭವ ಇರುವುದರಿಂದ ಅದರಂತೆ ಕೆಲಸ ಮಾಡಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಲಾಯಿತು ಎಂದು ತಿಳಿಸಿದರು.

ಹಂಪಿ ಉತ್ಸವ ಆಚರಣೆಗಾಗಿ ಈ ಬಾರಿ ಪ್ರವಾಸೋದ್ಯಮ ಇಲಾಖೆಯಿಂದ 1.50 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1.60 ಕೋಟಿ ರೂ. ಸೇರಿ ಒಟ್ಟು 3.10 ಕೋಟಿ ರೂ. ಅನುದಾನ ಸರ್ಕಾರದಿಂದ ಬರಲಿದೆ. ಉತ್ಸವಕ್ಕೆ ಒಟ್ಟು 5.5 ಕೋಟಿ ರೂ.ವರೆಗೂ ವೆಚ್ಚವಾಗಲಿದ್ದು, ಉಳಿದ ಹೆಚ್ಚುವರಿ ಹಣವನ್ನು ಸ್ಥಳೀಯ ಸಂಪನ್ಮೂಲಗಳಿಂದ ಸಂಗ್ರಹಿಸಲಾಗುವುದು. ಈ ಬಾರಿ ನಾಲ್ಕು ವೇದಿಕೆ ನಿರ್ಮಿಸಲಾಗುತ್ತಿದೆ. ಈ ಪೈಕಿ ಎದುರು ಬಸವಣ್ಣ ಮಂಟಪ ಬಳಿ ಮುಖ್ಯವೇದಿಕೆ, ಇನ್ನುಳಿದ ಮೂರು ವೇದಿಕೆಗಳನ್ನು ವಿರೂಪಾಕ್ಷೇಶ್ವರ ದೇವಸ್ಥಾನ, ಕಡಲೆಕಾಳು, ಸಾಸಿವೆಕಾಳು ಗಣೇಶ ದೇವಸ್ಥಾನಗಳ ಬಳಿ ನಿರ್ಮಿಸಲಾಗುತ್ತದೆ. ಮಹಾನವಮಿ ದಿಬ್ಬದ ಬಳಿ ಕಳೆದ ವರ್ಷದಂತೆ ಈ ಬಾರಿಯೂ ರಾಯಲ್‌ ದರ್ಬಾರ್‌, ವಿಜಯನಗರ ಗತವೈಭವ, ತುಂಗಾ ಆರತಿ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ, ಅವರ ಸಲಹೆ ಮೇರೆಗೆ ಖರ್ಚು ವೆಚ್ಚಕ್ಕೆ ತಕ್ಕಂತೆ ಏರ್ಪಡಿಸಲಾಗುವುದು. ಹೆಲಿಕಾಪ್ಟರ್‌ ಕಂಪನಿಯವರು ಒಪ್ಪಿದರೆ ಹಂಪಿ ಬೈಸ್ಕೈ (ಆಗಸದಲ್ಲಿ ಹಂಪಿ) ಸಹ ಆಯೋಜಿಸಲಾಗುವುದು ಎಂದು ತಿಳಿಸಿದರು.

ಹಂಪಿ ಉತ್ಸವದಲ್ಲಿ ಈ ಬಾರಿ ಜಿಲ್ಲೆ ಮತ್ತು ರಾಜ್ಯ ಮಟ್ಟದ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು. ವೇದಿಕೆಗಳಿಗೆ ತಕ್ಕಷ್ಟು ಕಲಾವಿದರನ್ನು ಆಯ್ಕೆ ಮಾಡಲಾಗುವುದು. ಕಳೆದ ವರ್ಷದಂತೆ ಈ ಬಾರಿಯೂ ಉತ್ಸವದ ನಿಮಿತ್ತ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುವುದು. ಹೊಸಪೇಟೆ, ಕಂಪ್ಲಿ, ಪಾಪಿನಾಯಕನಹಳ್ಳಿ, ಕಡ್ಡಿರಾಂಪುರ, ಕಮಲಾಪುರದಿಂದ ಉಚಿತ ಬಸ್‌ಗಳು ಸಂಚರಿಸಲಿದ್ದು, ಉತ್ಸವಕ್ಕೆ ಆಗಮಿಸುವವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.

ಹಂಪಿ ಉತ್ಸವ ರಾಜ್ಯಮಟ್ಟದ ಕಾರ್ಯಕ್ರಮವಾದ್ದರಿಂದ ಉದ್ಘಾಟನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಎಸ್‌ಪಿ ಅರುಣ್‌ ರಂಗರಾಜನ್‌ ಮಾತನಾಡಿ, ಹಂಪಿ ಉತ್ಸವದಲ್ಲಿ ಕಳೆದ ಬಾರಿಯಂತೆ ಸೂಕ್ತ ಬಂದೋಬಸ್ತ್ ಮತ್ತು ಸಂಚಾರಿ ವ್ಯವಸ್ಥೆಯನ್ನು ವ್ಯವಸ್ಥೆ ಮಾಡಲಾಗುವುದು. ಈ ಕುರಿತಂತೆ ಹಂಪಿ ಹೆಚ್ಚುವರಿ ಎಸ್‌ಪಿ ಮತ್ತು ಪೊಲೀಸ್‌ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ. ಉತ್ಸವದಲ್ಲಿ ಯಾವುದೇ ಅವ್ಯವಸ್ಥೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ವಿಐಪಿಗೆ ಪ್ರತ್ಯೇಕ ಬಂದೋಬಸ್ತ್ ಮಾಡಲಾಗುವುದು. ಡ್ರೋಣ್‌ ಕ್ಯಾಮೆರಾವನ್ನು ಈ ಬಾರಿಯೂ ಸಹ ಭದ್ರತೆ ದೃಷ್ಟಿಯಿಂದ ಬಳಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್‌ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ನಾಲ್ಕು ವೇದಿಕೆ ನಿರ್ಮಾಣ
ಎದುರು ಬಸವಣ್ಣ ಮಂಟಪ ಬಳಿ ಮುಖ್ಯವೇದಿಕೆ, ಇನ್ನುಳಿದ ಮೂರು ವೇದಿಕೆಗಳನ್ನು ವಿರೂಪಾಕ್ಷೇಶ್ವರ ದೇವಸ್ಥಾನ, ಕಡಲೆಕಾಳು, ಸಾಸಿವೆಕಾಳು ಗಣೇಶ ದೇವಸ್ಥಾನಗಳ ಬಳಿ ನಿರ್ಮಾಣ.

ಹಂಪಿ ಉತ್ಸವ ಆಚರಣೆಗಾಗಿ ಈ ಬಾರಿ ಪ್ರವಾಸೋದ್ಯಮ ಇಲಾಖೆಯಿಂದ 1.50 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1.60 ಕೋಟಿ ರೂ. ಸೇರಿ ಒಟ್ಟು 3.10 ಕೋಟಿ ರೂ. ಅನುದಾನ ಸರ್ಕಾರದಿಂದ ಬರಲಿದೆ. ಉತ್ಸವಕ್ಕೆ ಒಟ್ಟು 5.5 ಕೋಟಿ ರೂ.ವರೆಗೂ ವೆಚ್ಚವಾಗಲಿದ್ದು, ಉಳಿದ ಹೆಚ್ಚುವರಿ ಹಣವನ್ನು ಸ್ಥಳೀಯ ಸಂಪನ್ಮೂಲಗಳಿಂದ ಸಂಗ್ರಹಿಸಲಾಗುವುದು.
•ಡಾ| ರಾಮ್‌ ಪ್ರಸಾತ್‌ ಮನೋಹರ್‌, ಜಿಲ್ಲಾಧಿಕಾರಿ.


ಈ ವಿಭಾಗದಿಂದ ಇನ್ನಷ್ಟು

  • ಬಳ್ಳಾರಿ: ಉಪಚುನಾವಣೆ ನಂತರ ಆದ ರಾಜಕೀಯ ಬದಲಾವಣೆಯಿಂದ ಉಪಮುಖ್ಯಮಂತ್ರಿ ಸ್ಥಾನ ಕೈ ತಪ್ಪುವುದನ್ನು ಮನಗಂಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಈಗ ಖಾತೆ ಬದಲಾವಣೆಗೆ...

  • ಮರಿಯಮ್ಮನಹಳ್ಳಿ: ಮಕ್ಕಳಿಗೆ ಚಟುವಟಿಕೆ ಮೂಲಕ ಶಿಕ್ಷಣ ನೀಡಿದರೆ ಕಲಿಕೆ ಸುಲಭವಾಗುತ್ತದೆ ಎಂದು ಹೊಸಪೇಟೆ ಕ್ಷೇತ್ರ ಶಿಕ್ಷಣಾ ಧಿಕಾರಿ ಎಲ್‌.ಡಿ. ಜೋಷಿ ಹೇಳಿದರು....

  • ಸಂಡೂರು: ಮದುವೆಗಳು ವೈಭವೀಕರಣಗೊಳ್ಳದೆ  ಮಾನ್ಯವಾಗಿ, ಸಾಮೂಹಿಕವಾಗಿ ಮಾಡಿಕೊಳ್ಳುವ ಮೂಲಕ ಬಸವತತ್ವದ ಪಾಲನೆಯಾಗುವುದರ ಜೊತೆಗೆ ಆರ್ಥಿಕ ಉಳಿತಾಯವಾಗಿ ಸಮಾಜದ...

  • ಬಳ್ಳಾರಿ: ಮಾರಣಾಂತಿಕವಾದ ಗಂಟಲುಮಾರಿ ರೋಗ ರಾಜ್ಯದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತಿದೆ. ಇದರ ನಿವಾರಣೆಗೆ 5ರಿಂದ 16 ವರ್ಷದ ಮಕ್ಕಳಿಗೆ ಡಿಪಿಟಿ ಹಾಗೂ...

  • ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದಲ್ಲಿ ಕೆರೆ ನೀರು ಪೋಲಾಗುತ್ತಿದೆ. ಮಾಚಿಹಳ್ಳಿ ಕೊರಚರಹಟ್ಟಿ...

ಹೊಸ ಸೇರ್ಪಡೆ