ಮತ ಎಣಿಕೆಗೆ ಸಿದ್ಧತೆ ಪೂರ್ಣ: ಡಿಸಿ

•ಎಣಿಕೆ ಕಾರ್ಯಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ •ಗೆದ್ದ ಅಭ್ಯರ್ಥಿಗಳು ಮೆರವಣಿಗೆ ನಡೆಸುವಂತಿಲ್ಲ

Team Udayavani, May 22, 2019, 7:53 AM IST

ಬಳ್ಳಾರಿ: ಜಿಲ್ಲಾ ಚುನಾವಣಾಧಿಕಾರಿ ರಾಮ್‌ ಪ್ರಸಾತ್‌ ಮನೋಹರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಳ್ಳಾರಿ: ನಗರದ ರಾವ್‌ ಬಹದ್ದೂರ್‌ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ ಮೇ 23 ರಂದು ಬಳ್ಳಾರಿ ಲೋಕಸಭೆ ಕ್ಷೇತ್ರದ ಮತ ಎಣಿಕೆ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಡಿಸಿ, ಜಿಲ್ಲಾ ಚುನಾವಣಾಧಿಕಾರಿ ಡಾ. ವಿ.ರಾಮ್‌ ಪ್ರಸಾತ್‌ ಮನೋಹರ್‌ ಹೇಳಿದರು.

ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿರುವ ಆರ್‌ವೈಎಂಇಸಿ ಕಾಲೇಜಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರದ ಮತದ ಎಣಿಕೆ ಕಾರ್ಯಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ಎಆರ್‌ಒ ಟೇಬಲ್, ಎಣಿಕೆ ಕಾರ್ಯಕ್ಕೆ 14 ಟೇಬಲ್ ಸೇರಿ ಒಟ್ಟು 15 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಅಂದು ಬೆಳಗ್ಗೆ 8 ಗಂಟೆಗೆ ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, 8.30ಕ್ಕೆ ಇವಿಎಂ ಯಂತ್ರಗಳಲ್ಲಿನ ಮತಗಳ ಎಣಿಕೆ ಕಾರ್ಯ ಚಾಲನೆ ಪಡೆದುಕೊಳ್ಳಲಿದೆ. ಅಂದು ಸಂಜೆ 5 ರಿಂದ 6 ಗಂಟೆಯೊಳಗೆ ಎಣಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

14 ಟೇಬಲ್ಗಳಲ್ಲಿ ಎಣಿಕೆ: ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಹಡಗಲಿ 218 ಮತಗಟ್ಟೆ 16 ಸುತ್ತು, ಹ.ಬೊ.ಹಳ್ಳಿ 252 ಮತಗಟ್ಟೆ 18 ಸುತ್ತು, ವಿಜಯನಗರ 247 ಮತಗಟ್ಟೆಗೆ 18 ಸುತ್ತು, ಕಂಪ್ಲಿ 239 ಮತಗಟ್ಟೆ 17 ಸುತ್ತು, ಬಳ್ಳಾರಿ ಗ್ರಾಮೀಣ 234 ಮತಗಟ್ಟೆ 17 ಸುತ್ತು, ಬಳ್ಳಾರಿ ನಗರ 243 ಮತಗಟ್ಟೆ 17 ಸುತ್ತು, ಸಂಡೂರು 249ಕ್ಕೆ 18, ಕೂಡ್ಲಿಗಿ 243 ಮತಗಟ್ಟೆಗೆ 17 ಸುತ್ತು ಸೇರಿ ಒಟ್ಟು 1925 ಮತಗಟ್ಟೆಗಳಿದ್ದು, 112 ಟೇಬಲ್ಗಳಲ್ಲಿ ಒಟ್ಟು 138 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 17 ಸಿಬ್ಬಂದಿ: ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆಂದು 14 ಜನ ಸಿಬ್ಬಂದಿಗಳು ಅವಶ್ಯಕತೆ ಇದ್ದು, ಕಾಯ್ದಿರಿಸಲಾದ ಮೂರು ಜನ ಮೇಲ್ವಿಚಾರಕರು ಸೇರಿ ಒಟ್ಟು 17ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 136 ಜನ ಎಣಿಕೆ ಮೇಲ್ವಿಚಾರಕರನ್ನು, ಎಣಿಕೆ ಸಹಾಯಕರು, ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಗ್ರೂಪ್‌ ಡಿ ಸಿಬ್ಬಂದಿಗಳು ಸೇರಿ ಒಟ್ಟು 112 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ವಿಧಾನಸಭಾ ಕ್ಷೇತ್ರಕ್ಕೆ 2ರಂತೆ 16 ಟ್ಯಾಬುಲೇಟರ್‌, ಎಣಿಕೆ ಕೊಠಡಿಗಳಲ್ಲಿ ವೀಡಿಯೋ ಮಾಡಲು 8 ವೀಡಿಯೋಗ್ರಾಫರ್‌, ಕೇಂದ್ರದ ಹೊರಗೆ ವೀಡಿಯೋ ಮಾಡಲು 2 ವೀಡಿಯೋ ಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ. ಕ್ಷೇತ್ರಕ್ಕೆ 2 ಕಂಪ್ಯೂಟರ್‌ ಆಪರೇಟರ್‌ಗಳಂತೆ 16 ಕಂಪ್ಯೂಟರ್‌ ಆಪರೇಟರ್‌ಗಳು, ಕ್ಷೇತ್ರಕ್ಕೆ ಒಬ್ಬರಂತೆ 8 ಸೀಲಿಂಗ್‌ ಸೂಪರ್‌ವೈಜರ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಚುನಾವಣಾಕಾರಿ ರಾಮ್‌ ಪ್ರಸಾತ್‌ ಮನೋಹರ್‌ ವಿವರಿಸಿದರು.

ಅಂಚೆ ಮತಗಳ ಎಣಿಕೆಗೆ 3 ಟೇಬಲ್; ಅಂಚೆ ಮತಗಳ ಎಣಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಈವರೆಗೆ ಒಟ್ಟು 3217 ಅಂಚೆ ಮತಗಳು ಬಂದಿವೆ. ಅಂಚೆ ಮತಗಳನ್ನು ಕಳುಹಿಸಿಕೊಡಲು ಮೇ 23 ರಂದು ಬೆಳಗ್ಗೆ 7.59 ಗಂಟೆಯವರೆಗೂ ಅವಕಾಶ ಕಲ್ಪಿಸಲಾಗಿದೆ. ಈ ಮತಗಳ ಎಣಿಕೆಗಾಗಿ ಪ್ರತ್ಯೇಕವಾಗಿ ಮೂರು ಟೇಬಲ್ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಟೇಬಲ್ಗೆ ಒಬ್ಬ ಮೇಲ್ವಿಚಾರಕರು, ಇಬ್ಬರು ಸಹಾಯಕರನ್ನು ನೇಮಕ ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೆ 14+1 ರಂತೆ ಒಟ್ಟು 120 ಏಜೆಂಟರುಗಳನ್ನು ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಅಂಚೆ ಮತಗಳಿಗಾಗಿ 3 ಏಜೆಂಟ್ರನ್ನು ನೇಮಕ ಮಾಡಬಹುದಾಗಿದೆ ಎಂದರು.

ಲಾಟರಿ ಮೂಲಕ ಇವಿಎಂ ಆಯ್ಕೆ: ಚುನಾವಣಾ ಆಯೋಗದ ನಿರ್ದೇಶನದಂತೆ ಇವಿಎಂ ಯಂತ್ರಗಳ ಮತ ಎಣಿಕೆ ಮುಗಿದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದ 5 ಇವಿಎಂ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗ್ಳನ್ನು ಎಣಿಕೆ ಮಾಡಲಾಗುತ್ತದೆ. ಇದಕ್ಕಾಗಿ ಲಾಟರಿ ವ್ಯವಸ್ಥೆ ಮಾಡಲಾಗಿದೆ. ಇವಿಎಂ ಯಂತ್ರಗಳ ಸಂಖ್ಯೆಗಳನ್ನು ಬರೆದು ಆಯಾ ವಿಧಾನಸಭಾ ಕ್ಷೇತ್ರಗಳ ಏಜೆಂಟ್ರಿಂದಲೇ ಚೀಟಿಗಳನ್ನು ತೆಗೆಸಲಾಗುತ್ತದೆ. ಚೀಟಿಯಲ್ಲಿ ಸಂಖ್ಯೆಯುಳ್ಳ ಇವಿಎಂ ಯಂತ್ರದಲ್ಲಿನ ಮತಗಳೊಂದಿಗೆ ವಿವಿಪ್ಯಾಟ್‌ನ ಸ್ಲೀಪ್‌ಗ್ಳನ್ನು ತಾಳೆ ಹಾಕಲಾಗುತ್ತದೆ. ತಾಳೆಯಾಗದಿದ್ದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕೊನೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಅಲ್ಲದೇ, ಮತದಾನ ಪ್ರಕ್ರಿಯೆ ಆರಂಭದಲ್ಲಿ ಮಾಡಲಾಗಿದ್ದ ಮಾರ್ಕ್‌ಪೋಲ್ ಮತಗಳನ್ನು ಕ್ಲಿಯರ್‌ ಮಾಡದಿದ್ದಲ್ಲಿ ವಿವಿಪ್ಯಾಟ್ ಸ್ಲಿಪ್‌ಗ್ಳನ್ನು ಎಣಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಈ ವಸ್ತುಗಳು ನಿಷೇಧ: ಮತ ಎಣಿಕೆ ಕೇಂದ್ರದಲ್ಲಿ ಬೆಂಕಿಗೆ ಆಹುತಿಯಾಗಬಹುದಾದ ವಸ್ತುಗಳು ಅಥವಾ ಸಾಮಗ್ರಿಗಳು, ಚೂಪಾದ ಲೋಹದ ಅಥವಾ ಗಾಜಿನ ವಸ್ತುಗಳು, ಬೆಂಕಿ ಪೊಟ್ಟಣ, ಸಿಗರೇಟ್, ಲೈಟರ್‌, ತಂಬಾಕು, ಗುಟ್ಕಾ ಇತ್ಯಾದಿ, ಆಯುಧಗಳು, ರಾಡ್‌, ಕೋಲುಗಳು, ಲೋಹದ ಚೈನ್‌ಗಳು, ಪೆನ್‌ ಬಾಕುಗಳು, ಉಗುರು ಕತ್ತರಿ, ಶಸ್ತ್ರಾಸ್ತ್ರ, ಮದ್ದುಗುಂಡು, ಸ್ಫೋಟಕಗಳು, ಪಟಾಕಿಗಳು, ರೇಜರ್‌ ಬ್ಲೇಡ್‌ಗಳು, ಗುಂಡು ಸೂಜಿ, ಸೂಜಿಗಳು, ಕತ್ತರಿ, ಸಿರಿಂಜ್‌ಗಳು, ಕನ್ನಡಿಗಳು, ನೀರಿನ ಬಾಟಲಿಗಳು, ಸೀಮೆ ಎಣ್ಣೆ, ಪೆಟ್ರೋಲ್, ಡೀಸೆಲ್, ತೈಲಗಳು, ಯಾವುದೇ ತರಹದ ದ್ರವಗಳು, ಸ್ಪಿರಿಟ್, ಬಣ್ಣದ ಪುಡಿ, ಯಾವುದೇ ತರಹದ ಮಸಾಲಾ ಪುಡಿ, ದ್ರವ ಶಾಯಿ, ಆ್ಯಸಿಡ್‌, ಗ್ಯಾಸ್‌ ಸಿಲಿಂಡರ್‌, ಒಲೆ, ಹೀಟರ್‌, ಮೊಬೈಲ್ ಫೋನ್‌, ಪೇಜರ್‌ಗಳು, ಕ್ಯಾಮರಾ (ಸ್ಟಿಲ್/ವಿಡಿಯೋ), ಪೆಪ್ಪರ್‌ ಸ್ಪ್ರೇ, ಏರೋಸೋಲ್ ಸ್ಪ್ರೇ, ಧೂಮಪಾನ ಮಾಡುವುದು. ಜೋರಾಗಿ ಮಾತನಾಡುವುದನ್ನು ಪದೇ ಪದೇ ಹೊರಗೆ ಒಳಗೆ ಹೊರಗೆ ಓಡಾಡುವುದನ್ನು ಮತ್ತು ಅನಗತ್ಯ ವಿಷಯಗಳ ಚರ್ಚೆ ಮಾಡುವುದು. ಎಣಿಕೆ ಸಿಬ್ಬಂದಿ ಗಮನವನ್ನು ಬೇರೆ ಕಡೆ ಸೆಳೆಯುವುದು ನಿಷೇಧಿಸಲಾಗಿದೆ ಎಂದು ವಿವರಿಸಿದರು.

ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಆರ್‌ವೈಎಂಇಸಿ ಕಾಲೇಜಿನಲ್ಲಿ ಮೇ 23 ರಂದು ನಡೆಯಲಿರುವ ಮತ ಎಣಿಕೆ ಕಾರ್ಯಕ್ಕೆ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದಕ್ಕಾಗಿ ಪೊಲೀಸ್‌ ಇಲಾಖೆಯಿಂದ 6 ಡಿವೈಎಸ್‌ಪಿ, 16 ಸಿಪಿಐ, 19 ಪಿಎಸ್‌ಐ, ಎಚ್ಸಿ, ಪಿಸಿ, ಎಎಸ್‌ಐ ಸೇರಿ 490 ಸಿಬ್ಬಂದಿ, 4 ಕೆಎಸ್‌ಆರ್‌ಪಿ ತುಕಡಿ, 4 ಡಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಜಿಲ್ಲೆಯಾದ್ಯಂತ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ಪಿಕೆಂಟಿಂಗ್‌ ಪಾಯಿಂಟ್‌ಗಳಲ್ಲಿ ಭದ್ರತೆ ಒದಗಿಸಲಾಗಿದೆ. ಮತ ಎಣಿಕೆ ನಿಮಿತ್ತ ಮೇ 22 ರಂದು ಮಧ್ಯರಾತ್ರಿ 12 ರಿಂದ ಮೇ 23 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ, ಸಾಗಣೆ ನಿಷೇಧಿಸಲಾಗಿದೆ. ಜತೆಗೆ 144 ಕಾಯ್ದೆ ಜಾರಿಗೊಳಿಸಲಾಗಿದೆ. ಇನ್ನು ಗೆದ್ದ ಅಭ್ಯರ್ಥಿಗಳು ಮೆರವಣಿಗೆ ನಡೆಸುವಂತಿಲ್ಲ. ಒಂದು ವೇಳೆ ನಡೆಸಿದಲ್ಲಿ ಎಂಸಿಸಿ ಉಲ್ಲಂಘನೆಯಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಈ ವೇಳೆ ನಗರ ಡಿವೈಎಸ್‌ಪಿ ಜನಾರ್ದನ್‌, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಸಹಾಯಕ ಆಯುಕ್ತ ರಮೇಶ್‌ ಕೋನರೆಡ್ಡಿ ಇತರೆ ಸಿಬ್ಬಂದಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ