ಅಧಿಕಾರಿಗಳ ವರ್ಗಾವಣೆಗೆ ಆಗ್ರಹ
Team Udayavani, Apr 10, 2021, 8:28 PM IST
ಸಂಡೂರು: ತಾಲೂಕು ಕೇಂದ್ರದ ಕಂದಾಯ ಇಲಾಖೆ ಒಳಗೊಂಡು ಎಲ್ಲ ಇಲಾಖೆಯಲ್ಲಿ ಕಳೆದ 10-15 ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಧರ್ಮಾನಾಯ್ಕ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು 10ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲದಗೊಂಡು ಅವರು ಮಾತನಾಡಿದರು. ಪಟ್ಟಣದ ವಿವಿಧ ಇಲಾಖೆಗಳಲ್ಲಿ ಒಬ್ಬ ಅಧಿಕಾರಿಯೇ 10 ರಿಂದ 15 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಅಡಳಿತ ನಿಧಾನಕ್ಕೆ ಮತ್ತು ಇತರ ರೀತಿಯ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತಿದೆ.
ಆದ್ದರಿಂದ ತಕ್ಷಣ ಅವರನ್ನು ವರ್ಗಾವಣೆ ಮಾಡುವ ಮೂಲಕ ಅಡಳಿತ ಸುಧಾರಣೆ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಕರವೇ ಅಧ್ಯಕ್ಷ ಪರಶುರಾಮ ಟಿ. ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು ದಶಕಗಳಿಂದ ಒಂದಡೆ ಇರುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂ ತಾಗುತ್ತದೆ. ಮೇಲಾಧಿಕಾರಿಗೆ, ಸಿಬ್ಬಂದಿ ನೌಕರರನ್ನು ಬೇರಡೆ ವರ್ಗಾವಣೆ ಮಾಡದೇ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸಾರ್ವಜನಿಕರಿಗೆ ಇದರಿಂದ ವಿಪರೀತ ತೊಂದರೆ, ಕಷ್ಟಗಳು ಉಂಟಾಗಿವೆ ಎಂದರು. ಕರವೇ ಮುಖಂಡ ಕೆ.ಆರ್. ಕುಮಾರಸ್ವಾಮಿ, ರೈತ ಸಂಘದ ಮುಖಂಡ ಶ್ರೀಪಾದಸ್ವಾಮಿ, ಜಿಲ್ಲಾ ರೈತ ಸಂಘದ ಮುಖಂಡ ಎಂ.ಎಲ್.ಕೆ. ನಾಯ್ಡು, ಧರ್ಮನಾಯ್ಕ, ವಿವಿಧ ಸಂಘಟನೆಗಳು ಸೇರಿ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ್ ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.