ರೈತರ ಜಮೀನಿಗೆ ಸಮರ್ಪಕ ನೀರು ಹರಿಸಲು ಆಗ್ರಹ
Team Udayavani, Jul 10, 2018, 4:09 PM IST
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಎಚ್ ಎಲ್‌ಸಿ ಕಾಲುವೆಯ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ತಾಲೂಕಿನ ಕೋಳೂರು ಕ್ರಾಸ್‌ನಲ್ಲಿ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬಳ್ಳಾರಿ, ಕುರುಗೋಡು ತಾಲೂಕಿನ ಕೊನೆ ಭಾಗದ ರೈತರು ಬೆಳೆದ ಬೆಳೆಗಳಿಗೆ ಎಚ್‌ಎಲ್‌ಸಿಯಿಂದ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಇದರಿಂದ ರೈತರು ಎಲ್‌ಎಲ್‌ಸಿ ಕಾಲುವೆಯ ಬಸಿ ನೀರನ್ನು ಜಮೀನಿಗೆ ಹರಿಸಿಕೊಂಡು ಬೆಳೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದಕ್ಕೂ ಅಧಿಕಾರಿಗಳು ಅಡ್ಡಿಯಾಗಿ ತೊಂದರೆ ಉಂಟುಮಾಡುತ್ತಿದ್ದಾರೆ.
ಇದರಿಂದ ಬೆಳೆಗಳು ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ. ಇನ್ನೂ ಕೆಲ ರೈತರು ಜಮೀನಿನಲ್ಲಿ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಧಿಕಾರಿಗಳು ಗಮನಹರಿಸಿ ಎಚ್‌ಎಲ್ ಸಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ರೈತರು ಬೆಳೆಗಳನ್ನು ಬೆಳೆಯಲು ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಡೆಯಬೇಕು. ಕೋಳೂರು ಏತ ನೀರಾವರಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ನಗರದ ಡಿಸಿ ಕಚೇರಿಗೆ ಆಗಮಿಸಿದ ಪ್ರತಿಭಟನಾನಿರತರು ಕೆಲಹೊತ್ತು ಜಿಲ್ಲಾಡಳಿತದ ವಿರುದ್ಧ ವಿವಿಧ ಘೋಷಣೆ ಕೂಗಿದರು. ಬಳಿಕ ಡಿಸಿ ರಾಮ್‌ಪ್ರಸಾತ್ ಮನೋಹರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತರಾದ ಮಹೇಂದ್ರ, ಕೆ.ಮಲ್ಲಯ್ಯ, ರಾಘವೇಂದ್ರ, ಹನುಮಂತ ರೆಡ್ಡಿ, ಇ.ನರಸಪ್ಪ, ನಾಗಪ್ಪ, ಕೆ.ಎಂ. ಬಸವರಾಜ ಸ್ವಾಮಿ, ಕಾಸಿಂಸಾಬ್, ಜಿ.ಮರಿಸ್ವಾಮಿ, ಬಿ.ಮೆಹಬೂಬ್ ಬಾಷಾ, ಸೀತಾರಾಮರೆಡ್ಡಿ, ಕೆ. ನಾರಾಯಣರೆಡ್ಡಿ ಇತರರಿದ್ದರು.