ಮನುವಾದಿಗಳ ಕಪಿಮುಷ್ಟಿಯಲ್ಲಿ ಬಿಜೆಪಿ

Team Udayavani, Mar 8, 2019, 7:14 AM IST

ಹರಪನಹಳ್ಳಿ: ಕಾಂಗ್ರೆಸ್‌ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ. ಹಾಗಾಗಿ ಮುಂಬರುವ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವ್ಯಕ್ತಿ, ಜಾತಿ ಮತ್ತು ಧರ್ಮ ನಿಂದನೆ ಮಾಡಬೇಡಿ.

ಇದು ಕಾಂಗ್ರೆಸ್‌ ಪಕ್ಷದ ಸಂಸ್ಕೃತಿ ಅಲ್ಲ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ದಾವಣಗೆರೆ ಜಿಲ್ಲಾ ಲೋಕಸಭಾ ಚುನಾವಣಾ ಉಸ್ತುವಾರಿ ವಿಜಯ್‌ಕುಮಾರ್‌ ಕಾರ್ಯಕರ್ತರಿಗೆ ಸಲಹೆ ನೀಡಿದರು. ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಆಯೋಜಿಸಿದ್ದ ದಾವಣಗೆರೆ ಲೋಕಸಭಾ ಚುನಾವಣೆ-2019ರ ಸಿದ್ಧತಾ ಶಿಬಿರದಲ್ಲಿ ಅವರು ಮಾತನಾಡಿದರು.

ಬಿಜೆಪಿ ಒಂದು ಕೋಮುವಾದಿ ಪಕ್ಷವಾಗಿದ್ದು, ಮನುವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕಿದೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಶ್ರೀಮಂತರ ಒಲೈಕೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್‌ ಸುಳ್ಳುಗಾರ. ಆರ್‌ಎಸ್‌ಎಸ್‌ ಕಪಿಮುಷ್ಠಿಯಲ್ಲಿ ಸಿಲುಕಿರುವ ಮೋದಿ ಆರ್‌ಎಸ್‌ಎಸ್‌ ಅಣತೆಯಂತೆ ನಡೆದುಕೊಳ್ಳುತ್ತಾರೆ.

ದೇಶದಲ್ಲಿ ಭಾವನಾತ್ಮಕವಾಗಿ ಮನಸ್ಸು ಮತ್ತು ಸಮಾಜಗಳನ್ನು ಹೊಡೆದು ಅಧಿಕಾರ ಹಿಡಿಯಲು ಅವಣಿಸುತ್ತಿದ್ದಾರೆ. ಇನ್ನೊಮ್ಮೆ ಮೋದಿ ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ ಕಮ್ಯೂನಿಯಲ್‌ ಅಲ್ಲ, ಕ್ರಿಮಿನಲ್‌ ಗಳಾಗುತ್ತಾರೆ. ಮೋದಿ ಮತ್ತು ಅಮೀತ್‌ ಶಾ ಅವರು ಎಲ್ಲವನ್ನು ದಾರಿ ತಪ್ಪಿಸುತ್ತಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಧಕ್ಕೆ ಉಂಟಾಗಲಿದೆ, ಎಚ್ಚರವಾಗಿರಿ ಎಂದರು.

ತಳಸಮುದಾಯಗಳನ್ನು 500 ವರ್ಷಗಳ ಕಾಲ ಕತ್ತಲಲ್ಲಿಟ್ಟವರು ಇಂದು ಸಂವಿಧಾನ ಬದಲಾಯಿಸುವ ಸಂಚು ರೂಪಿಸಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಎಂಬ ಸಂಸ್ಕಾರವಂತ ಮೇಲ್ಜಾತಿಗೆ ಸೇರಿದವರು ಸಂವಿಧಾನ ಬದಲಾಯಿಸುತ್ತೀವಿ ಎನ್ನುತ್ತಾರೆ. ಆದರೆ ಅದೇ ಸಂವಿಧಾನದಿಂದ ರಕ್ಷಣೆ ಪಡೆದುಕೊಳ್ಳುತ್ತಾರೆ. ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಸುಳ್ಳಿನ ಮೇಲೆಯೇ ಇಂದು ದೇಶ ಮುನ್ನೆಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷದ ಬುನಾದಿಯಾಗಿದ್ದು, ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡಬೇಡಿ. ಮುನಿಸಿಕೊಂಡವರನ್ನು ಸರಿಪಡಿಸುವ ಕೆಲಸವನ್ನು ಮುಖಂಡರು ಮಾಡಬೇಕು. ಮಹಿಳೆಯರಿಗೆ ಹೆಚ್ಚಿನ ಅದ್ಯತೆ ನೀಡಬೇಕು.

ಕ್ರಿಯಾಶೀಲವಾಗಿ ಪಕ್ಷ ಸಂಘಟಿಸುವವರನ್ನು ಬೆನ್ನುತಟ್ಟಿ ಹುರಿದುಂಬಿಸಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಪಕ್ಷದ ಮುಖಂಡರ ಜೊತೆ ಚರ್ಚಿಸಿ ಸರಿಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
 
ಕಾಂಗ್ರೆಸ್‌ ನಾಯಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ನಮ್ಮ ಸಹೋದರ ಎಂ.ಪಿ.ರವೀಂದ್ರರ ಅವರ ಆಕಾಲಿಕ ನಿಧನ ನಮಗೆ ತೀವ್ರ ನೋವನ್ನುಂಟು ಮಾಡಿತ್ತು. ಇದರಿಂದ ಪಕ್ಷ ಸಂಘಟನೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದೇವು. ಆದರೆ ಲೋಕಸಭಾ ಚುನಾವಣೆಗೆ ನಾವು ಹೆದರುವುದಿಲ್ಲ, ನಾನು ನಮ್ಮ ಪಕ್ಷದ ಕಾರ್ಯಕರ್ತರ ಜೊತೆ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವುದಲ್ಲಿ ಅನುಮಾನವೇ ಇಲ್ಲ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಎಚ್‌.ಎಂ.ರಾಜು, ಮಹಾಬಲೇಶ್‌ ಕಾರ್ಯಕರ್ತರಿಗೆ ತರಬೇತಿ ನೀಡಿದರು. ಅರಸೀಕೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಮಂಜುನಾಥ್‌, ಜಿಪಂ ಸದಸ್ಯ ಎಚ್‌.ಬಿ.ಪರಶುರಾಮಪ್ಪ, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಉದಯಶಂಕರ್‌ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಕೆ.ಎಂ.ಬಸವರಾಜಯ್ಯ, ಡಿ.ಅಬ್ದುಲ್‌ ರಹಿಮಾನಸಾಬ್‌, ಟಿ.ವೆಂಕಟೇಶ್‌, ಮುತ್ತಿಗಿ ಜಂಬಣ್ಣ, ಹುಲಿಕಟ್ಟಿ ಚಂದ್ರಪ್ಪ, ಒ.ರಾಮಪ್ಪ, ನೀಲಗುಂದ ವಾಗೀಶ್‌, ಸಿ.ಜಾವೀದ್‌, ಹಲಗೇರಿ ಮಂಜಪ್ಪ, ಮಲ್ಲಿಕಾರ್ಜುನಯ್ಯ, ಅರುಣ್‌ ಪೂಜಾರ್‌, ಡಿ.ರಾಜಕುಮಾರ್‌, ಎಂ.ಟಿ.ಬಸವನಗೌಡ, ಕೆಂಚನಗೌಡ, ಜಯಲಕ್ಷ್ಮೀ, ನಜೀರ್‌ ಅಹ್ಮದ್‌, ರೋಪ್‌ಸಾಬ್‌, ಹಳ್ಳಿಕೇರಿ ರಾಜಪ್ಪ, ಎಪಿಎಂಸಿ ಭೀರಪ್ಪ, ಮತ್ತಿಹಳ್ಳಿ ಅಜ್ಜಪ್ಪ, ಕಿತ್ತೂರು ಕೋಟ್ರಪ್ಪ, ಪ್ರಕಾಶ್‌ ಪಾಟೀಲ್‌, ಎಸ್‌.ಜಾಕೀರ ಹುಸೇನ್‌, ಎಲ್‌. ಮಂಜ್ಯನಾಯ್ಕ, ಮತ್ತೂರು ಬಸವರಾಜ್‌, ಜೀಶಾನ್‌,
ಎಲ್‌.ಬಿ.ಹಾಲೇಶನಾಯ್ಕ, ಜಿ.ಬಿ.ಟಿ.ಮಹೇಶ್‌, ತಾವರ್ಯನಾಯ್ಕ, ರಾಯದುರ್ಗದ ವಾಗೀಶ್‌ ಇನ್ನಿತರರಿದ್ದರು.

ರಾಹುಲ್‌ಗಾಂಧಿ ಬಂಗಾರ ರಾಹುಲ್‌ಗಾಂಧಿ  ಬಗ್ಗೆ ಬಿಜೆಪಿಯವರು ಕೀಳಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಬಂಗಾರ ಇದ್ದಂತೆ. ಬಂಗಾರ ಉಪ್ಪರಿಗೆ ಅಥವಾ ತಿಪ್ಪೆ ಎಲ್ಲಿಯೇ ಇದ್ದರೂ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ದೇಶಕೋಸ್ಕರ ಗಾಂಧಿ ಕುಟುಂಬ ದುಡಿದಿದೆ. ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಮಾಡುತ್ತೀವಿ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ.
 ವಿಜಯಕುಮಾರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ